ಅರಣ್ಯ ಭೂಮಿ ಒತ್ತುವರಿ: ರಮೇಶ್‌ ಕುಮಾರ್‌ ವಿರುದ್ಧ ಆತುರದ ಕ್ರಮಬೇಡ; ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್‌ ಆದೇಶ

ವಿಚಾರಣೆಯ ಒಂದು ಹಂತದಲ್ಲಿ ಪೀಠವು ಲಘುದಾಟಿಯಲ್ಲಿ “ಅರಣ್ಯ ಇಲಾಖೆಯ ಕಣ್ಣು ಎಲ್ಲಿ ಬೀಳುತ್ತದೋ ಅದು ಅರಣ್ಯ ಭೂಮಿಯಾಗುತ್ತದೆ” ಎಂದಿತು.
ಅರಣ್ಯ ಭೂಮಿ ಒತ್ತುವರಿ: ರಮೇಶ್‌ ಕುಮಾರ್‌ ವಿರುದ್ಧ ಆತುರದ ಕ್ರಮಬೇಡ; ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್‌ ಆದೇಶ
Published on

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಜಿನಗಲಕುಂಟೆಯ ಹೊಸಹುಡ್ಯದಲ್ಲಿರುವ ಸರ್ವೇ ನಂಬರ್‌ 1ರಲ್ಲಿನ 10 ಎಕರೆ 34 ಗುಂಟೆ ಹಾಗೂ ಸರ್ವೇ ನಂಬರ್‌ 2ರಲ್ಲಿನ 53 ಎಕರೆ 30 ಗುಂಟೆ ಜಮೀನಿಗೆ ಸಂಬಂಧಿಸಿದ ಮೇಲ್ಮನವಿಯ ವಿಚಾರಣೆಗೆ ಹಾಜರಾಗುವಂತೆ ವಿಧಾನಸಭಾ ಮಾಜಿ ಸಭಾಧ್ಯಕ್ಷ ಕೆ ಆರ್‌ ರಮೇಶ್‌ ಕುಮಾರ್‌ ಅವರಿಗೆ ಮೇಲ್ಮನವಿ ಪ್ರಾಧಿಕಾರಿಯಾದ ಅರಣ್ಯ ಸಂರಕ್ಷಣಾಧಿಕಾರಿ ನೀಡಿರುವ ನೋಟಿಸ್‌ ಸಂಬಂಧ ಯಾವುದೇ ಆತುರ ಕ್ರಮಕೈಗೊಳ್ಳಬಾರದು ಮತ್ತು ಪಕ್ಷಕಾರರು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಆದೇಶಿಸಿದೆ.

ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರ ಜಾರಿ ಮಾಡಿರುವ ನೋಟಿಸ್‌ ವಜಾ ಮಾಡಬೇಕು ಹಾಗೂ ಆಕ್ಷೇಪಾರ್ಹವಾದ ಭೂಮಿಗೆ ಸಂಬಂಧಿಸಿದಂತೆ ನಡೆಸಲಾಗಿರುವ ಮೂರು ಸರ್ವೇ ವರದಿಯ ಕುರಿತು ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ರಮೇಶ್‌ ಕುಮಾರ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ವಾದ-ಪ್ರತಿವಾದ ಆಲಿಸಿದ ಪೀಠವು “ಮುಂದಿನ ವಿಚಾರಣೆವರೆಗೆ ಪ್ರತಿವಾದಿಗಳು ಯಾವುದೇ ಆತುರದ ಕ್ರಮಕೈಗೊಳ್ಳಬಾರದು ಮತ್ತು ಪಕ್ಷಕಾರರು ಯಥಾಸ್ಥಿತಿ ಕಾಯ್ದುಕೊಳ್ಳಬೇಕು” ಎಂದು ನ್ಯಾಯಾಲಯ ಆದೇಶಿಸಿದ್ದು, ವಿಚಾರಣೆಯನ್ನು ಮಾರ್ಚ್‌ 10ಕ್ಕೆ ಮುಂದೂಡಿದೆ.

ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲ ಆರ್‌ ಶ್ರೀನಿವಾಸ್‌ ಗೌಡ ಅವರು “ಕಂದಾಯ ಭೂಮಿಯಿಂದ ರಮೇಶ್‌ ಕುಮಾರ್‌ ಅವರನ್ನು ತೆರವು ಮಾಡಲು ಅರಣ್ಯ ಇಲಾಖೆಯವರು ಪ್ರಯತ್ನಿಸಿದ್ದರು. ಇದನ್ನು ಪ್ರಶ್ನಿಸಿ ಮೇಲ್ಮನವಿ ಪ್ರಾಧಿಕಾರಿಯಾದ ಅರಣ್ಯ ಸಂರಕ್ಷಣಾಧಿಕಾರಿಯ ಮುಂದೆ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕಾರವಾಗಿತ್ತು. ಆದರೆ, 2014ರಲ್ಲಿ ಮೇಲ್ಮನವಿ ಪ್ರಾಧಿಕಾರಿಯಾದ ಅರಣ್ಯ ಸಂರಕ್ಷಣಾಧಿಕಾರಿಯವರ ಆದೇಶವನ್ನು ಹೈಕೋರ್ಟ್‌ ಬದಿಗೆ ಸರಿಸಿ, ಸರ್ವೇ ನಡೆಸುವಂತೆ ಸೂಚಿಸಿತ್ತು. ಆನಂತರ ಎರಡು ಸರ್ವೇ ನಡೆಸಿ, ಅದರ ವರದಿಯನ್ನು ಸರ್ಕಾರದ ಮುಂದೆ ಇಡಲಾಗಿದೆ” ಎಂದರು.

ರಾಜ್ಯ ಸರ್ಕಾರದ ಪರ ವಕೀಲರು “ರಮೇಶ್‌ ಕುಮಾರ್‌ ಅವರು ಶೋಕಾಸ್‌ ನೋಟಿಸ್‌ ಪ್ರಶ್ನಿಸಿದ್ದಾರೆ. ಸುಮಾರು 60 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಳ್ಳಲಾಗಿದೆ” ಎಂದರು.

ವಿಚಾರಣೆಯ ಒಂದು ಹಂತದಲ್ಲಿ ಪೀಠವು ಲಘುದಾಟಿಯಲ್ಲಿ “ಅರಣ್ಯ ಇಲಾಖೆಯ ಕಣ್ಣು ಎಲ್ಲಿ ಬೀಳುತ್ತದೋ ಅದು ಅರಣ್ಯ ಭೂಮಿಯಾಗುತ್ತದೆ” ಎಂದಿತು.

Also Read
ಅರಣ್ಯ ಭೂಮಿ ಒತ್ತುವರಿ: ಜಂಟಿ ಸರ್ವೇ ವರದಿ ಪ್ರಶ್ನಿಸಲು ರಮೇಶ್‌ ಕುಮಾರ್‌ಗೆ ಅವಕಾಶ ನೀಡಿ ಅರ್ಜಿ ವಿಲೇವಾರಿ

ಪ್ರಕರಣದ ಹಿನ್ನೆಲೆ: 2013ರ ಜುಲೈ 11ರಂದು ನ್ಯಾಯಮೂರ್ತಿ ಎ ಎಸ್‌ ಬೋಪಣ್ಣ ಅವರ ಏಕಸದಸ್ಯ ಪೀಠವು “ಕೋಲಾರ ಜಿಲ್ಲಾಧಿಕಾರಿ, ಭೂ ದಾಖಲೆ ಇಲಾಖೆಯ ಉಪನಿರ್ದೇಶಕರು, ರಮೇಶ್‌ ಕುಮಾರ್‌ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಇತರೆ ಅಧಿಕಾರಿಗಳ ಸಮ್ಮುಖದಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಯ ಗಡಿ ಗುರುತಿಸಬೇಕು. ರಮೇಶ್‌ ಕುಮಾರ್‌ ಅವರು ಖರೀದಿಸಿರುವ ಭೂಮಿಯನ್ನು ಅಳತೆ ಮಾಡಬೇಕು. ಆನಂತರ ರಮೇಶ್‌ ಕುಮಾರ್‌ ಅವರು ಖರೀದಿಸಿರುವ ಭೂಮಿಯು ಅರಣ್ಯ ಭೂಮಿಯ ವ್ಯಾಪ್ತಿಗೆ ಬರುತ್ತದೋ ಅಥವಾ ಕಂದಾಯ ಭೂಮಿ ವ್ಯಾಪ್ತಿಗೆ ಬರುತ್ತದೋ ಎಂಬುದನ್ನು ನಿರ್ಧರಿಸಬೇಕು" ಎಂದು ಆದೇಶಿಸಿ, ಅರಣ್ಯ ಸಂರಕ್ಷಣಾಧಿಕಾರಿ ನೋಟಿಸ್‌ ಅನ್ನು ವಜಾಗೊಳಿಸಿತ್ತು.

ಇದು ಹಾಗೂ ಆಕ್ಷೇಪಾರ್ಹವಾದ ಭೂಮಿಗೆ ಸಂಬಂಧಿಸಿದ ಜಂಟಿ ಮೋಜಣಿ ಕಾರ್ಯವು ಪೂರ್ಣಗೊಂಡಿರುವುದರಿಂದ ಮೇಲ್ಮನವಿಯ ವಿಚಾರಣೆಯನ್ನು 2025ರ ಫೆಬ್ರವರಿ 20ಕ್ಕೆ ನಿಗದಿಗೊಳಿಸಲಾಗಿದ್ದು, ಅಂದು ವಿಚಾರಣೆಗೆ ಹಾಜರಾಗುವಂತೆ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರವು ಫೆಬ್ರವರಿ 10ರಂದು ರಮೇಶ್‌ ಕುಮಾರ್‌ ಅವರಿಗೆ ನೋಟಿಸ್‌ ಜಾರಿ ಮಾಡಿದೆ. ಇದನ್ನು ವಜಾ ಮಾಡಬೇಕು ಎಂದು ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Kannada Bar & Bench
kannada.barandbench.com