ಚುನಾವಣಾ ಬಾಂಡ್‌ ಮೂಲಕ ಸುಲಿಗೆ ಆರೋಪ: ಎಫ್‌ಐಆರ್‌ ವಜಾ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಬಿಜೆಪಿ ಮಾಜಿ ಅಧ್ಯಕ್ಷ ಕಟೀಲ್‌

ವಕೀಲರಾದ ಸುಯೋಗ್‌ ಹೇರಳೆ ಮತ್ತು ನಿಶಾಂತ್‌ ಎಸ್‌ ಕೆ ಅವರು ಮಾಜಿ ಸಂಸದರಾದ ಕಟೀಲ್‌ ಪರವಾಗಿ ವಕಾಲತ್ತು ಹಾಕಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಮುಂದೆ ಉಲ್ಲೇಖಿಸಿದ್ದು, ಮಧ್ಯಾಹ್ನ ಅರ್ಜಿಯ ವಿಚಾರಣೆ ನಡೆಯಲಿದೆ.
ಚುನಾವಣಾ ಬಾಂಡ್‌ ಮೂಲಕ ಸುಲಿಗೆ ಆರೋಪ: ಎಫ್‌ಐಆರ್‌ ವಜಾ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಬಿಜೆಪಿ ಮಾಜಿ ಅಧ್ಯಕ್ಷ ಕಟೀಲ್‌
Published on

ಬಿಜೆಪಿಯ ರಾಷ್ಟ್ರ ಮತ್ತು ರಾಜ್ಯ ಘಟಕಗಳು ಚುನಾವಣಾ ಬಾಂಡ್‌ಗಳ ಮೂಲಕ ಬಹುಕೋಟಿ ದೇಣಿಗೆ ಪಡೆಯಲು ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇಲೆ ಬೆಂಗಳೂರಿನ ತಿಲಕ್‌ ನಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ವಜಾ ಮಾಡುವಂತೆ ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಹಾಗೂ ಎಫ್‌ಐಆರ್‌ನಲ್ಲಿ ಆರೋಪಿಯೂ ಆಗಿರುವ ನಳಿನ್‌ ಕುಮಾರ್‌ ಕಟೀಲ್‌ ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ.

ವಕೀಲರಾದ ಸುಯೋಗ್‌ ಹೇರಳೆ ಮತ್ತು ನಿಶಾಂತ್‌ ಎಸ್‌ ಕೆ ಅವರು ಮಾಜಿ ಸಂಸದರಾದ ಕಟೀಲ್‌ ಪರವಾಗಿ ವಕಾಲತ್ತು ಹಾಕಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಮುಂದೆ ಉಲ್ಲೇಖಿಸಿದ್ದು, ಮಧ್ಯಾಹ್ನ ಅರ್ಜಿಯ ವಿಚಾರಣೆ ನಡೆಯಲಿದೆ.

ನಿರ್ದಿಷ್ಟ ಆರೋಪಗಳಿಲ್ಲದೇ ಅಥವಾ ಯಾವುದೇ ತಪ್ಪನ್ನು ಉಲ್ಲೇಖಿಸದೇ ದಾಖಲಿಸಿರುವ ಆಕ್ಷೇಪಾರ್ಹವಾದ ದೂರನ್ನು ವಜಾ ಮಾಡಬೇಕು. ಚುನಾವಣಾ ಬಾಂಡ್‌ ಯೋಜನೆ ಮತ್ತು ಅದಕ್ಕೆ ಸಂಬಂಧಿತ ಶಾಸನಬದ್ಧ ತಿದ್ದುಪಡಿಗಳು ಜಾರಿಯಲ್ಲಿದ್ದಾಗ ಅದು ಕಾನೂನಿನ ಅನ್ವಯ ಸಿಂಧುವಾಗಿತ್ತು. ಜಾರಿಯಲ್ಲಿದ್ದ ಕಾನೂನಿನ ಅನ್ವಯ ಸಾರ್ವಜನಿಕ ಸೇವಕರು ಕ್ರಮಕೈಗೊಂಡಿದ್ದರೆ ಅದನ್ನು ಕ್ರಿಮಿನಾಲಿಟಿ ಮಸೂರದಲ್ಲಿ ನೋಡಲಾಗದು. ಕಾಯಿದೆ ಜಾರಿಯಲ್ಲಿದ್ದಾಗ ಯಾರೇ ಕ್ರಮಕೈಗೊಂಡಿದ್ದರೂ ಅದು ನೇರವಾಗಿ ಕ್ರಿಮಿನಲ್‌ ಪ್ರಕ್ರಿಯೆಗೆ ನೇರ ಸಂಬಂಧ ಹೊಂದಿರದಿದ್ದರೆ ಎಫ್‌ಐಆರ್‌ ದಾಖಲಿಸಲಾಗದು ಎಂದು ವಾದಿಸಲಾಗಿದೆ.

ಅರ್ಜಿದಾರರ ವಿರುದ್ಧ ಆರೋಪಿಸಿರುವ ಅಪರಾಧಗಳನ್ನು ಅನ್ವಯಿಸಲು ಯಾವುದೇ ಆರೋಪಗಳಿಲ್ಲ. ರಾಜಕೀಯ ದುರುದ್ದೇಶದಿಂದ ಅರ್ಜಿದಾರರ ವರ್ಚಸ್ಸಿಗೆ ಹಾನಿ ಮಾಡಲು ಪ್ರಕರಣ ದಾಖಲಿಸಲಾಗಿದೆ. ಆರೋಪಿತ ಅಪರಾಧಕ್ಕೂ, ದೂರುದಾರರಿಗೂ ಯಾವುದೇ ಸಂಬಂಧ ಇಲ್ಲದಿರುವಾಗ ಸೆಕ್ಷನ್‌ 383/384 ಅಡಿ ಸುಲಿಗೆ ಆರೋಪ ಮಾಡಲಾಗದು. ಪ್ರಕರಣದಲ್ಲಿ ಯಾವುದೇ ಸಂಬಂಧ ಹೊಂದಿರ ವ್ಯಕ್ತಿ ಸೆಕ್ಷನ್‌ 383ರ ಅಡಿ ದೂರನ್ನು ನಿರ್ವಹಿಸಲಾಗದು. ಇಂಥ ಮಹತ್ವದ ವಿಚಾರವನ್ನು ಪರಿಗಣಿಸಲು ವಿಫಲವಾಗಿರುವ ಮ್ಯಾಜಿಸ್ಟ್ರೇಟ್‌ ಅವರು ಎಫ್‌ಐಆರ್‌ ದಾಖಲಿಸಲು ಆದೇಶಿಸಿದ್ದಾರೆ. ಈ ಕ್ರಿಯೆಯು ದೋಷಪೂರಿತವಾಗಿರುವುದರಿಂದ ಆದೇಶ ವಜಾ ಮಾಡಬೇಕು ಎಂದು ಕೋರಲಾಗಿದೆ.

2019ರಿಂದ 2023ರ ಅವಧಿಯಲ್ಲಿ ಚುನಾವಣಾ ಬಾಂಡ್‌ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ಚುನಾವಣಾ ಬಾಂಡ್‌ ಯೋಜನೆ 2018 ಅಸ್ತಿತ್ವದಲ್ಲಿತ್ತು. 2024ರ ಫೆಬ್ರವರಿ 15ರಂದು ಸುಪ್ರೀಂ ಕೋರ್ಟ್‌ ಚುನಾವಣಾ ಬಾಂಡ್‌ ಅಸಾಂವಿಧಾನಿಕ ಎಂದು ಘೋಷಿಸುವವರೆಗೂ ಆರ್‌ಬಿಐ ಕಾಯಿದೆ ಸೆಕ್ಷನ್‌ 31(3) ಅಡಿ ಸಂಸತ್‌ ಜಾರಿಗೊಳಿಸಿದ್ದ ಯೋಜನೆ ಚಾಲ್ತಿಯಲ್ಲಿತ್ತು. ಹೀಗಾಗಿ, ಇದನ್ನು ಅಪರಾಧ ಎನ್ನಲಾಗದು. ಅರ್ಜಿದಾರರ ಸಾರ್ವಜನಿಕ ಸೇವಕರಾಗಿದ್ದು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಇಲ್ಲದೇ ಎಫ್‌ಐಆರ್‌ ಮಾಡಲು ಅನುಮತಿಸುವ ಮೂಲಕ ಮ್ಯಾಜಿಸ್ಟ್ರೇಟ್‌ ಅವರು ವಿವೇಚನಾರಹಿತವಾಗಿ ನಡೆದುಕೊಂಡಿದ್ದಾರೆ ಎಂದು ಆಕ್ಷೇಪಿಸಲಾಗಿದೆ.

Also Read
ಇ ಡಿ ಬಳಸಿ ಚುನಾವಣಾ ಬಾಂಡ್‌ ಮೂಲಕ ಸುಲಿಗೆ ಆರೋಪ: ನಿರ್ಮಲಾ, ನಡ್ಡಾ, ವಿಜಯೇಂದ್ರ ವಿರುದ್ಧ ಎಫ್‌ಐಆರ್‌ಗೆ ಆದೇಶ

ಬೆಂಗಳೂರಿನ ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷರಾಗಿರುವ ಆದರ್ಶ್‌ ಆರ್‌. ಐಯ್ಯರ್‌ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಜೆ ಪಿ ನಡ್ಡಾ, ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 384 (ಸುಲಿಗೆ), 120ಬಿ (ಕ್ರಿಮಿನಲ್‌ ಪಿತೂರಿ) ಜೊತೆಗೆ 34ರ ಅಡಿ ಪ್ರಕರಣ ದಾಖಲಿಸಲು ತಿಲಕ್‌ ನಗರ ಪೊಲೀಸರಿಗೆ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆದೇಶಿಸಿತ್ತು. ಇದರ ಅನ್ವಯ ಎಫ್‌ಐಆರ್‌ ದಾಖಲಾಗಿದೆ.

Kannada Bar & Bench
kannada.barandbench.com