ಕಸಾಪ ಮಾಜಿ ಅಧ್ಯಕ್ಷ ಮಹೇಶ್ ಜೋಶಿಯಿಂದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ: ಆಡಳಿತಾಧಿಕಾರಿಗೆ ಹೈಕೋರ್ಟ್‌ ನೋಟಿಸ್‌

ಕಸಾಪ ಮಾಜಿ ಅಧ್ಯಕ್ಷರ ವಿರುದ್ಧ ತಳೆಯುವ ಯಾವುದೇ ನಿಲುವನ್ನು ಅಥವಾ ನಿರ್ಧಾರವನ್ನು ಮುಂದಿನ ವಿಚಾರಣೆವರೆಗೆ ಜಾರಿಗೊಳಿಸಬಾರದು ಎಂದು 2025ರ ಫೆಬ್ರವರಿ 25ರಂದು ಏಕಸದಸ್ಯ ಪೀಠ ನೀಡಿದ್ದ ತಡೆ ಆದೇಶ ಉಲ್ಲಂಘಿಸಲಾಗಿದೆ ಎಂದು ಜೋಶಿ ಆರೋಪಿಸಿದ್ದಾರೆ.
Mahesh Joshi and Karnataka HC
Mahesh Joshi and Karnataka HC
Published on: 

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಮಹೇಶ್ ಜೋಶಿ ಹೂಡಿರುವ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪರಿಷತ್ತಿನ ಆಡಳಿತಾಧಿಕಾರಿ ಕೆ ಎ ದಯಾನಂದ್ ಅವರಿಗೆ ಕರ್ನಾಟಕ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿಗೊಳಿಸಿದೆ.

ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಆಡಳಿತಾಧಿಕಾರಿ ಜಾರಿಗೊಳಿಸಿದ್ದ ಷೋಕಾಸ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯಲ್ಲಿ ಕಸಾಪ ಮಾಜಿ ಅಧ್ಯಕ್ಷರ ವಿರುದ್ಧ ತಳೆಯುವ ಯಾವುದೇ ನಿಲುವನ್ನು ಅಥವಾ ನಿರ್ಧಾರವನ್ನು ಮುಂದಿನ ವಿಚಾರಣೆವರೆಗೆ ಜಾರಿಗೊಳಿಸಬಾರದು ಎಂದು 2025ರ ಫೆಬ್ರವರಿ 25ರಂದು ಏಕಸದಸ್ಯ ಪೀಠ ನೀಡಿದ್ದ ತಡೆ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಆಡಳಿತಾಧಿಕಾರಿ ದಯಾನಂದ್ ವಿರುದ್ಧ ಮಹೇಶ್ ಜೋಶಿ ದಾಖಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಮತ್ತು ಎನ್ ವಿ ಭವಾನಿ ಅವರ ವಿಭಾಗೀಯ ಪೀಠ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಕಸಾಪದ ಆಡಳಿತಾಧಿಕಾರಿ ಕೆ ಎ ದಯಾನಂದ್ ಅವರಿಗೆ ನೋಟಿಸ್ ಜಾರಿಗೊಳಿಸಿ, ನ್ಯಾಯಾಲಯದ ತಡೆ ಆದೇಶವಿದ್ದರೂ, ಅದನ್ನು ಪಾಲಿಸದಿರುವ ಕುರಿತು ವಿಬರಣೆ ನೀಡುವಂತೆ ಸೂಚಿಸಿ ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿತು. ಮಹೇಶ್ ಜೋಶಿ ಪರ ವಕೀಲ ಚಿಂತನ್ ಎಂ. ಚಿನ್ನಪ್ಪ ವಾದಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರ ಪ್ರಕರಣದಲ್ಲಿ ಜೋಶಿ ವಿರುದ್ಧದ ಆರೋಪ ಆರೋಪಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಆಡಳಿತಾಧಿಕಾರಿ 2026ರ ಫೆಬ್ರವರಿ 10ರಂದು ಷೋಕಾಸ್ ಜಾರಿಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಪ್ರಕರಣದಲ್ಲಿ ಜೋಶಿಯವರ ವಿರುದ್ಧ ತೆಗೆದುಕೊಳ್ಳುವ ಯಾವುದೇ ನಿಲುವು ಅಥವಾ ನಿರ್ಧಾರವನ್ನು ಮುಂದಿನ ವಿಚಾರಣೆವರೆಗೆ ಜಾರಿಗೊಳಿಸಬಾರದು ಎಂದು 2026ರ ಫೆಬ್ರವರಿ 25ರಂದು ಏಕಸದಸ್ಯ ನ್ಯಾಪೀಠ ತಡೆ ಆದೇಶ ನೀಡಿ, ಅದನ್ನು ಕಾಲ-ಕಾಲಕ್ಕೆ ವಿಸ್ತರಿಸಿಕೊಂಡು ಬಂದಿದೆ. ಈಗಲೂ ಆ ತಡೆ ಆದೇಶ ಚಾಲ್ತಿಯಲ್ಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಈ ಮಧ್ಯೆ, ನ್ಯಾಯಾಲಯದ ತಡೆ ಆದೇಶವಿದ್ದರೂ ಆಡಳಿತಾಧಿಕಾರಿ ಜೋಶಿಯವರ ಕಸಾಪ ಅಜೀವ ಸದಸ್ಯತ್ವವನ್ನು ರದ್ದುಪಡಿಸಿ 2026ತ ಜೂನ್ 8ರಂದು ಆದೇಶ ಹೊರಡಿಸುತ್ತಾರೆ. ತಪ್ಪಿನ ಅರಿವಾದ ಬಳಿಕ ಅಜೀವ ಸದಸ್ಯತ್ವ ರದ್ದುಪಡಿಸಿದ ಆದೇಶ ಮಾರ್ಪಡಿಸಿ, ಅಜೀವ ಸದಸ್ಯತ್ವವನ್ನು ಅಮಾನತ್ತಿನಲ್ಲಿರಿಸಿ ಜೂನ್ 10ರಂದು ಆದೇಶ ಹೊರಡಿಸುತ್ತಾರೆ. ಇದು ಏಕಸದಸ್ಯ ಪೀಠದ ಆದೇಶದ ಸ್ಪಷ್ಟ ಹಾಗೂ ಉದ್ದೇಶಪೂರ್ವಕ ಉಲ್ಲಂಘನೆ ಆಗಿದ್ದು, ಆಡಳಿತಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆಯಡಿ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Kannada Bar & Bench
kannada.barandbench.com