

ಸುವಾಸನೆಯುಕ್ತ ಹಾಲನ್ನು ಡೈರಿ ಉತ್ಪನ್ನ ಎಂದು ಪರಿಗಣಿಸಬೇಕೆ ಹೊರತು ಅದು ಪಾನೀಯವಲ್ಲ. ಹೀಗಾಗಿ, ಅದಕ್ಕೆ ಶೇ.12ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸುವ ಬದಲು ಶೇ.5ರಷ್ಟು ಮಾತ್ರ ವಿಧಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.
ದೊಡ್ಲಾ ಡೈರಿ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠವು ದೊಡ್ಲಾ ಕಂಪನಿ ಪಾವತಿ ಮಾಡಿರುವ ತೆರಿಗೆ ಹಣವನ್ನು ಮರು ಪಾವತಿಸುವಂತೆ ನಿರ್ದೇಶಿಸಿದೆ.
"ಸುವಾಸನೆಯುಕ್ತ ಹಾಲು ಹೊಂದಿರುವ ಪಾನೀಯಗಳು ಉದ್ದೇಶಿಸಲಾದ ಜಿಎಸ್‌ಟಿ ಸುಂಕದ ಶೀರ್ಷಿಕೆ ಅಡಿಯಲ್ಲಿ ಬರುತ್ತವೆಯೇ ಅಥವಾ ಹಾಲು ಮತ್ತು ಕೆನೆ ಸೇರಿಸಿದ ಸಕ್ಕರೆ ಅಥವಾ ಸಿಹಿಕಾರಕಗಳನ್ನು ಒಳಗೊಂಡಿರುವ ವರ್ಗದ ಅಡಿಯಲ್ಲಿ ಬರುತ್ತದೆಯೇ ಎಂದು ಪರಿಶೀಲಿಸಿದ ನ್ಯಾಯಾಲಯವು “ಸುವಾಸನೆಯುಕ್ತ ಹಾಲು ತನ್ನ ಮೂಲ ಸ್ವರೂಪದ ಹಾಲಾಗಿಯೇ ಉಳಿದುಕೊಳ್ಳುತ್ತದೆ. ಆದ್ದರಿಂದ, ಸುಂಕದ ಶೀರ್ಷಿಕೆ 0402 ರ ಅಡಿಯಲ್ಲಿ ಬರುತ್ತದೆ” ಎಂದು ಆದೇಶಿಸಿದೆ.
ಶ್ರೀವಿಜಯ ವಿಶಾಖ ಹಾಲು ಉತ್ಪಾದಕರ ಕಂಪನಿ ಲಿಮಿಟೆಡ್ ವರ್ಸಸ್ ಕೇಂದ್ರ ತೆರಿಗೆ ಸಹಾಯಕ ಆಯುಕ್ತರ ಪ್ರಕರಣ ಹಾಗೂ ಇನ್ನಿತರ ಪ್ರಕರಣವನ್ನು ಉಲ್ಲೇಖಿಸಿರುವ ನ್ಯಾಯಾಲಯವು ಆ ಪ್ರಕರಣಗಳಲ್ಲಿ ಆಂಧ್ರ ಪ್ರದೇಶ ಹೈಕೋರ್ಟ್ “ಸುವಾಸನೆಯುಕ್ತ ಹಾಲನ್ನು ಸುಂಕ ಶೀರ್ಷಿಕೆ 2202ರ ಅಡಿಯಲ್ಲಿ ಬರುವಂತೆ ಪರಿಗಣಿಸಲಾಗುವುದಿಲ್ಲ. ಉಲ್ಲೇಖಿತ ಯಾವುದೇ ನಿಬಂಧನೆಗಳ ಅಡಿಯಲ್ಲಿ ದಂಡದ ಪ್ರಶ್ನೆ ಉದ್ಭವಿಸುವುದಿಲ್ಲ. ಯಾವುದೇ ಸಂದರ್ಭದಲ್ಲಿ ಸುವಾಸನೆಯುಕ್ತ ಹಾಲು 2202ರೊಳಗೆ ಬಂದರೂ ಸಹ ವ್ಯಾಪಾರಿ ತನ್ನ ಸರಕುಗಳ ವರ್ಗೀಕರಣವನ್ನು ಒಂದು ನಮೂದುಗಳಿಂದ ಇನ್ನೊಂದಕ್ಕೆ ಬದಲಾಯಿಸಿದ ಕಾರಣಕ್ಕಾಗಿ ದಂಡವನ್ನು ವಿಧಿಸಬಹುದೇ ಎಂಬ ಪ್ರಶ್ನೆಯನ್ನು ಮುಕ್ತವಾಗಿ ಬಿಡಲಾಗಿದೆ” ಎಂದು ಹೇಳಿದೆ.
ಶ್ರೀ ವಿಜಯ ವಿಶಾಖ ಹಾಲು ಉತ್ಪಾದಕರ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿದೆ. ಹೀಗಾಗಿ ಅರ್ಜಿಯನ್ನು ಮಾನ್ಯ ಮಾಡುತ್ತಿರುವುದಾಗಿ ಆದೇಶಿಸಿರುವ ನ್ಯಾಯಾಲಯವು ಆಕ್ಷೇಪಾರ್ಹ ಆದೇಶಗಳನ್ನು ರದ್ದುಗೊಳಿಸಿದೆ. ತೆರಿಗೆದಾರರು ಠೇವಣಿ ಮಾಡಿದ ಮೊತ್ತವನ್ನು ಅನ್ವಯವಾಗುವ ಬಡ್ಡಿಯೊಂದಿಗೆ ಮರುಪಾವತಿಸುವಂತೆ ತೆರಿಗೆ ಇಲಾಖೆಗೆ ನ್ಯಾಯಾಲಯ ನಿರ್ದೇಶನ ನೀಡಿತು.
ಪ್ರಕರಣದ ಹಿನ್ನೆಲೆ: ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ವಿಧಿಸುವ ಜಿಎಸ್‌ಟಿ ಸ್ಲ್ಯಾಬ್ ದರದ ವಿಚಾರವಾಗಿ ಉದ್ಭವಿಸಿದ್ದ ವಿವಾದದ ಪ್ರಕರಣ ಇದಾಗಿದೆ. ಇದರಡಿ ಸುವಾಸನೆಯುಕ್ತ ಹಾಲು ಕೂಡ ಸೇರಿದೆ. ತೆರಿಗೆ ಅಧಿಕಾರಿಗಳು ಸುವಾಸನೆಯುಕ್ತ ಹಾಲನ್ನು ಸುಂಕ ಶೀರ್ಷಿಕೆ 2202 ರ ಅಡಿಯಲ್ಲಿ ಪಾನೀಯ ಎಂದು ವರ್ಗೀಕರಿಸಿದ್ದರು ಮತ್ತು ಡೈರಿ ಉತ್ಪನ್ನಗಳಿಗೆ ಅನ್ವಯವಾಗುವ ಶೇ.5ರ ಜಿಎಸ್‌ಟಿ ಬದಲಿಗೆ ಶೆ.12 ಮತ್ತು ಶೇ.18ಕ್ಕೂ ಅಧಿಕ ಜಿಎಸ್‌ಟಿ ತೆರಿಗೆ ದರ ವಿಧಿಸಿದ್ದರು. ಇದನ್ನು ದೊಡ್ಲ ಡೈರಿ ಲಿ. ಪ್ರಶ್ನಿಸಿತ್ತು.
ಸಿಜಿಎಸ್‌ಟಿ ಕಾಯಿದೆಯ ಸೆಕ್ಷ ನ್ 74ರ ಅಡಿಯಲ್ಲಿ ದೊಡ್ಲಾ ಡೈರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು, ನಂತರ ತೆರಿಗೆ ಬೇಡಿಕೆಯನ್ನು ದೃಢೀಕರಿಸುವ ಆದೇಶ ನೀಡಲಾಗಿತ್ತು. ಕಂಪನಿಯು 2021ರ ಡಿಸೆಂಬರ್‌ನಲ್ಲಿ ಜಿಎಸ್‌ಟಿಯಾಗಿ 72.95 ಲಕ್ಷ ಠೇವಣಿ ಮಾಡಿತ್ತು. ಇದೇ ವೇಳೆ ಅದು ಜಿಎಸ್‌ಟಿ ಅದು ಆದೇಶವನ್ನು ಪ್ರಶ್ನಿಸಿತ್ತು. ಆದರೆ, ಮೊದಲ ಮೇಲ್ಮನವಿ ಪ್ರಾಧಿಕಾರವು ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಹೀಗಾಗಿ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.