ಮಹಿಳೆಯನ್ನು ಕೆಲವೊಮ್ಮೆ ಹಿಂಬಾಲಿಸುವುದು, ಆಕೆಗೆ ನಿಂದಿಸುವುದು ಆಕೆಯ ಸಭ್ಯತೆಯನ್ನು ಆಘಾತಗೊಳಿಸುವಂತಹ ಕೃತ್ಯ ಎನ್ನಲಾಗದು. ಹೀಗಾಗಿ ಅಂತಹ ಕೃತ್ಯ ಆಕೆಯ ಘನತೆಗೆ ಧಕ್ಕೆ ತರುವ ಕೃತ್ಯವೆಂದು ಪರಿಗಣಿತವಾಗದು ಎಂದು ಬಾಂಬೆ ಹೈಕೋರ್ಟ್ ನಾಗಪುರ ಪೀಠ ಈಚೆಗೆ ತಿಳಿಸಿದೆ [ಮೊಹಮ್ಮದ್ ಇಜಾಜ್ ಶೇಖ್ ಇಸ್ಮಾಯಿಲ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಇಂತಹ ನಡವಳಿಕೆ ಕಿರಿಕಿರಿ ಉಂಟುಮಾಡಬಹುದಾದರೂ "ಮಹಿಳೆಯ ಸಭ್ಯತೆಗೆ ಆಘಾತ ತರುತ್ತದೆ" ಎನ್ನಲು ಸಾಕಾಗುವುದಿಲ್ಲ ಎಂದು ನ್ಯಾಯಮೂರ್ತಿ ಅನಿಲ್ ಪನ್ಸಾರೆ ಅವರಿದ್ದ ಏಕಸದಸ್ಯ ಪೀಠ ಡಿಸೆಂಬರ್ 16ರಂದು ನೀಡಿದ ಆದೇಶದಲ್ಲಿ ತಿಳಿಸಿದೆ.
"ದೂರುದಾರೆಯನ್ನು ಹಿಂಬಾಲಿಸುವ ಮತ್ತು ನಿಂದಿಸುವ ಕ್ರಿಯೆಯು ಮಹಿಳೆಯ ಸಭ್ಯತೆಯ ಭಾವನೆಗೆ ಆಘಾತ ಉಂಟುಮಾಡುತ್ತದೆ ಎಂದು ಹೇಳಲಾಗದು. ಈ ಕೃತ್ಯ ಕಿರಿಕಿರಿ ಉಂಟುಮಾಡಬಹುದು. ಆದರೆ ಖಂಡಿತವಾಗಿಯೂ ಮಹಿಳೆಯ ಸಭ್ಯತೆಯ ಪ್ರಜ್ಞೆಯನ್ನು ಆಘಾತಗೊಳಿಸುವುದಿಲ್ಲ" ಎಂದು ನ್ಯಾಯಾಲಯ ಹೇಳಿತು.
ಆರೋಪಿ ಸೈಕಲ್‌ನಲ್ಲಿ ಪ್ರಯಣಿಸುತ್ತಿದ್ದ ವೇಳೆ ದೂರುದಾರೆಯನ್ನು ತಳ್ಳಿದ ಅಥವಾ ದಬ್ಬಿದ ಕೃತ್ಯವನ್ನು; ಆಕೆಯನ್ನು ಹಿಂಬಾಲಿಸುವ ಮತ್ತು ಕಿರುಕುಳ ನೀಡುವ ಆತನ ನಡೆಯನ್ನು ಗಮನದಲ್ಲಿಟ್ಟುಕೊಂಡು ಪರಿಗಣಿಸಬೇಕಾಗುತ್ತದೆ ಎಂದು ಅದು ವಿವರಿಸಿತು.
ಆರೋಪಿ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ ಅಥವಾ ತನ್ನ ದೇಹದ ನಿರ್ದಿಷ್ಟ ಭಾಗವನ್ನು ಸ್ಪರ್ಶಿಸುವ ಮೂಲಕ ತಳ್ಳಿದ್ದಾನೆ ಎಂದು ದೂರುದಾರೆ ಆರೋಪಿಸಿಲ್ಲ ಎಂಬ ಅಂಶವನ್ನು ನ್ಯಾಯಮೂರ್ತಿಗಳು ಗಮನಿಸಿದರು.
"ದೂರುದಾರ ಮಹಿಳೆಯ ದೇಹದ ಭಾಗ ಸ್ಪರ್ಶಿಸಿದ್ದನ್ನು ಆಕೆ ಹೇಳಿಲ್ಲ. ಇಂತಹ ಸಂದರ್ಭಗಳಲ್ಲಿ, ಮೇಲ್ಮನವಿದಾರನು ಬೈಸಿಕಲ್ ನಲ್ಲಿ ಆಕೆಯನ್ನು ತಳ್ಳಿದ್ದಾನೆ ಎಂಬುದು ನನ್ನ ಪ್ರಕಾರ, ದೂರುದಾರೆಯ ಸಭ್ಯತೆಯ ಪ್ರಜ್ಞೆಯನ್ನು ಆಘಾತಗೊಳಿಸುವ ಸಾಮರ್ಥ್ಯದ ಕೃತ್ಯ ಎಂದು ಹೇಳಲಾಗದು. ಇದು ಮನನೋಯಿಸುವ ಅಥವಾ ಕಿರಿಕಿರಿಯ ಕೃತ್ಯವಾಗಿರಬಹುದು ಆದರೆ ಮಹಿಳೆಯ ಸಭ್ಯತೆಗೆ ಧಕ್ಕೆ ತರುತ್ತದೆ ಎಂದು ಹೇಳಲಾಗದು" ಎಂಬುದಾಗಿ ನ್ಯಾಯಾಲಯ ಒತ್ತಿಹೇಳಿದೆ.
ಆದ್ದರಿಂದ, ಐಪಿಸಿ ಸೆಕ್ಷನ್ 354ರ (ಗೌರವಕ್ಕೆ ಧಕ್ಕೆ) ಅಡಿಯಲ್ಲಿ ಮೇಲ್ಮನವಿದಾರನನ್ನು ದೋಷಿ ಎಂದು ಪರಿಗಣಿಸುವಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮತ್ತು ಸೆಷನ್ಸ್ ನ್ಯಾಯಾಲಯ ಎಡವಿವೆ ಎಂಬುದಾಗಿ ಅದು ಅಭಿಪ್ರಾಯಪಟ್ಟಿದೆ.
ಪ್ರಾಸಿಕ್ಯೂಷನ್ ವಾದದ ಪ್ರಕಾರ, ಮೇಲ್ಮನವಿದಾರ ಆರೋಪಿ ತನ್ನನ್ನು ಹಿಂಬಾಲಿಸಿ ನಿಂದಿಸಿದ್ದಾಗಿ ದೂರುದಾರೆ ಆರೋಪಿಸಿದ್ದರು. ಘಟನೆ ನಡೆದ ದಿನ ಆಕೆ ಮಾರುಕಟ್ಟೆಗೆ ತೆರಳುತ್ತಿದ್ದಾಗ ಬೈಸಿಕಲ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಮನವಿದಾರ ತನ್ನನ್ನು ತಳ್ಳಿದ. ಆಕೆ ಕೋಪಗೊಂಡರೂ ಹಿಂಬಾಲಿಸುವುದನ್ನು ಮುಂದುವರೆಸಿದ. ಆದ್ದರಿಂದ ಆಕೆ ಆತನ ಮೇಲೆ ಕೈಮಾಡಿದಳು.
ಈ ಸಾಕ್ಷ್ಯ ಆಧರಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಮೇಲ್ಮನವಿದಾರನನ್ನು ದೋಷಿ ಎಂದು ಘೋಷಿಸಿತು. ಆತನಿಗೆ ಎರಡು ವರ್ಷಗಳ ಕಠಿಣ ಸೆರೆವಾಸ ಮತ್ತು ₹ 2,000 ದಂಡ ವಿಧಿಸಿತ್ತು. ಇದನ್ನು ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿದಾರ ಪ್ರಶ್ನಿಸಿದರೂ ಅದು ಅರ್ಜಿ ವಜಾಗೊಳಿಸಿತ್ತು.
ಸಂತ್ರಸ್ತೆಯ ಸಾಕ್ಷ್ಯವನ್ನು ಹೊರತುಪಡಿಸಿ ಬೇರೆ ಯಾವುದೇ ಪುರಾವೆಗಳಿಲ್ಲ ಇದು ಅಪರಾಧವನ್ನು ಸಾಬೀತುಪಡಿಸಲು ಸಾಕಾಗುವುದಿಲ್ಲ ಎಂದು ಏಕಸದಸ್ಯ ಪೀಠ ಹೇಳಿದೆ. ಈ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ಮತ್ತು ಸೆಷನ್ಸ್ ನ್ಯಾಯಾಲಯಗಳ ತೀರ್ಪುಗಳನ್ನು ಅದು ರದ್ದುಗೊಳಿಸಿತು.
[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]