ಅರಣ್ಯ ಸಂರಕ್ಷಣಾ ಕಾಯಿದೆ ತಿದ್ದುಪಡಿ; ಅರಣ್ಯದ ವ್ಯಾಖ್ಯಾನ ದುರ್ಬಲಗೊಳಿಸುವ ಉದ್ದೇಶವಿಲ್ಲ: ಕೇಂದ್ರದ ವಿವರಣೆ

ಅರಣ್ಯ ಸಂರಕ್ಷಣಾ ಕಾಯಿದೆಗೆ ಇತ್ತೀಚಿನ ತಿದ್ದುಪಡಿಗಳಿಗೆ ತಡೆಯಾಜ್ಞೆ ನೀಡುವಂತೆ ಅರ್ಜಿದಾರರು ಕೋರಿದ್ದರೂ, ಅಗತ್ಯ ಮಾರ್ಗಸೂಚಿಗಳನ್ನು ಸೂಚಿಸುವವರೆಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
forest cover
forest cover (representative image)
Published on

ಅರಣ್ಯ (ಸಂರಕ್ಷಣೆ) ಕಾಯಿದೆ 1980ಕ್ಕೆ ಇತ್ತೀಚಿನ ತಿದ್ದುಪಡಿಗಳು ಸುಪ್ರೀಂ ಕೋರ್ಟ್ 1996ರ ತೀರ್ಪಿನಲ್ಲಿ ಚರ್ಚಿಸಿರುವಂತೆ "ಅರಣ್ಯ" ಎಂಬ ಅರ್ಥವನ್ನು ದುರ್ಬಲಗೊಳಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ಅಶೋಕ್ ಕುಮಾರ್ ಶರ್ಮಾ ಮತ್ತು ಅದರ್ಸ್‌ ವರ್ಸಸ್‌ ಯೂನಿಯನ್ ಆಫ್ ಇಂಡಿಯಾ ಮತ್ತು ಅನದರ್‌].

ಟಿ.ಎನ್.ಗೋದಾವರ್ಮನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ಅರಣ್ಯ ಭೂಮಿಯನ್ನು ತಜ್ಞರ ಸಮಿತಿಯು ಗುರುತಿಸಬೇಕು, ಅದರ ವರದಿಗಳು ಸಾರ್ವಜನಿಕ ವಲಯದಲ್ಲಿರಬೇಕು ಎಂದು ನಿರ್ದೇಶಿಸಿತ್ತು.

ಹೊಸ ತಿದ್ದುಪಡಿಗಳನ್ನು ನಿಯಂತ್ರಿಸುವ ಮಾರ್ಗಸೂಚಿಗಳನ್ನು ಸೂಚಿಸುವವರೆಗೆ ಅದನ್ನು ಜಾರಿಗೆ ತರಲು ಯಾವುದೇ ತ್ವರಿತ ಕ್ರಮ ತೆಗೆದುಕೊಳ್ಳಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ ಮತ್ತು ಪಿ ಎಸ್‌ ನರಸಿಂಹ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಕೇಂದ್ರ ಸರ್ಕಾರದ ವಕೀಲರು ವಿವರಿಸಿದರು.

"ಟಿ ಎನ್‌ ಗೋದಾವರ್ಮನ್ (ಸುಪ್ರಾ) ಪ್ರಕರಣದಲ್ಲಿ ಈ ನ್ಯಾಯಾಲಯದ ತೀರ್ಪಿನಲ್ಲಿ ವ್ಯಾಖ್ಯಾನಿಸಿದಂತೆ ಅರಣ್ಯ ಎನ್ನುವುದರ ಅರ್ಥ ವ್ಯಾಪ್ತಿಯನ್ನು ದುರ್ಬಲಗೊಳಿಸುವ ಉದ್ದೇಶವಿಲ್ಲ ಎಂದು ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಶ್ರೀ ಬಲ್ಬೀರ್ ಸಿಂಗ್ ಅವರು ಹೇಳಿಕೆ ನೀಡಿದ್ದಾರೆ. ಮಾರ್ಗಸೂಚಿಗಳನ್ನು ಅಂತಿಮಗೊಳಿಸಲಾಗುತ್ತಿದ್ದು, ಅಲ್ಪಾವಧಿಯಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ... ಶಬ್ದಕೋಶದ ಅರ್ಥಕ್ಕೆ ಅನುಗುಣವಾಗಿ ಅರಣ್ಯಕ್ಕೆ ಸಂಬಂಧಿಸಿದಂತೆ ಮುಂದಿನ ಆದೇಶದವರೆಗೆ ಭಾರತ ಸರ್ಕಾರವು ಯಾವುದೇ ದುರುದ್ದೇಶಿತ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಭಿವೃದ್ಧಿ ಚಟುವಟಿಕೆಗಳನ್ನು ನಿಷೇಧಿಸುವ ನಿಬಂಧನೆಗಳನ್ನು ಸಡಿಲಿಸುವ ಅರಣ್ಯ ಸಂರಕ್ಷಣಾ ಕಾಯಿದೆಗೆ ಇತ್ತೀಚೆಗೆ ಮಾಡಲಾದ ತಿದ್ದುಪಡಿಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ನಿವೃತ್ತ ನಾಗರಿಕ ಸೇವಕರ ಗುಂಪು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಅರಣ್ಯ ಮತ್ತು ಅರಣ್ಯಗಳಲ್ಲಿ ಬೃಹತ್ ಯೋಜನೆಗಳು ಬರಲು ಅವಕಾಶ ನೀಡುವುದರಿಂದ ಸಂಕೀರ್ಣ ಪರಿಸರ ವ್ಯವಸ್ಥೆಗಳಿಗೆ ಅಡ್ಡಿಯಾಗಬಹುದು ಮತ್ತು ಅಳಿವಿನಂಚಿನಲ್ಲಿರುವ ಜೀವಿಗಳ ಉಳಿವಿಗೆ ಅಪಾಯವಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ವಿವರಿಸಿದ್ದರು. ಈ ವಿಷಯದ ಬಗ್ಗೆ ನ್ಯಾಯಾಲಯವು ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೋರಿತ್ತು.

ಈ ತಿದ್ದುಪಡಿಗಳು ಈ ಹಿಂದೆ ಭಾರತದ ವಿಶಾಲ ಅರಣ್ಯ ಭೂಮಿಗೆ ನೀಡಲಾದ ಕಾನೂನು ರಕ್ಷಣೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ ಎಂದು ಎಂಬುದು ಅರ್ಜಿದಾರರ ವಾದವಾಗಿದೆ.

[ಆದೇಶ ಓದಿ]

Attachment
PDF
Ashok Kumar Sharma IFS and ors vs Union of India and ors.pdf
Preview
Kannada Bar & Bench
kannada.barandbench.com