[ವಿಷಾಹಾರ ಸೇವನೆ ಪ್ರಕರಣ] ಮೇಘಾಲಯದ 22 ಮಕ್ಕಳನ್ನು ಪೋಷಕರಿಗೆ ಒಪ್ಪಿಸಲು ಕ್ರಮ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

ಬಾಲ ಮಂದಿರದಲ್ಲಿರುವ ಮಕ್ಕಳಿಗೆ ವಿಡಿಯೋ ಕಾಲ್ ಮೂಲಕ ಪೋಷಕರೊಂದಿಗೆ ಮಾತನಾಡಲು ಅವಕಾಶ ಮಾಡಿಕೊಡಲಾಗಿದೆ. 22 ಮಕ್ಕಳ ಪೈಕಿ 16 ಮಕ್ಕಳ ಪೋಷಕರು 2022ರಿಂದ ಅವರನ್ನು ಭೇಟಿ ಮಾಡಲು ಬಂದೇ ಇಲ್ಲ ಎಂದು ವಿವರಿಸಿದ ಮಕ್ಕಳ ಕಲ್ಯಾಣ ಅಧಿಕಾರಿ.
Karnataka High Court
Karnataka High Court
Published on

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಟಿ ಕಾಗೇಪುರದ ಗೋಕುಲ ವಸತಿ ಶಾಲೆಯಲ್ಲಿ ಕಳೆದ ಮಾರ್ಚ್ 16ರಂದು ನಡೆದ ವಿಷಾಹಾರ ಸೇವನೆ ಪ್ರಕರಣದ ಬಳಿಕ ಮಂಡ್ಯದ ಬಾಲ ಮಂದಿರದ ಸುಪರ್ದಿಯಲ್ಲಿರುವ ಮೇಘಾಲಯದ 22 ಮಕ್ಕಳನ್ನು ವಿಮಾನ ಪ್ರಯಾಣದ ಮೂಲಕ ಸುರಕ್ಷಿತವಾಗಿ ಅವರ ಪೋಷಕರಿಗೆ ಒಪ್ಪಿಸಲು ಕ್ರಮ ಕೈಗೊಂಡಿರುವುದಾಗಿ ರಾಜ್ಯ ಸರ್ಕಾರವು ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಎಲ್ಲಾ 22 ಮಕ್ಕಳ ಪೋಷಕರ ಪರವಾಗಿ ಮೇಘಾಲಯ ರಾಜ್ಯದ ಜೈಂಟಿಯಾ ಹಿಲ್ಸ್‌ ಜಿಲ್ಲೆ ನಿವಾಸಿ ವಯ್ಲಾಡ್ ನಾಂಗ್ಟುಡು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಹೆಚ್ಚುವರಿ ಸರ್ಕಾರಿ ವಕೀಲರು, ಮೇಘಾಲಯ ರಾಜ್ಯದ 22 ಮಕ್ಕಳು ಸರ್ಕಾರಿ ಬಾಲ ಮಂದಿರದ ಸುಪರ್ದಿಯಲ್ಲಿದ್ದಾರೆ. ಮಕ್ಕಳ ಕಲ್ಯಾಣ ಅಧಿಕಾರಿ (ಸಿಡಬ್ಲ್ಯೂಒ) ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಮಕ್ಕಳ ಸುರಕ್ಷತೆ ಹಾಗೂ ಅವರ ಹಿತದೃಷ್ಟಿಯಿಂದ ಎಲ್ಲಾ 22 ಮಕ್ಕಳನ್ನು ವಿಮಾನ ಪ್ರಯಾಣದ ಮೂಲಕ ಅವರ ಪೋಷಕರಿಗೆ ಒಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವಿಮಾನ ಪ್ರವಾಸಕ್ಕೆ ತಗಲುವ ವೆಚ್ಚವನ್ನು ಬಾಲ ನ್ಯಾಯ ನಿಧಿಯಿಂದ ಬಿಡುಗಡೆ ಮಾಡುವಂತೆ ಬಾಲ ನ್ಯಾಯ ಮಂಡಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಮಕ್ಕಳನ್ನು ಮೇಘಾಲಯ ರಾಜ್ಯದ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ನೀಡಲಾಗಿದೆ. ಮುಂದಿನ ಕ್ರಮವನ್ನು ಅಲ್ಲಿನ ಮಕ್ಕಳ ಕಲ್ಯಾಣ ಸಮಿತಿ ಕೈಗೊಳ್ಳಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಕೀಲರು, ಇದು ಮಕ್ಕಳಿಗೆ ಸಂಬಂಧಿಸಿದ ಸೂಕ್ಷ್ಮ ವಿಷಯ. ಮಕ್ಕಳನ್ನು ಅವರ ಪೋಷಕರಿಗೆ ಒಪ್ಪಿಸುವ ತನಕ ಸರ್ಕಾರ ಹಾಗೂ ಸಂಬಂಧಿತ ಪ್ರಾಧಿಕಾರಗಳು ಯಾವುದೇ ಬಹಿರಂಗ ಹೇಳಿಕೆ, ಮಾಧ್ಯಮ ಪ್ರಕಟಣೆ ಹೊರಡಿಸಬಾರದು ಎಂದು ಮನವಿ ಮಾಡಿದರು. ಆ ತರಹದ ಯಾವುದೇ ಮಾಧ್ಯಮ ಹೇಳಿಕೆ ಬಿಡುಗಡೆಗೊಳಿಸುವುದಿಲ್ಲ ಎಂದು ಸರ್ಕಾರದ ಪರ ವಕೀಲರು ಭರವಸೆ ನೀಡಿದರು. ನ್ಯಾಯಾಲಯಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಮಕ್ಕಳ ಬಗ್ಗೆ ಕಾಳಜಿ ಇದೆ ಎಂದು ಅರ್ಜಿದಾರರ ಪರ ವಕೀಲರಿಗೆ ಪೀಠ ಹೇಳಿತು.

ಮಕ್ಕಳ ಪೋಷಕರು ಗುರುವಾರ ಬೆಂಗಳೂರಿಗೆ ತಲುಪಲಿದ್ದು, ಮಕ್ಕಳನ್ನು ಭೇಟಿ ಮಾಡಲು ಹಾಗೂ ಅವರೊಂದಿಗೆ ಕಾಲ ಕಳೆಯುವುದಕ್ಕೆ ಅವಕಾಶ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ಬಾಲ ಮಂದಿರದಲ್ಲೇ ಮಕ್ಕಳನ್ನು ಪೋಷಕರು ಭೇಟಿ ಮಾಡುವುದಕ್ಕೆ ತಮ್ಮದೇನು ಅಭ್ಯಂತರವಿಲ್ಲ ಎಂದು ಸರ್ಕಾರದ ವಕೀಲರು ಹೇಳಿದರು.

ನ್ಯಾಯಾಲಯದ ಆದೇಶದಂತೆ ವಿಚಾರಣೆಗೆ ಖುದ್ದು ಹಾಜರಾಗಿದ್ದ ಮಕ್ಕಳ ಕಲ್ಯಾಣ ಅಧಿಕಾರಿ, ಪ್ರಕರಣದ ನಡೆದ ಶಿಕ್ಷಣ ಸಂಸ್ಥೆಗೆ ಶಾಲೆ ನಡೆಸಲು ಮಾತ್ರ ಪರವಾನಿಗೆ ಇತ್ತು. ಆದರೆ, ವಸತಿ ಶಾಲೆ ನಡೆಸಲು ಅನುಮತಿ ಇರಲಿಲ್ಲ. ಬಾಲ ಮಂದಿರದಲ್ಲಿರುವ ಮಕ್ಕಳಿಗೆ ವಿಡಿಯೋ ಕಾಲ್ ಮೂಲಕ ಪೋಷಕರೊಂದಿಗೆ ಮಾತನಾಡಲು ಅವಕಾಶ ಮಾಡಿಕೊಡಲಾಗಿದೆ. 22 ಮಕ್ಕಳ ಪೈಕಿ 16 ಮಕ್ಕಳ ಪೋಷಕರು 2022ರಿಂದ ಅವರನ್ನು ಭೇಟಿ ಮಾಡಲು ಬಂದೇ ಇಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ವಾದ-ಪ್ರತಿವಾದ ಆಲಿಸಿದ ಪೀಠವು 22 ಮಕ್ಕಳು, ಮಕ್ಕಳ ಕಲ್ಯಾಣ ಅಧಿಕಾರಿ ಹಾಗೂ ಇತರರ ವಿಮಾನ ಪ್ರಯಾಣಕ್ಕೆ ತಗಲುವ ವೆಚ್ಚವನ್ನು ಬಾಲ ನ್ಯಾಯ ಮಂಡಳಿ ತಕ್ಷಣ ಬಿಡುಗಡೆಗೊಳಿಸಬೇಕು. ಮಕ್ಕಳನ್ನು ಸುರಕ್ಷಿತವಾಗಿ ಒಪ್ಪಿಸಿದ್ದರ ಬಗ್ಗೆ ಕರ್ನಾಟಕದ ಮಕ್ಕಳ ಕಲ್ಯಾಣ ಸಮಿತಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಮಕ್ಕಳನ್ನು ಮೇಘಾಲಯ ರಾಜ್ಯದ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ ಬಳಿಕ ಮಕ್ಕಳ ಪೋಷಕರನ್ನು ಪತ್ತೆ ಹಚ್ಚಿ, ಪರಶೀಲನೆ ನಡೆಸಿ ಅವರ ಸುಪರ್ದಿಗೆ ಒಪ್ಪಿಸುವುದು ಆ ರಾಜ್ಯದ ಮಕ್ಕಳ ಕಲ್ಯಾಣ ಸಮಿತಿಯ ಜವಾಬ್ದಾರಿ ಆಗಿರಲಿದೆ. ಮೇಘಾಲಯ ರಾಜ್ಯದಲ್ಲಿ ಮಕ್ಕಳನ್ನು ಪೋಷಕರಿಗೆ ಒಪ್ಪಿಸುವ ವೇಳೆ ಅರ್ಜಿದಾರರ ಪರ ವಕೀಲರು ಹಾಜರಿರಬಹುದು. ಅಗತ್ಯಬಿದ್ದರೆ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಬಹುದು ಎಂದು ಹೇಳಿ ಪೀಠ ಅರ್ಜಿಯನ್ನು ಇತ್ಯರ್ಥಪಡಿಸಿತು. 

Kannada Bar & Bench
kannada.barandbench.com