

ರ“ವಿದೇಶಿಯರಿಗೆ ವೀಸಾ ವಿಸ್ತರಣೆ ಅಥವಾ ನಿರಾಕರಣೆಗೆ ಕೇಂದ್ರ ಸರ್ಕಾರವು ವಿವರಣೆ ನೀಡಬೇಕಿಲ್ಲ. ಅದು ಸರ್ಕಾರದ ಸಾರ್ವಭೌಮ ಹಕ್ಕಾಗಿದೆ” ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಹೇಳಿದೆ.
ಮಾದಕ ವಸ್ತುಗಳ ಮಾರಾಟ, ನಕಲಿ ಮತ್ತು ಅವಧಿ ಮೀರಿದ ವೀಸಾ ಬಳಸಿ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ನೈಜೀರಿಯಾದ ಮೂವರು ಬಂಧನದಿಂದ ಬಿಡುಗಡೆ ಕೋರಿ ಮತ್ತು ವೀಸಾ ವಿಸ್ತರಣೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠವು ವಜಾಗೊಳಿಸಿದೆ.
“ವಿದೇಶಿಯರಿಗೆ ವೀಸಾ ಅಥವಾ ಅದರ ನವೀಕರಣದ ಕುರಿತು ಒತ್ತಾಯಿಸುವ ಯಾವುದೇ ಹಕ್ಕಿಲ್ಲ. ವೀಸಾ ವಿಸ್ತರಿಸುವುದು ಅಥವಾ ನಿರಾಕರಿಸುವುದು ಸಾರ್ವಭೌಮ ಹಕ್ಕಾಗಿದ್ದು, ವೀಸಾ ನಿರಾಕರಿಸುವುದಕ್ಕೆ ವಿವರಣೆಯನ್ನು ಕೇಂದ್ರ ಸರ್ಕಾರ ನೀಡಬೇಕಿಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸಹಜ ನ್ಯಾಯತತ್ವಕ್ಕೆ ವಿರುದ್ಧವಾಗಿ ವಿದೇಶಿಯರ ಕಾಯಿದೆ ಸೆಕ್ಷನ್ 3(2)(ಇ) ಸಹವಾಚನ ಫಾರಿನರ್ಸ್ ಆರ್ಡರ್ ಸೆಕ್ಷನ್ 11(2)ರ ಅಡಿ 23.12.2024ರಂದು ನಿರ್ಬಂಧ ಆದೇಶ ಹೊರಡಿಸಲಾಗಿದೆ. ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಹೊರಡಿಸಿರುವ ನಿರ್ಬಂಧ ಆದೇಶವು ಭಾರತ ಸಂವಿಧಾನದ 14 ಮತ್ತು 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಆಕ್ಷೇಪಿಸಿ ನೈಜೀರಿಯಾ ಮೂಲದ ಒಬಿನ್ನಾ ಜೆರೆಮಿಯಾ ಒಕಾಫೋರ್ ಮತ್ತು ಜಾನ್ ಅಡೆಕ್‌ವ್ಯಾಗ್ ವಂಡೆಫಾನ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
“ವಿದೇಶಿಯರನ್ನು ಭಾರತದಿಂದ ಗಡೀಪಾರು ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರ ಹೊಂದಿದೆ. ಇಲ್ಲಿನ ಸರ್ಕಾರ ಅಂಥ ಆದೇಶ ಮಾಡಿದರೆ ಅದನ್ನು ವಿದೇಶಿಯರು ಅನುಪಾಲಿಸಬೇಕು. ವಿಧಾನದ 19(1)(ಡಿ) ಮತ್ತು 19(1)(ಇ)ರ ಅಡಿ ಭಾರತದಾದ್ಯಂತ ಓಡಾಡಲು ಮತ್ತು ದೇಶದ ಯಾವುದೇ ಮೂಲೆಯಲ್ಲಿ ನೆಲೆಸುವ ಅಧಿಕಾರ ಭಾರತದ ಪ್ರಜೆಗಳಿಗೆ ಮಾತ್ರ ಇದೆಯೇ ವಿನಾ ವಿದೇಶಿಗರಿಗೆ ಅಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
“ಮೇಲ್ಮನವಿದಾರರು ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬುದನ್ನು ವಿಸ್ತೃತ ತನಿಖೆಯ ಮೂಲಕ ಪತ್ತೆ ಹಚ್ಚಿ ಅವರನ್ನು ದೇಶದಿಂದ ಗಡೀಪಾರು ಮಾಡುವ ಸಂಬಂಧ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಬೇಕಿಲ್ಲ” ಎಂದೂ ನ್ಯಾಯಾಲಯ ಹೇಳಿದೆ.
“ಬೆಂಗಳೂರಿನ ಚಾಮುಂಡಿನಗರದ ಫಾತಿಮಾ ರಿಜ್ವಾನ್ ನಿವಾಸದಲ್ಲಿ ವಿದೇಶಿಗರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಆರೋಪದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ವೀಸಾ ಅವಧಿ ಮುಗಿದ ಬಳಿಕವೂ ನೈಜೀರಿಯಾದ ಮಹಿಳೆಯೊಬ್ಬರು ದೇಶದಲ್ಲಿ ನೆಲೆಸಿದ್ದಾರೆ ಎಂಬ ವಿಚಾರ ತನಿಖೆಯಿಂದ ತಿಳಿದು ಬಂದಿದೆ. ಆಕ್ಷೇಪಾರ್ಹವಾದ ಮನೆಯಲ್ಲಿ ಮಹಿಳೆಯ ಜೊತೆ ಇತರೆ ಮೂವರು ನೈಜೀರಿಯಾದ ಪ್ರಜೆಗಳು ನೆಲೆಸಿದ್ದು, ಅವರ ವೀಸಾವೂ ಮುಗಿದಿತ್ತು. ಅಕ್ರಮವಾಗಿ ಅವರು ಅಲ್ಲಿ ನೆಲೆಸಿದ್ದಾರೆ ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.
“ವೀಸಾ ರದ್ದಾದ ಬಳಿಕ ವೀಸಾ ಪಡೆಯುವುದು ಅಥವಾ ಅದರ ವಿಸ್ತರಣೆ ಕೋರುವ ಸಂಬಂಧ ಮೇಲ್ಮನವಿದಾರರಿಗೆ ಯಾವುದೇ ಅಧಿಕಾರವಿಲ್ಲ. ಹೀಗಾಗಿ, ಏಕಸದಸ್ಯ ಪೀಠದ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಆಧಾರವಿಲ್ಲದೇ ಇರುವುದರಿಂದ ಮೇಲ್ಮನವಿ ವಜಾಗೊಳಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.
“ಹಾಲಿ ಪ್ರಕರಣದಲ್ಲಿ ವೀಸಾ ಅವಧಿ ಮುಗಿಯುವುದಕ್ಕೂ ಮುನ್ನ ಅದನ್ನು ರದ್ದುಪಡಿಸಲಾಗಿದೆ. ಹೀಗಾಗಿ, ನಿಸ್ಸಂಶಯವಾಗಿ ಓಡಾಟಕ್ಕೆ ವಿಧಿಸಿರುವ ನಿರ್ಬಂಧವು ಮೇಲ್ಮನವಿದಾರರ ಸ್ವಾತಂತ್ರ್ಯವನ್ನು ಕಸಿಯಲಿದೆ. ಈ ನೆಲೆಯಲ್ಲಿ ಕನಿಷ್ಠ ನ್ಯಾಯಯುತ ಪ್ರಕ್ರಿಯೆ ಪಾಲಿಸುವುದು ಅಗತ್ಯ. ಮೇಲ್ಮನವಿದಾರರಿಗೆ ನಿರ್ಬಂಧ ಆದೇಶದ ಬಗ್ಗೆ ಮಾಹಿತಿ ನೀಡಬೇಕಿತ್ತು. ಕನಿಷ್ಠ ಅವರಿಗೆ ಮನವಿ ಸಲ್ಲಿಸುವ ಅವಕಾಶವೊಂದನ್ನು ನೀಡಬೇಕಿತ್ತು” ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸದ್ಯ ಆರೋಪಿಗಳು ಬೆಂಗಳೂರಿನ ಲಗ್ಗೆರೆಯ ಆಸರೆ ಫೌಂಡೇಶನ್ ಟ್ರಸ್ಟ್‌ನಲ್ಲಿ ಇದ್ದಾರೆ.