ಮತದಾರರ ಚೀಟಿಯಲ್ಲಿನ ಸಹಿ ನಕಲು ಪ್ರಕರಣದಲ್ಲಿ ಖುಲಾಸೆಗೊಳಿಸಲು ನಿರಾಕರಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಾಜಿ ಶಾಸಕ ಹಾಗೂ ಉದ್ಯಮಿ ಅಶೋಕ್ ಖೇಣಿ ಹಾಗೂ ಅವರ ಸಹೋದರ ಸಂಜಯ್ ಖೇಣಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಈಚೆಗೆ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಖೇಣಿ ಸಹೋದರರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು. ಕಾಲಾವಕಾಶದ ಕೊರತೆಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 5ರಂದು ವಿಚಾರಣೆ ನಡೆಸುವುದಾಗಿ ಪೀಠ ಸೋಮವಾರ ಹೇಳಿತು.
2022ರ ಏಪ್ರಿಲ್ 16ರ ವಿಶೇಷ ನ್ಯಾಯಾಲಯದ ಆದೇಶವು ವಿವೇಚನಾರಹಿತವಾಗಿದ್ದು, ಅದನ್ನು ಬದಿಗೆ ಸರಿಸಬೇಕು. ಅಲ್ಲದೇ, ತಮ್ಮ ವಿರುದ್ಧದ ಆರೋಪವನ್ನು ವಜಾ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಫಾರ್ಮ್ ಆರರಲ್ಲಿನ ಸಹಿ ನಕಲಿಗೆ ಸಂಬಂಧಿಸಿದಂತೆ ತಾನೇ ಆಕ್ಷೇಪ ಎತ್ತದಿರುವಾಗ ಇದರಿಂದ ದೂರುದಾರರು ಹೇಗೆ ಬಾಧಿತರಾಗುತ್ತಾರೆ ಎಂದು ಖೇಣಿ ಆಕ್ಷೇಪಿಸಿದ್ದಾರೆ.
ಪ್ರಕರಣದ ಹಿನ್ನೆಲೆ: 2013ರ ಏಪ್ರಿಲ್ 1ರಂದು ಬೀದರ್ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರಿಸುವಂತೆ ಕೋರಿ ಅಶೋಕ್ ಖೇಣಿ ಸಲ್ಲಿಸಿದ್ದ ಫಾರ್ಮ್ 6ರಲ್ಲಿ ಅವರು ಸಹಿ ಮಾಡಿರಲಿಲ್ಲ. ಬದಲಿಗೆ ಅಶೋಕ್ ಖೇಣಿ ಅವರ ಸಹಿಯನ್ನು ಅವರ ಸಹೋದರ ಸಂಜಯ್ ಖೇಣಿ ನಕಲು ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಶೋಕ್ ಖೇಣಿ ಅವರು ವಿದೇಶ ಪ್ರವಾಸದಲ್ಲಿದ್ದರು ಎಂದು ಆರೋಪಿಸಿ ಅಬ್ರಹಾಂ ಖಾಸಗಿ ದೂರು ದಾಖಲಿಸಿದ್ದರು.
ಇದರ ಅನ್ವಯ ಖೇಣಿ ಸಹೋದರರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 120-ಬಿ, 167, 177, 192, 193, 196, 197, 198, 199, 200, 217, 218, 409, 415, 420, 464, 468, 471 ಜೊತೆಗೆ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 31(ಎ) ಮತ್ತು (ಬಿ) ಜೊತೆಗೆ ಚುನಾವಣಾ ನಿಯಮಗಳ ನೋಂದಣಿ ನಿಯಮ 26ರ ಅಡಿ ಪ್ರಕರಣ ದಾಖಲಾಗಿದೆ. ತಮ್ಮ ವಿರುದ್ಧ ಆರೋಪ ನಿಗದಿಪಡಿಸಲು ಯಾವುದೇ ದಾಖಲೆಗಳು ಇಲ್ಲದಿರುವುದರಿಂದ ಖುಲಾಸೆಗೊಳಿಸುವಂತೆ ಖೇಣಿ ಸಹೋದರರು ಕೋರಿದ್ದರು. ಇದನ್ನು ಒಪ್ಪದ ವಿಶೇಷ ನ್ಯಾಯಾಲಯವು ಖೇಣಿ ಸಹೋದರರ ಮನವಿಯನ್ನು ವಜಾ ಮಾಡಿತ್ತು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಖೇಣಿ ಸಹೋದರರು ಮನವಿ ಸಲ್ಲಿಸಿದ್ದಾರೆ.