ಬಾಲನೊಬ್ಬನನ್ನು ಅಪಹರಿಸಿ ಬಲವಂತವಾಗಿ ಶಸ್ತ್ರ ಚಿಕಿತ್ಸೆ ಮೂಲಕ ಲಿಂಗ ಪರಿವರ್ತನೆ ಮಾಡಿದ ಆರೋಪಕ್ಕೆ ಗುರಿಯಾಗಿರುವ ವೈದ್ಯೆಯೊಬ್ಬರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.
ತಮ್ಮ ವಿರುದ್ಧದ ಎಫ್‌ಐಆರ್ ಮತ್ತು ಮಂಡ್ಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಡಾ. ಅನಿತಾ ಪಾಟೀಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾಗೊಳಿಸಿದೆ.
“ಅರ್ಜಿದಾರೆ ವೈದ್ಯೆಯು ತಮ್ಮೆಲ್ಲಾ ವಾದವನ್ನು ವಿಚಾರಣಾಧೀನ ನ್ಯಾಯಾಲಯದ ಮುಂದೆ ಮಂಡಿಸಲು ಮುಕ್ತರಾಗಿದ್ದು, ಅಲ್ಲಿಯೇ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಸ್ವತಂತ್ರರಾಗಿದ್ದಾರೆ” ಎಂದು ಪೀಠ ಸ್ಪಷ್ಟಪಡಿಸಿದೆ.
“ರೋಗಿಗಳಿಗೆ ಚಿಕಿತ್ಸೆ ನೀಡುವ ವೇಳೆ ಅಪರಾಧಿಕ ಉದ್ಧಟತನ ಮತ್ತು ನಿರ್ಲಕ್ಷ್ಯ ತೋರಿದ ಆರೋಪ ವೈದ್ಯರ ವಿರುದ್ಧ ಇದ್ದರೆ, ಆಗ ಮಾತ್ರ ಇತರೆ ವೈದ್ಯರಿಂದ ಅಭಿಪ್ರಾಯ ಪಡೆಯುವುದು ಕಡ್ಡಾಯ. ಈ ಪ್ರಕರಣದಲ್ಲಿ ಅಂತಹ ಆರೋಪವಿಲ್ಲ. ಬಾಲಕನ ಒಪ್ಪಿಗೆ ಪಡೆಯದೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಆತನನ್ನು ಬಾಲಕಿಯಾಗಿ ಲಿಂಗ ಪರಿವರ್ತನೆ ಮಾಡಿದ ಆರೋಪ ಅರ್ಜಿದಾರರ ಮೇಲಿದೆ. ಲಿಂಗ ಪರಿವರ್ತನೆ ನಡೆದಾಗ ಸಂತ್ರಸ್ತ ಅಪ್ರಾಪ್ತ. ಇಂತಹ ಪ್ರಕರಣಗಳನ್ನು ವಿಚಾರಣಾಧೀನ ನ್ಯಾಯಾಲಯದ ವಿಚಾರಣೆಗೆ ಬಿಡಬೇಕಾಗುತ್ತದೆ. ಹೀಗಾಗಿ, ಅರ್ಜಿದಾರರು ಯಾವುದೇ ಅಪರಾಧ ಮಾಡಿಲ್ಲ ಮತ್ತು ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಲು ಸೂಕ್ತ ಕಾರಣಗಳು ಇಲ್ಲ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತಿಲ್ಲ” ಎಂದು ಅರ್ಜಿ ವಜಾಗೊಳಿಸಿದೆ.
ಅರ್ಜಿದಾರರ ಪರ ವಕೀಲರಾದ ವಿಜೇತಾ ಆರ್ ನಾಯಕ್ ಅವರು “ಪ್ರಕರಣದಲ್ಲಿ ತಪ್ಪಾಗಿ ಅರ್ಜಿದಾರರನ್ನು ಸಿಲುಕಿಸಲಾಗಿದೆ. ದೂರುದಾರರು ಆರೋಪಿಸಿದಂತೆ ಅರ್ಜಿದಾರರು ಯಾವುದೇ ಶಸ್ತ್ರ ಚಿಕಿತ್ಸೆ ಮಾಡಿಲ್ಲ. ವೈದ್ಯಕೀಯ ಉದ್ಧಟತನ ಮತ್ತು ನಿರ್ಲಕ್ಷ್ಯಕ್ಕೆ ಸಬಂಧಿಸಿದಂತೆ ಜೇಕಬ್ ಮ್ಯಾಥ್ಯೂ ಮತ್ತು ಪಂಜಾಬ್ ಸರ್ಕಾರ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೊರ್ಟ್ ರೂಪಿಸಿರುವ ಮಾರ್ಗಸೂಚಿ ಪಾಲಿಸದೆ ಅರ್ಜಿದಾರರ ವಿರುದ್ಧ ಯಾವುದೇ ಕ್ರಿಮಿನಲ್ ಕ್ರಮ ಜರುಗಿಸಲು ಸಾಧ್ಯವಿಲ್ಲ. ವೈದ್ಯಕೀಯ ನಿರ್ಲಕ್ಷ್ಯದ ಕುರಿತು ಏಕಾಏಕಿ ದೂರು ದಾಖಲಿಸಿ, ವೈದ್ಯರನ್ನು ಬಂಧಿಸಲಾಗದು. ಆರೋಪದ ಕುರಿತು ಮತ್ತೊಬ್ಬ ವೈದ್ಯರಿಂದ ಅಭಿಪ್ರಾಯ ಪಡೆಯಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಪ್ರಕರಣದಲ್ಲಿ ಈ ಮಾರ್ಗಸೂಚಿಗಳನ್ನು ಪಾಲಿಸಿಲ್ಲ” ಎಂದು ವಾದಿಸಿದ್ದರು.
ಸರ್ಕಾರದ ವಕೀಲರಾದ ಮಹೇಶ್ ಶೆಟ್ಟಿ, “ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧದ ವೈದ್ಯಕೀಯ ನಿರ್ಲಕ್ಷ್ಯದ ಬಗ್ಗೆ ಯಾವುದೇ ಆರೋಪವಿಲ್ಲ. ಲಿಂಗ ಪರಿವರ್ತನೆ ಮಾಡಿರುವ ಬಗ್ಗೆ ಗಂಭೀರ ಆರೋಪವಿದೆ. ಹೀಗಾಗಿ, ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಅನ್ವಯಿಸುವುದಿಲ್ಲ” ಎಂದು ನ್ಯಾಯಾಲಯದ ಗಮನ ಸೆಳೆದಿದ್ದರು.
ಪ್ರಕರಣದ ಹಿನ್ನೆಲೆ: 2018ರ ಫೆಬ್ರವರಿ 11ರಂದು ಸಾಕಮ್ಮ ಎಂಬುವರು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಟೌನ್ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಅರ್ಜಿದಾರೆ ವೈದ್ಯೆ ಅನಿತಾ ಪಾಟೀಲ್ ಹಾಗೂ ಇತರರು ತಮ್ಮ ಮೊಮ್ಮಗನನ್ನು ಅಪಹರಿಸಿ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಬಲವಂತವಾಗಿ ಲಿಂಗ ಪರಿವರ್ತನೆ ಮಾಡಿದ್ದಾರೆ. ತನಿಖೆ ನಡೆಸಿದ್ದ ಪೊಲೀಸರು ಅರ್ಜಿದಾರರ ವಿರುದ್ಧ ಅಪ್ರಾಪ್ತರ ಅಪಹರಣ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಮಾರಣಾಂತಿಕ ಹಲ್ಲೆ, ಮಕ್ಕಳ ಕಳ್ಳ ಸಾಗಣೆ ಸೇರಿದಂತೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ (ಪೋಕ್ಸೊ), ಭಾರತೀಯ ದಂಡ ಸಂಹಿತೆ ಮತ್ತು ಬಾಲ ನ್ಯಾಯ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ವಿಚಾರಣಾಧೀನ ನ್ಯಾಯಾಲಯಕ್ಕೆ 2019ರ ಜನವರಿ 5ರಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ ತಮ್ಮ ವಿರುದ್ಧ ಪ್ರಕರಣ ಮತ್ತು ವಿಚಾರಣಾಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಅರ್ಜಿದಾರರು ಕೋರಿದ್ದರು.