ಪಾದಚಾರಿಗಳ ಸುರಕ್ಷತೆ: ರಾಷ್ಟ್ರಮಟ್ಟದಲ್ಲಿ ಜಾರಿಯಾಗಬೇಕಾದ ಹಲವು ನಿರ್ದೇಶನ ನೀಡಿದ ಸುಪ್ರೀಂ ಕೋರ್ಟ್‌

ಈ ನಿರ್ದೇಶನಗಳ ಪಾಲನೆಯಾಗುತ್ತಿದೆಯೇ ಎಂಬುದನ್ನು ಖುದ್ದು ಮೇಲ್ವಿಚಾರಣೆ ಮಾಡುವುದಾಗಿ ಸರ್ವೋಚ್ಚ ನ್ಯಾಯಾಲಯ ಹೇಳಿದೆ.
footpath
footpath
Published on

ದೇಶದೆಲ್ಲೆಡೆ ಪಾದಚಾರಿಗಳ ಸುರಕ್ಷತೆಗಾಗಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆಗೆ ತಡೆ, ಪ್ರಖರ ಬೆಳಕಿನ ಹೆಡ್‌ಲೈಟ್‌ ಬಳಕೆ ನಿಯಂತ್ರಣ ಸೇರಿದಂತೆ ವಿವಿಧ ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ನೀಡಿದೆ [ಎಸ್ ರಾಜಶೇಖರನ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಪಾದಚಾರಿ ಮಾರ್ಗಗಳು ಮತ್ತು ಪಾದಚಾರಿ ಮೂಲಸೌಕರ್ಯಗಳು ನಿರಂತರವಾಗಿ ಅತಿಕ್ರಮಣಕ್ಕೊಳಗಾಗುತ್ತಿದ್ದು ದುರುಪಯೋಗ ನಡೆದಿವೆ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ನ್ಯಾ. ಕೆ ವಿ ವಿಶ್ವನಾಥನ್‌ ಅವರಿದ್ದ ಪೀಠ ಹೇಳಿತು.

ರಸ್ತೆಗಳಲ್ಲಿ ಸುರಕ್ಷತಾ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಮತ್ತು ತಪ್ಪು ಮಾಡುವ ಚಾಲಕರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಕೋರಿ ಮೂಳೆ ಶಸ್ತ್ರಚಿಕಿತ್ಸಕ ಮತ್ತು ರಸ್ತೆ ಸುರಕ್ಷತಾ ವಕೀಲ ಡಾ. ಎಸ್ ರಾಜಶೇಖರನ್ ಅವರು 2012ರಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಿದ್ದರು.  

2023 ರಲ್ಲಿ ರಸ್ತೆ ಅಪಘಾತಗಳಲ್ಲಿ 35,000 ಕ್ಕೂ ಹೆಚ್ಚು ಪಾದಚಾರಿಗಳು ಸಾವನ್ನಪ್ಪಿದ್ದಾರೆ ಮತ್ತು ಹೆಲ್ಮೆಟ್ ಧರಿಸದ ಕಾರಣ 54,000 ಕ್ಕೂ ಹೆಚ್ಚು ಸವಾರರು ಮತ್ತು ದ್ವಿಚಕ್ರ ವಾಹನಗಳ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಅಧಿಕೃತ ಅಂಕಿಅಂಶಗಳನ್ನು ಪರಿಗಣಿಸಿ ನ್ಯಾಯಾಲಯ ಪಾದಚಾರಿ ಮಾರ್ಗಗಳು, ಪಾದಚಾರಿ ಕ್ರಾಸಿಂಗ್‌ಗಳು, ಹೆಲ್ಮೆಟ್‌ ಕಡ್ಡಾಯಗೊಳಿಸುವಿಕೆ ಹಾಗೂ ವಿರುದ್ಧ ದಿಕ್ಕಿನಲ್ಲಿ ಸಂಚಾರ ತಡೆ ಮತ್ತು ವಾಹನಗಳ ಓವರ್‌ ಟೇಕ್‌ ನಿಯಂತ್ರಣ ರೀತಿಯ ಐದು ಪ್ರಮುಖ ಅಂಶಗಳಿಗೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ನೀಡಿತು.

ನಿರ್ದೇಶನಗಳ ವಿವರ

ಪಾದಚಾರಿ ಮಾರ್ಗ: ನಗರಗಳಲ್ಲಿ ಪಾದಚಾರಿ ಮಾರ್ಗಗಳನ್ನು ಲೆಕ್ಕ ಹಾಕಿ, ಸುಧಾರಣೆ ಕೈಗೊಳ್ಳಬೇಕು. ಜೊತೆಗೆ ಅಂತಹ ಮಾರ್ಗಗಳ ಅತಿಕ್ರಮಣ ತಡೆಯಬೇಕು.  

ಪಾದಚಾರಿ ಕ್ರಾಸಿಂಗ್‌ಗಳು: ಭಾರತೀಯ ರಸ್ತೆ ಮಾನದಂಡಗಳ ಮಾರ್ಗಸೂಚಿಯ ಪ್ರಕಾರ ಪಾದಚಾರಿ ಕ್ರಾಸಿಂಗ್‌ಗಳನ್ನು ಸರಿಪಡಿಸಿ, ನಡಿಗೆ ಓವರ್ ಬ್ರಿಜ್‌ ಇಲ್ಲವೇ ಅಂಡರ್‌ಪಾಸ್ ನಿರ್ವಹಣೆಗೆ ಆದ್ಯತೆ.

ಹೆಲ್ಮೆಟ್: ಬೈಕ್ ಸವಾರರು ಮತ್ತು ಪ್ರಯಾಣಿಕರು ಹೆಲ್ಮೆಟ್‌ಗಳನ್ನು ಕಡ್ಡಾಯವಾಗಿ ಬಳಸಬೇಕು.

ಲೇನ್ ಶಿಸ್ತು ಪಾಲನೆ: ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಪ್ರಯಾಣ ಮತ್ತು ಅಸುರಕ್ಷಿತ ಓವರ್‌ ಟೇಕ್‌ ಮಾಡದಂತೆ ತಡೆ.

ಹೈ‑ಬೀಮ್ ಮತ್ತು ಅಕ್ರಮ ಬೆಳಕು: ವಾಹನಗಳಲ್ಲಿ ಹೆಚ್ಚಾಗಿ ಪ್ರಖರ ಮತ್ತು ಅಕ್ರಮ ರೀತಿಯಲ್ಲಿ ಬೆಳಕಿನ ವ್ಯವಸ್ಥೆ ಬಳಕೆಗೆ ಕಡಿವಾಣ ಹಾಕಬೇಕು.

ಮೇಲ್ವಿಚಾರಣೆ: ಸುಪ್ರೀಂ ಕೋರ್ಟ್‌ ಖುದ್ದು ನಿರ್ದೇಶನಗಳು ಜಾರಿಯಾಗಿವೆಯೇ ಎಂಬ ಕುರಿತು ಮೇಲ್ವಿಚಾರಣೆ ನಡೆಸಲಿದ್ದು ರಾಜ್ಯಗಳು ಹೆಲ್ಮೆಟ್ ಉಲ್ಲಂಘನೆ, ಲೇನ್ ಉಲ್ಲಂಘನೆ, ದಂಡ ಸಂಗ್ರಹದ ವಿವರಗಳನ್ನು ನಿಯಮಿತವಾಗಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಮೊದಲ ಹಂತದಲ್ಲಿ ಈ ಕ್ರಮಗಳು 50 ಪ್ರಮುಖ ನಗರಗಳಲ್ಲಿ ಜಾರಿಗೆ ಬರಬೇಕು.

Kannada Bar & Bench
kannada.barandbench.com