ಲೋಕಸಭೆ ಚುನಾವಣೆ ನಡೆಯುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನುಕ್ರಮವಾಗಿ ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಮದನ್ ಲೋಕೂರ್ ಮತ್ತು ಎ ಪಿ ಶಾ ಅವರು ಸಾರ್ವಜನಿಕ ಚರ್ಚೆಗೆ ಆಹ್ವಾನಿಸಿದ್ದಾರೆ.
ಈ ಪ್ರಸ್ತಾವನೆ ಪಕ್ಷಾತೀತವಾಗಿದ್ದು ರಾಷ್ಟ್ರೀಯ ಹಿತಾಸಕ್ತಿಯಿಂದ ಕೂಡಿದೆ ಎಂದು ಈ ಇಬ್ಬರೂ ರಾಜಕೀಯ ನಾಯಕರಿಗೆ ಬರೆದ ಪತ್ರದಲ್ಲಿ ನ್ಯಾಯಮೂರ್ತಿಗಳಾದ ಲೋಕೂರ್ ಮತ್ತು ಶಾ ಹಾಗೂ ದ ಹಿಂದೂ ಪತ್ರಿಕೆಯ ಮಾಜಿ ಸಂಪಾದಕ ಎನ್ ರಾಮ್ ಅವರು ತಿಳಿಸಿದ್ದಾರೆ.
ಪಕ್ಷಾತೀತವಾಗಿ ಮತ್ತು ವಾಣಿಜ್ಯೇತರ ವೇದಿಕೆಯಲ್ಲಿ ನಡೆಸುವ ಸಾರ್ವಜನಿಕ ಚರ್ಚೆಯಿಂದ ನಾಗರಿಕರಿಗೆ ಹೆಚ್ಚು ಉಪಯೋಗವಾಗಲಿದ್ದು ಇದು ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನು ಬಲಪಡಿಸುತ್ತದೆ ಎಂದು ಅವರು ವಿವರಿಸಿದ್ದಾರೆ.
ನಮ್ಮ ದೇಶ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದರಿಂದ ಈ ಚರ್ಚೆ ಹೆಚ್ಚು ಪ್ರಸ್ತುತವಾಗಿದ್ದು ದೇಶದ ಚುನಾವಣೆಯನ್ನು ಜಗತ್ತು ಬಿಡುಗಣ್ಣಿನಿಂದ ನೋಡುತ್ತಿದೆ. ಆದ್ದರಿಂದ ಸಾರ್ವಜನಿಕ ಚರ್ಚೆ ಜನರಿಗೆ ಅರಿವು ಮೂಡಿಸುವುದು ಮಾತ್ರವಲ್ಲದೆ ಆರೋಗ್ಯಕರ ಮತ್ತು ಸದೃಢ ಪ್ರಜಾಪ್ರಭುತ್ವದ ನೈಜ ಚಿತ್ರಣವನ್ನು ಬಿಂಬಿಸುವುದಕ್ಕೂ ನಿದರ್ಶನವಾಗಲಿದೆ ಎಂದು ತಿಳಿಸಲಾಗಿದೆ.
ಸಮಾವೇಶ ಮತ್ತು ಸಾರ್ವಜನಿಕ ಭಾಷಣಗಳ ಸಮಯದಲ್ಲಿ, ಬಿಜೆಪಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಎರಡೂ ಪಕ್ಷಗಳ ಸದಸ್ಯರು ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದ ತಿರುಳಿಗೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳನ್ನು ಪರಸ್ಪರ ಕೇಳಿದ್ದಾರೆ. ಆದರೆ ಎರಡೂ ಕಡೆಯಿಂದ ಅರ್ಥಪೂರ್ಣ ಪ್ರತಿಕ್ರಿಯೆಗಳು ಬಂದಿಲ್ಲ. ತಪ್ಪು ಮಾಹಿತಿ ಮತ್ತು ತಿರುಚಲಾದ ನಿರೂಪಣೆಯನ್ನು ಒದಗಿಸುವ ಇಂದಿನ ಡಿಜಿಟಲ್ ಜಗತ್ತಿನಲ್ಲಿ ಚರ್ಚೆಯ ಎಲ್ಲಾ ಅಂಶಗಳ ಬಗ್ಗೆ ಸಾರ್ವಜನಿಕರಿಗೆ ಉತ್ತಮ ಅರಿವು ಇರುವಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ನಿಟ್ಟಿನಲ್ಲಿ, ನ್ಯಾಯಮೂರ್ತಿ ಲೋಕುರ್ ಮತ್ತು ಶಾ, ಎನ್ ರಾಮ್ ಅವರೊಂದಿಗೆ ಪ್ರಮುಖ ಚುನಾವಣಾ ವಿಷಯಗಳ ಕುರಿತು ಈ ಚರ್ಚೆಯಲ್ಲಿ ಭಾಗವಹಿಸಲು ಮೋದಿ ಮತ್ತು ಗಾಂಧಿ ಅವರಿಗೆ ಆಹ್ವಾನ ನೀಡಲಾಗಿದೆ. ಸ್ಥಳ, ಅವಧಿ, ನಿರೂಪಕರು ಹಾಗೂ ಚರ್ಚೆಯ ಸ್ವರೂಪವನ್ನು ಪರಸ್ಪರ ಒಪ್ಪುವಂತೆ ಸೂಚಿಸಿದ್ದಾರೆ. ಅವರು ಹಾಜರಾಗಲು ಸಾಧ್ಯವಾಗದಿದ್ದರೆ ತಮ್ಮ ಪ್ರತಿನಿಧಿಗಳನ್ನಾದರೂ ಕಳಿಸಿಕೊಡುವಂತೆ ಕೋರಲಾಗಿದೆ.