ಎರಡು ವರ್ಷಗಳ ಪೂರಕ (ಬ್ರಿಜ್) ಕೋರ್ಸ್ ಪೂರ್ಣಗೊಳಿಸಿರುವ ವಿದೇಶಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ ಭಾರತೀಯರು ಎಐಬಿಇ ಪರೀಕ್ಷೆ ಹೊರತುಪಡಿಸಿ ಬೇರಾವುದೇ ಕೋರ್ಸ್ ಮಾಡುವಂತೆ ಒತ್ತಾಯ ಮಾಡದೆ ಅವರಿಗೆ ನೋಂದಣಿ ನೀಡಬೇಕು ಎಂದು ರಾಜ್ಯ ವಕೀಲರ ಪರಿಷತ್‌ಗೆ (ಕೆಎಸ್‌ಬಿಸಿ) ಈಚೆಗೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
ವಿದೇಶಿ ಕಾನೂನು ಪಡೆದಿರುವ ಭಾರತೀಯರು ಅರ್ಹತಾ ಪರೀಕ್ಷೆ ಬರೆಯುವುದನ್ನು ಕಡ್ಡಾಯಗೊಳಿಸಿರುವ ಬಿಸಿಐನ 19.09.2020ರ ಅಧಿಸೂಚನೆಯ ನಿರ್ದಿಷ್ಟ ಭಾಗ ವಜಾ ಕೋರಿ ಕರಣ್ ಧನಂಜಯ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ.
“21.3.2023ರಂದು ಭಾರತೀಯ ವಕೀಲರ ಪರಿಷತ್ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ) ಅರ್ಹತಾ ಪರೀಕ್ಷೆ ಹೊರತುಪಡಿಸಿ ಬೇರಾವುದೇ ಪರೀಕ್ಷೆ ತೆಗೆದುಕೊಳ್ಳಬೇಕಾಗಿಲ್ಲ. ಮೂರನೇ ಪ್ರತಿವಾದಿಯಾಗಿರುವ ಕೆಎಸ್‌ಬಿಸಿಯು ಬೇರಾವುದೇ ಅರ್ಹತಾ ಪರೀಕ್ಷೆ ತೆಗೆದುಕೊಳ್ಳುವಂತೆ ಒತ್ತಾಯ ಮಾಡದೇ ಪೂರಕ ಕೋರ್ಸ್ ಫಲಿತಾಂಶ ಆಧರಿಸಿ ಅರ್ಜಿದಾರರನ್ನು ನೋಂದಾಯಿಸಿಕೊಳ್ಳಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.
ಕರಣ್ ಅವರು ದ್ವಿತೀಯ ಪಿಯು ಪರೀಕ್ಷೆಯ ಬಳಿಕ ಬರ್ಮಿಂಗ್‌ಹ್ಯಾಮ್ ಸಿಟಿ ವಿಶ್ವವಿದ್ಯಾಲಯದಲ್ಲಿ ಬ್ಯಾಚಲರ್ ಆಫ್ ಲಾ ವಿತ್ ಆನರ್ಸ್‌ಗೆ ಪ್ರವೇಶ ಪಡೆದಿದ್ದರು. ಇದು ಬಿಸಿಐ ಪರಿಗಣಿಸಿರುವ ವಿದೇಶಿ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿದೆ. ಕರಣ್ 2020ರಲ್ಲಿ ಬ್ಯಾಚಲರ್ ಆಫ್ ಲಾ ವಿತ್ ಆನರ್ಸ್ ಪದವಿ ಪಡೆದಿದ್ದು 2017 ರಿಂದ 2020ರವರೆಗೆ ಮೂರು ವರ್ಷ ಅಧ್ಯಯನ ಮಾಡಿದ್ದರು.
ಭಾರತಕ್ಕೆ ಮರಳಿದ್ದ ಕರಣ್ ಅವರು ಎನ್‌ಎಲ್‌ಎಸ್‌ಐಯುನಲ್ಲಿ 2023ರಲ್ಲಿ ಪೂರಕ ಕೋರ್ಸ್ ಪೂರ್ಣಗೊಳಿಸಿದ್ದರು. ಆದರೆ, ವಿದೇಶಿ ಕಾನೂನು ಪದವಿ ಪಡೆದಿರುವ ಭಾರತೀಯರಿಗೆ ಅಗತ್ಯವಿರುವ ಅರ್ಹತಾ ಪರೀಕ್ಷೆ ಪಾಸು ಮಾಡಲು ವಿಫಲರಾಗಿದ್ದರು.
ಭಾರತದಲ್ಲಿನ ಅಧಿಸೂಚನೆಯ ಪ್ರಕಾರ ದ್ವಿತೀಯ ಪಿಯುಸಿ ಬಳಿಕ ಪದವಿ ಆನಂತರ ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್ ಅಥವಾ ಪಿಯು ಬಳಿಕ ಐದು ವರ್ಷದ ಸಮಗ್ರ ಕಾನೂನು ಪದವಿ ಪಡೆಯಬೇಕು. ಈ ವಿಧಾನವನ್ನು ಪಾಲಿಸದೇ ವಿದೇಶಿ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿರುವ ಅಭ್ಯರ್ಥಿಗಳು, ಅಗತ್ಯವಾಗಿ ಬೇಕಿರುವ ಒಂದು ಅಥವಾ ಎರಡು ವರ್ಷ ಪೂರಕ ಪದವಿ ಕೋರ್ಸ್ ಮಾಡಬೇಕಿದೆ.
ಇನ್ನೊಂದು ಕಡೆ ಪಿಯು ಬಳಿಕ ಮೂರು ವರ್ಷ ಪದವಿ ಆನಂತರ ಬಿಸಿಐ ಮಾನ್ಯತೆ ಪಡೆದಿರುವ ವಿದೇಶಿ ವಿಶ್ವವಿದ್ಯಾಲಯದಿಂದ ಕಾನೂನು ಪಡೆದರೆ ಅವರು ಪೂರಕ ಕೋರ್ಸ್ ಮಾಡುವ ಅಗತ್ಯವಿಲ್ಲ. ಬಿಸಿಐನಿಂದ ವಿದೇಶಿ ವಿಶ್ವವಿದ್ಯಾಲಯದಲ್ಲಿ ಕಾನೂನು ಪಡೆದಿದ್ದಾರೆ ಎಂಬ ಪತ್ರ ಪಡೆದು ಅರ್ಹತಾ ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ವಿದೇಶಿ ವಿಶ್ವವಿದ್ಯಾಲಯದಿಂದ ಪಡೆದಿರುವ ಕಾನೂನು ಪದವಿಯು ಭಾರತೀಯ ಕಾನೂನು ಪದವಿಗೆ ಸಮನಾಗಿರಬೇಕು ಎಂದು ಹೇಳಲಾಗಿದೆ.
2017ರಿಂದ ವಿದೇಶಿ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿರುವವರಿಗೆ ಪೂರಕ ಕೋರ್ಸ್ ಪರಿಚಯಿಸಲಾಗಿದೆ. ಬಿಸಿಐ ಉಲ್ಲೇಖಿಸಿರುವ ದೇಶದ ಮಹತ್ವದ ಕಾನೂನು ಕಾಲೇಜಿನಲ್ಲಿ ಪೂರಕ ಕೋರ್ಸ್ ಪೂರ್ಣಗೊಳಿಸಿರುವುದರಿಂದ ಬಿಸಿಐ ಸೂಚಿಸಿರುವ ಇನ್ನೊಂದು ಪರೀಕ್ಷೆ ಬರೆಯುವುದು ಆಶ್ಚರ್ಯಕರವಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
ಐದು ವರ್ಷ ಕಾನೂನು ಪಡೆದಿರುವ ಭಾರತೀಯ ವಿದ್ಯಾರ್ಥಿಗಳು ಎಐಬಿಇ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಆದರೆ, ಹಾಲಿ ಪ್ರಕರಣದಲ್ಲಿ ಕರಣ್‌ರನ್ನು ಮೂರು ಪರೀಕ್ಷೆಗಳನ್ನು ಬರೆಯುವಂತೆ ಮಾಡಲಾಗಿದೆ. ಮೊದಲಿನದು ಭಾರತೀಯ ವಿಶ್ವವಿದ್ಯಾಲಯದಲ್ಲಿ ಕಲಿಯುವ ವಿದ್ಯಾರ್ಥಿಗಳ ರೀತಿಯಲ್ಲಿ ಎಂಟು ವಿಷಯಗಳ ವಿವರಣಾತ್ಮಕ ಪರೀಕ್ಷೆಯ ಪೂರಕ ಕೋರ್ಸ್, ಎರಡನೇಯದು ವಿದೇಶಿ ಕಾನೂನು ಪದವಿ ಪಡೆದಿರುವವರಿಗೆ ನಿಗದಿ ಮಾಡಿರುವ ಅರ್ಹತಾ ಪರೀಕ್ಷೆ, ಇದರಲ್ಲಿ ಪೂರಕ ಕೋರ್ಸ್‌ನಲ್ಲಿ ಉಲ್ಲೇಖಿಸಿರುವ ಆರು ವಿವರಣಾತ್ಮಕ ಪರೀಕ್ಷೆಗಳು. ಆನಂತರ ಒಂದು ಪ್ರಶ್ನೆಪತ್ರಿಕೆಯ ಎಐಬಿಇ ಪರೀಕ್ಷೆ. ಇದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಆಪಾದಿಸಿದ್ದರು.
ವಿದೇಶಿ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿರುವ ಭಾರತೀಯರು ಮತ್ತು ಆನಂತರ ಪೂರಕ ಕೋರ್ಸ್ ಪೂರ್ಣಗೊಳಿಸಿರುವವರು ಹಾಗೂ ಎಲ್‌ಎಲ್‌ಬಿ ಪದವಿ ಹೊಂದಿರುವ ಭಾರತೀಯರಿಗೆ ಎಐಬಿಇ ಸಮಾನ ಅರ್ಹತಾ ಪರೀಕ್ಷೆ ಎಂದು ಘೋಷಿಸಬೇಕು. ಹಲವು ಸುತ್ತಿನ ಪರೀಕ್ಷೆಗಳು ಇರುವುದಿಲ್ಲ ಎಂದು ಬಿಸಿಐ ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್ ಅಂತಿಮವಾಗಿ, ಎರಡು ವರ್ಷಗಳ ಪೂರಕ (ಬ್ರಿಜ್) ಕೋರ್ಸ್ ಪೂರ್ಣಗೊಳಿಸಿರುವ ವಿದೇಶಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ ಭಾರತೀಯರು ಎಐಬಿಇ ಪರೀಕ್ಷೆ ಹೊರತುಪಡಿಸಿ ಬೇರಾವುದೇ ಕೋರ್ಸ್ ಮಾಡುವಂತೆ ಒತ್ತಾಯ ಮಾಡದೆ ಅವರಿಗೆ ನೋಂದಣಿ ನೀಡಬೇಕು ಎಂದು ಆದೇಶಿಸಿದೆ.