ಕೇರಳ, ತಮಿಳುನಾಡು ರಾಜ್ಯಪಾಲರ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಮಾಜಿ ಎಜಿಗಳಾದ ವೇಣುಗೋಪಾಲ್, ರೋಹಟ್ಗಿ

ತಂತಮ್ಮ ರಾಜ್ಯಪಾಲರ ವಿರುದ್ಧ ಎರಡೂ ರಾಜ್ಯಗಳು ಸಲ್ಲಿಸಿದ ಅರ್ಜಿಗಳಿಗೆ ಸಂಬಂಧಿಸಿದಂತೆ ವೇಣುಗೋಪಾಲ್ ಅವರು ಕೇರಳ ಸರ್ಕಾರವನ್ನು ಪ್ರತಿನಿಧಿಸಿದರೆ, ರೋಹಟ್ಗಿ ಅವರು ತಮಿಳುನಾಡು ಸರ್ಕಾರದ ಪರ ವಾದ ಮಂಡಿಸಿದರು.
ವೇಣುಗೋಪಾಲ್, ಮುಕುಲ್ ರೋಹಟಗಿ ಮತ್ತು ಸುಪ್ರೀಂ ಕೋರ್ಟ್
ವೇಣುಗೋಪಾಲ್, ಮುಕುಲ್ ರೋಹಟಗಿ ಮತ್ತು ಸುಪ್ರೀಂ ಕೋರ್ಟ್

ರಾಜ್ಯಪಾಲರ ವಿರುದ್ಧ ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಹೂಡಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಭಾರತದ ಮಾಜಿ ಅಟಾರ್ನಿ ಜನರಲ್‌ಗಳಾದ ಕೆ ಕೆ ವೇಣುಗೋಪಾಲ್ ಮತ್ತು ಮುಕುಲ್ ರೋಹಟ್ಗಿ ಅವರು ಕ್ರಮವಾಗಿ ಆ ಎರಡೂ ರಾಜ್ಯಗಳ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ವಾದ ಮಂಡಿಸಿದರು.

ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧದ ಅರ್ಜಿ ಕುರಿತಂತೆ ವೇಣುಗೋಪಾಲ್ ಅವರು ಕೇರಳ ಸರ್ಕಾರವನ್ನು ಪ್ರತಿನಿಧಿಸಿದರೆ, ರೋಹಟ್ಗಿ ಅವರು ರಾಜ್ಯಪಾಲ ಆರ್‌ ರವಿ ವಿರುದ್ಧ ತಮಿಳುನಾಡು ಸರ್ಕಾರದ ಪರ ವಾದ ಮಂಡಿಸಿದರು.

ಮಸೂದೆಗಳನ್ನು ಅಂಗೀಕರಿಸಲು ಆಯಾ ರಾಜ್ಯಪಾಲರು ಚುನಾಯಿತ ಸರ್ಕಾರಗಳೊಂದಿಗೆ ಸಹಕರಿಸುತ್ತಿಲ್ಲ ಎಂದು ಎರಡೂ ರಾಜ್ಯ ಸರ್ಕಾರಗಳು ಆರೋಪಿಸಿವೆ.

ಸಾರ್ವಜನಿಕ ಸೇವಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ಮತ್ತು ವಿವಿಧ ಕೈದಿಗಳ ಅಕಾಲಿಕ ಬಿಡುಗಡೆಗೆ ಸಂಬಂಧಿಸಿದ ಕಡತ ಸೇರಿದಂತೆ ಹಲವು ನಿರ್ಣಾಯಕ ಮಸೂದೆಗಳನ್ನು ರಾಜ್ಯಪಾಲ ರವಿ ಪರಿಗಣಿಸುತ್ತಿಲ್ಲ ಎಂದು ಡಿಎಂಕೆ ನೇತೃತ್ವದ ಸರ್ಕಾರ ವಾದಿಸಿದೆ. ಇತ್ತೀಚೆಗೆ, ರಾಜ್ಯ ಶಾಸಕಾಂಗವು ಅಂಗೀಕರಿಸಿದ 12 ಮಸೂದೆಗಳಿಗೆ ಒಪ್ಪಿಗೆ ನೀಡಲು ತಮಿಳುನಾಡು ರಾಜ್ಯಪಾಲರು ನಿರಾಕರಿಸಿದ್ದಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು.

ಕೇರಳ ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡಲು ಕೇರಳ ರಾಜ್ಯಪಾಲರು ವಿಳಂಬ ಮಾಡುತ್ತಿದ್ದಾರೆ ಎಂದು ಸಿಪಿಎಂ ಸರ್ಕಾರ ಇದೇ ರೀತಿಯ ಕಳವಳ ವ್ಯಕ್ತಪಡಿಸಿತ್ತು.

"ಇದು ಸ್ಥಳೀಯ ಪರಿಸ್ಥಿತಿ... ಆರ್ಟಿಕಲ್ 168 ರ ಅಡಿಯಲ್ಲಿ ತಾವು ಶಾಸಕಾಂಗದ ಭಾಗವಾಗಿದ್ದೇವೆ ಎನ್ನುವುದನ್ನು ರಾಜ್ಯಪಾಲರು ಅರಿಯುತ್ತಿಲ್ಲ ... ಅವರು (ರಾಜ್ಯಪಾಲ ಖಾನ್) ಯಾವ ಮೂರು ಸುಗ್ರೀವಾಜ್ಞೆಗಳಿಗೆ ಸಹಿ ಹಾಕಿದ್ದರೋ ಅವುಗಳನ್ನು ಮಸೂದೆಯನ್ನಾಗಿ ಮಾಡಿದಾಗ ಅವುಗಳಿಗೆ ಸಮ್ಮತಿ ನೀಡಲು 2 ವರ್ಷಗಳ ಕಾಲ ವಿಳಂಬ ಮಾಡಿದ್ದಾರೆ " ಎಂದು ಕೇರಳ ಸರ್ಕಾರದ ಪರ ಹಾಜರಾದ ವೇಣುಗೋಪಾಲ್ ಇಂದು ವಾದಿಸಿದರು.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ಅವರನ್ನೊಳಗೊಂಡ ಪೀಠವು ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಲು ಮುಂದಾಯಿತು. ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡುವಂತೆ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅಥವಾ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಪೀಠ ಸೂಚಿಸಿತು.

ರಾಜ್ಯಪಾಲ ರವಿ ಅವರು ಕಾರಣವಿಲ್ಲದೆ ವಾಪಸ್ ಕಳುಹಿಸಿದ ಹತ್ತು ಮಸೂದೆಗಳನ್ನು ಮತ್ತೆ ಮಂಡಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿತು ಎಂದು ರೋಹಟ್ಗಿ ಇಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

"ಒಪ್ಪಿಗೆ ನೀಡುವುದಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ... ತಮಿಳುನಾಡು ವಿಧಾನಸಭೆ ಶನಿವಾರ ಮತ್ತೆ ವಿಧಾನಸಭೆಯ ವಿಶೇಷ ಅಧಿವೇಶನ ಕರೆದು ಎಲ್ಲಾ ಮಸೂದೆಗಳನ್ನು ಮತ್ತೆ ಮಂಡಿಸಿ ರಾಜ್ಯಪಾಲರ ಒಪ್ಪಿಗೆಗೆ ಕಳಿಸಿಕೊಟ್ಟಿದೆ" ಎಂದು ರೋಹಟ್ಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ತಮಿಳುನಾಡು ಸರ್ಕಾರದ ಪರವಾಗಿ ಹಿರಿಯ ವಕೀಲರಾದ ಅಭಿಷೇಕ್‌ ಮನು ಸಿಂಘ್ವಿ ಮತ್ತು ಪಿ ವಿಲ್ಸನ್ ವಾದ ಮಂಡಿಸಿದರು. "ಸರ್ಕಾರವೂ ನಡೆಯಬೇಕಿದ್ದು 7.3 ಕೋಟಿ ಜನರಿಗೆ ಉತ್ತರಿಸಬೇಕಾಗಿದೆ" ಎಂದು ವಿಲ್ಸನ್ ವಾದಿಸಿದರು.

"ಪ್ರತಿ ಬಾರಿಯೂ, ನಾವು (ಚುನಾಯಿತ ರಾಜ್ಯ ಸರ್ಕಾರ) ಸುಪ್ರೀಂ ಕೋರ್ಟ್‌ ಮೊರೆ ಹೋಗಲು ಸಾಧ್ಯವಿಲ್ಲ" ಎಂದು ರೋಹಟ್ಗಿ ಹೇಳಿದರು.

ತಮಿಳುನಾಡಿನ ರಾಜ್ಯಪಾಲರ ಬಳಿ ಹದಿನೈದು ಮಸೂದೆಗಳು ಬಾಕಿ ಉಳಿದಿವೆ ಎಂದು ಸಿಂಘ್ವಿ ವಿವರಿಸಿದರು.

"ವಿಧಾನಸಭೆಯು ಹತ್ತು ಮಸೂದೆಗಳನ್ನು ಮತ್ತೆ ಜಾರಿಗೆ ತಂದಿದ್ದು ಈಗ ಅವನ್ನು ಹಿಂದಕ್ಕೆ ಕಳುಹಿಸಲಾಗಿದೆ... ಒಟ್ಟು ಹದಿನೈದು ಮಸೂದೆಗಳು ಬಾಕಿ ಉಳಿದಿವೆ... ಅಕ್ಟೋಬರ್‌ನಲ್ಲಿನ ಐದು ಮಸೂದೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಹೋದರೂ, ಇನ್ನೂ ಹತ್ತು ಮಸೂದೆಗಳು ಬಾಕಿ ಉಳಿದಿವೆ... ಈಗ, ಮಸೂದೆಗಳನ್ನು ಮತ್ತೆ ಅಂಗೀಕರಿಸಿದ ನಂತರ (ರಾಜ್ಯಪಾಲರಿಗೆ) ಯಾವುದೇ ವಿವೇಚನೆ ಉಳಿಯುವುದಿಲ್ಲ... ಒಂದು ವೇಳೆ ತಪ್ಪು ಮಸೂದೆಗಳನ್ನೇ ಅಂಗೀಕರಿಸಿದರೂ... ಶಾಸಕಾಂಗಕ್ಕೆ ಹಾಗೆ ಮಾಡುವ ಹಕ್ಕು ಇದ್ದು ರಾಜ್ಯಪಾಲರಿಗೆ ಇದನ್ನು ತಡೆಯುವ ಯಾವುದೇ ಹಕ್ಕಿಲ್ಲ" ಎಂದು ಅವರು ವಾದಿಸಿದರು.

ಒಮ್ಮೆ ಮಸೂದೆಯನ್ನು ರಾಜ್ಯಪಾಲರಿಗೆ ಮರು ಕಳುಹಿಸಿದ ನಂತರ, ಅದು ಹಣಕಾಸು ಮಸೂದೆಯಂತೆಯೇ ಇರುತ್ತದೆ ಎಂದು ಸಿಜೆಐ ಮೌಖಿಕವಾಗಿ ಗಮನಿಸಿದರು. ರಾಜ್ಯಪಾಲರ ನಡವಳಿಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ಸಿಜೆಐ, ಇಂತಹ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಉನ್ನತ ನ್ಯಾಯಾಲಯವನ್ನು ಒತ್ತಾಯಿಸಬಾರದು ಎಂದು ಸುಳಿವು ನೀಡಿತು

"...ಅವರು (ರಾಜ್ಯಪಾಲರು) ನವೆಂಬರ್ 13ರಂದು ಮಸೂದೆಗಳನ್ನು ವಿಲೇವಾರಿ ಮಾಡಿದ್ದಾರೆ ಎಂದು ಹೇಳಲಾಗಿದೆ. ನಮ್ಮ ಆದೇಶವು (ಪಂಜಾಬ್ ರಾಜ್ಯಪಾಲರಿಗೆ ಸಂಬಂಧಿಸಿದ ಇದೇ ರೀತಿಯ ಪ್ರಕರಣದಲ್ಲಿ) ನವೆಂಬರ್ 10 ರಂದು ಹೊರಬಿದ್ದಿದೆ ... ಮಸೂದೆಗಳು ಜನವರಿ 2020ರಿಂದ ಬಾಕಿ ಉಳಿದಿವೆ ... ಹೀಗಾಗಿ ನಮ್ಮ ಆದೇಶದ ನಂತರ ಕ್ರಮ ಕೈಗೊಳ್ಳಲಾಗಿದೆ... ಕಳೆದ ಮೂರು ವರ್ಷಗಳಿಂದ ರಾಜ್ಯಪಾಲರು ಏನು ಮಾಡುತ್ತಿದ್ದರು?... ಈ ಪ್ರಕರಣಗಳು ಸುಪ್ರೀಂ ಕೋರ್ಟ್ ಗೆ ಏಕೆ ಬರಬೇಕು?" ಎಂದು ಅವರು ಸಿಡಿಮಿಡಿಗೊಂಡರು.

"ಪುನರುಚ್ಚರಿಸುವ" ಪ್ರಕ್ರಿಯೆಯನ್ನೇ ಕೈಗೊಳ್ಳುತ್ತಿದ್ದರೆ ಆಗ ಅಂತಹ ಪ್ರಕರಣಗಳು ಸುಪ್ರೀಂ ಕೋರ್ಟ್‌ಗೆ ಮರಳುತ್ತಲೇ ಇರುತ್ತವೆ ಎಂದು ಸಿಂಘ್ವಿ ಹೇಳಿದರು. "ತಮಿಳುನಾಡು ರಾಜ್ಯಪಾಲರು (ಸಂವಿಧಾನದ) 200ನೇ ವಿಧಿಯ ಪ್ರತಿಯೊಂದು ಪದವನ್ನು ಉಲ್ಲಂಘಿಸಿದ್ದಾರೆ" ಎಂದು ಅವರು ಪ್ರತಿಪಾದಿಸಿದರು.

ನಿರ್ದಿಷ್ಟ ಕಾನೂನನ್ನು ಜಾರಿಗೆ ತರಲು ಶಾಸಕಾಂಗ ಸಾಮರ್ಥ್ಯದ ಬಗ್ಗೆ ಅನುಮಾನಗಳಿದ್ದರೆ ರಾಜ್ಯಪಾಲರು ಮಸೂದೆಗಳನ್ನು ಹಿಂದಕ್ಕೆ ಕಳುಹಿಸಬೇಕಾದ ಸಂದರ್ಭಗಳು ಇರಬಹುದು ಎಂದು ನ್ಯಾಯಾಲಯ ಗಮನಿಸಿದೆ. ಆದರೆ ಅಂತಹ ಅಧಿಕಾರಗಳಿಗೂ ಮಿತಿಗಳಿವೆ ಎಂದು ಅರ್ಜಿದಾರ-ವಕೀಲರು ಉತ್ತರಿಸಿದರು.

"ರಾಜ್ಯಪಾಲರು ಮಸೂದೆಗಳಿಗೆ ಸಂಬಂಧಿಸಿದಂತೆ ಅನಿರ್ದಿಷ್ಟವಾಗಿ ವಿಳಂಬ ಮಾಡುವಂತಿಲ್ಲ" ಎಂದು ವಿಲ್ಸನ್ ವಾದಿಸಿದರು.

ಈ ಮಧ್ಯೆ, ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸುವ ಮೂಲಕ ತಮ್ಮ ಮಸೂದೆಗಳಿಗೆ ಪರೋಕ್ಷ ಒಪ್ಪಿಗೆ ಪಡೆಯಲು ಪ್ರಯತ್ನಿಸಲು ಸಾಧ್ಯವಿಲ್ಲ ಎಂದು ವಾದಿಸಿದ ಅಟಾರ್ನಿ ಜನರಲ್ ವೆಂಕಟರಮಣಿ ಪ್ರಕರಣವನ್ನು ನವೆಂಬರ್ 29 ಕ್ಕೆ ಮುಂದೂಡುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು.

ರವಿ ಅವರನ್ನು ತಮಿಳುನಾಡಿನ ರಾಜ್ಯಪಾಲರಾಗಿ ನೇಮಿಸುವ ಮೊದಲೇ ಅಂದರೆ 2020ರ ಜನವರಿಯಿಂದಲೇ ಅನೇಕ ಮಸೂದೆಗಳು ಬಾಕಿ ಉಳಿದಿವೆ ಎಂದು ಅವರು ಗಮನಸೆಳೆದರು.

ಮನವಿ ಪುರಸ್ಕರಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಡಿಸೆಂಬರ್ 1ಕ್ಕೆ ನಿಗದಿಪಡಿಸಿತು.

ಶಾಸಕಾಂಗ ಅಂಗೀಕರಿಸಿದ ಅಥವಾ ಮಂಡಿಸಲು ಉದ್ದೇಶಿಸಿರುವ ಮಸೂದೆಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡುವಲ್ಲಿ ವಿಳಂಬ ಮಾಡಿರುವುದನ್ನು ಪ್ರಶ್ನಿಸಿ ಪಂಜಾಬ್‌ನ ಎಎಪಿ ಸರ್ಕಾರ ಇದೇ ರೀತಿಯ ಅರ್ಜಿಯನ್ನು ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ರಾಜ್ಯದ ಶಾಸಕಾಂಗವು ಸಲ್ಲಿಸಿದ್ದ ಮಸೂದೆಗಳ ಬಗ್ಗೆ ನಿರ್ಧಾರ ಕೈಗೊಳ್ಳವಂತೆ ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರಿಗೆ ಆದೇಶಿಸಿತ್ತು.

Related Stories

No stories found.
Kannada Bar & Bench
kannada.barandbench.com