ಲಂಚ ಪ್ರಕರಣ: ಐಎಎಸ್‌ ಅಧಿಕಾರಿ ಮಂಜುನಾಥ್‌ಗೆ 14 ದಿನ ನ್ಯಾಯಾಂಗ ಬಂಧನ

ಲಂಚ ಪ್ರಕರಣದಲ್ಲಿ ಮಂಜುನಾಥ್‌ ಅವರು ಮೂರನೇ ಆರೋಪಿ ಎಂದು ಉಲ್ಲೇಖಿಸಲಾಗಿದೆ.
Arrested IAS officer J Manjunath
Arrested IAS officer J Manjunath

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ಹಾಗೂ ಹಾಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ (ಐಸಿಡಿಎಸ್‌) ನಿರ್ದೇಶಕ ಜೆ ಮಂಜುನಾಥ್‌ ಅವರನ್ನು ವಿಶೇಷ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಆರೋಪಿ ಮಂಜುನಾಥ್‌ ಅವರನ್ನು ತಡರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಈ ಸಂದರ್ಭದಲ್ಲಿ 23ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ ಲಕ್ಷ್ಮಿನಾರಾಯಣ್‌ ಭಟ್‌ ಅವರು ಮಂಜುನಾಥ್‌ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದರು.

ಬೆಂಗಳೂರಿನ ಯಶವಂತಪುರದಲ್ಲಿ ಎಸಿಬಿ ಡಿವೈಎಸ್‌ಪಿ ಕೆ ರವಿಶಂಕರ್‌ ಅವರ ತಂಡವು ಮಧ್ಯಾಹ್ನ ಮಂಜುನಾಥ್‌ ಅವರನ್ನು ಬಂಧಿಸಿತು. ನಾಲ್ಕು ದಿನಗಳ ಹಿಂದಷ್ಟೇ ಮಂಜುನಾಥ್‌ ಅವರನ್ನು ಬೆಂಗಳೂರು ಜಿಲ್ಲಾಧಿಕಾರಿ ಹುದ್ದೆಯಿಂದ ಐಸಿಡಿಎಸ್‌ ನಿರ್ದೇಶಕರ ಹುದ್ದೆಗೆ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು.

ಆನೇಕಲ್‌ ತಾಲ್ಲೂಕಿನ ಕೂಡ್ಲು ಗ್ರಾಮದ 38ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದಂತೆ ಅನುಕೂಲಕರ ಆದೇಶ ಮಾಡಲು ಅಜಂ ಪಾಷಾ ಎಂಬುವರಿಂದ 5 ಲಕ್ಷ ರೂಪಾಯಿ ಪಡೆಯುತ್ತಿದ್ದಾಗ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯ ವ್ಯವಸ್ಥಾಪಕ ಮಹೇಶ್‌ ಮತ್ತು ನ್ಯಾಯಾಲಯ ವಿಭಾಗದ ಸಹಾಯಕ ಚೇತನ್‌ ಕುಮಾರ್‌ ಅಲಿಯಾಸ್‌ ಚಂದ್ರ ಅವರನ್ನು ಮೇ 21ರಂದು ಎಸಿಬಿ ಬಂಧಿಸಿತ್ತು. ಈ ಪ್ರಕರಣದಲ್ಲಿ ಮಂಜುನಾಥ್‌ ಅವರನ್ನು ಮೂರನೇ ಆರೋಪಿ ಎಂದು ಉಲ್ಲೇಖಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com