
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (ಕೆಎಂವಿಎಸ್‌ಟಿಡಿಸಿಎಲ್) ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ₹95 ಕೋಟಿ ಹಣ ವರ್ಗಾಯಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಕ್ಷಮ ನ್ಯಾಯಾಲಯವು ಆರೋಪ ನಿಗದಿಗೂ ಮುನ್ನ ವಾದ ಆಲಿಸುವ ಸಂಬಂಧ ವಿಚಾರಣೆಗೆ ಅರ್ಜಿಯನ್ನು ನಿಗದಿಗೊಳಿಸಿದರೆ ಮಾಜಿ ಸಚಿವ ಬಿ ನಾಗೇಂದ್ರ ಅವರು ನ್ಯಾಯಾಲಯದ ಕದತಟ್ಟುವ ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ಈಚೆಗೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್ 4ರ ಅಡಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದತಿ ಕೋರಿ ಮೊದಲನೇ ಆರೋಪಿಯಾಗಿರುವ ಬಿ ನಾಗೇಂದ್ರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ನಾಗೇಂದ್ರ ಅವರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಸಿ ವಿ ನಾಗೇಶ್ ಅವರು ಪ್ರಕರಣದಲ್ಲಿ ಸಂಜ್ಞೇ ಪರಿಗಣಿಸುವ ಸಂಬಂಧ ಸಕ್ಷಮ ನ್ಯಾಯಾಲಯ ಅನುಸರಿಸಿರುವ ನೀತಿಯು ದೋಷಪೂರಿತವಾಗಿದ್ದು, ಅದು ಪ್ರಕರಣದ ಮೂಲವಾಗಿದೆ ಎಂದಿದ್ದಾರೆ. ಜಾರಿ ನಿರ್ದೇಶನಾಲಯದ ಪರ ವಕೀಲ ಪಿ ಪ್ರಸನ್ನಕುಮಾರ್ ಅವರು ಆಕ್ಷೇಪಣೆಯನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು ಎಂದಿದ್ದಾರೆ. ಹೀಗಾಗಿ, ಪ್ರಕರಣದ 09.01.2025ಕ್ಕೆ ನಿಗದಿಪಡಿಸಲಾಗಿದೆ. ಆರೋಪ ನಿಗದಿಗೂ ಮುನ್ನ ವಾದ ಆಲಿಸುವ ಸಂಬಂಧ ವಿಚಾರಣೆಗೆ ಅರ್ಜಿಯನ್ನು ಸಕ್ಷಮ ನ್ಯಾಯಾಲಯ ನಿಗದಿಗೊಳಿಸಿದರೆ ನಾಗೇಂದ್ರ ಅವರು ನ್ಯಾಯಾಲಯದ ಕದತಟ್ಟುವ ಸ್ವಾತಂತ್ರ್ಯ ಹೊಂದಿದ್ದಾರೆ” ಎಂದು ಆದೇಶದಲ್ಲಿ ದಾಖಲಿಸಲಾಗಿದೆ.
ಜಾರಿ ನಿರ್ದೇಶನಾಲಯವು 09.09.2024ರಂದು ಪಿಎಂಎಲ್ ಕಾಯಿದೆ ಸೆಕ್ಷನ್ 4ರ ಅಡಿ ತನ್ನನ್ನು ಮೊದಲ ಆರೋಪಿಯನ್ನಾಗಿಸಿ ದಾಖಲಿಸಿರುವ ದೂರು; ಈ ಸಂಬಂಧ ವಿಚಾರಣಾಧೀನ ನ್ಯಾಯಾಲಯವು 05.10.2024ರಂದು ಸಂಜ್ಞೇ ತೆಗೆದುಕೊಂಡಿರುವುದು ಹಾಗೂ ಆನಂತರದ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ನಾಗೇಂದ್ರ ಕೋರಿದ್ದಾರೆ.
ಜಾರಿ ನಿರ್ದೇಶನಾಲಯವು ದಾಖಲಿಸಿರುವ ದೂರು ವ್ಯಾಪ್ತಿಯ ದೋಷದಿಂದ ಕೂಡಿದೆ. ಹಗರಣಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಮೂಲ ಎಫ್‌ಐಆರ್‌ನಲ್ಲಿ ಅಕ್ರಮ ಹಣ ವರ್ಗಾವಣೆ ಅಥವಾ ಅನುಸೂಚಿತ ಅಪರಾಧ (ಷೆಡ್ಯೂಲ್ಡ್ ಅಪರಾಧ) ಸಂಬಂಧ ಯಾವುದೇ ಆರೋಪವಿಲ್ಲ. ಹೀಗಾಗಿ, ಜಾರಿ ನಿರ್ದೇಶನಾಲಯದಿಂದ ವ್ಯಾಪ್ತಿಯ ವಿಚಾರ ದೋಷಪೂರಿತವಾಗಿದೆ. ಊಹೆಗಳ ಆಧಾರದ ಮೇಲೆ ಕ್ರಿಮಿನಲ್ ವ್ಯಾಪ್ತಿಯನ್ನು ಭಾವಿಸಿಕೊಳ್ಳಲಾಗದು ಎಂದು ಹಲವು ಸಾಂವಿಧಾನಿಕ ನ್ಯಾಯಾಲಯಗಳು ತೀರ್ಪು ನೀಡಿವೆ. ಹೀಗಾಗಿ, ಜಾರಿ ನಿರ್ದೇಶನಾಲಯ ದಾಖಲಿಸಿರುವ ದೂರು ವ್ಯಾಪ್ತಿ ಹೊಂದಿಲ್ಲ. ಸಿಆರ್‌ಪಿಸಿ ಸೆಕ್ಷನ್ 197ರ ಅಡಿ ಪೂರ್ವಾನುಮತಿ ಪಡೆಯದೇ ಪ್ರಾಸಿಕ್ಯೂಷನ್ ಮಾಡಲಾಗದು. ಹಗರಣ ನಡೆದ ಸಂದರ್ಭದಲ್ಲಿ ನಾಗೇಂದ್ರ ಅವರು ಸಚಿವರಾಗಿ ಕೆಲಸ ಮಾಡಿದ್ದು, ಐಪಿಸಿ ಸೆಕ್ಷನ್ 21ರ ಅಡಿ 'ಸರ್ಕಾರಿ ಸೇವಕʼನ ವ್ಯಾಪ್ತಿಗೆ ಬರುವುದರಿಂದ ಪ್ರಾಸಿಕ್ಯೂಷನ್‌ಗೆ ಮುನ್ನ ಪೂರ್ವಾನುಮತಿ ಅಗತ್ಯವಾಗಿದೆ ಎಂದು ವಾದಿಸಲಾಗಿದೆ.
ಈ ನಡುವೆ, ನಾಗೇಂದ್ರ ಅವರ ಜಾಮೀನು ರದ್ದುಪಡಿಸುವಂತೆ ಕೋರಿ ಜಾರಿ ನಿರ್ದೇಶನಾಲಯವು ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಬಾಕಿ ಇದೆ.
ಅರ್ಜಿದಾರರ ಪರವಾಗಿ ವಕೀಲ ಗೌರವ್ ನವೀನ್‌ಕುಮಾರ್ ತೇಜಸ್ವಿ ವಕಾಲತ್ತು ವಹಿಸಿದ್ದಾರೆ.