ನ್ಯಾಯಾಂಗದ ಕುರಿತಾದ ಮತ್ತೊಂದು ಆಕ್ಷೇಪಣಾ ಸಾಲು: 8ನೇ ತರಗತಿ ಪಠ್ಯಪುಸ್ತಕದ ವಿರುದ್ಧ ಸುಪ್ರೀಂನಲ್ಲಿ ಅರ್ಜಿ

ತೆರವು ಕಾರ್ಯಾಚರಣೆಗೆ ಸಂಬಂಧಿಸಿದ ನ್ಯಾಯತತ್ವವನ್ನು ಸಂದರ್ಭದಿಂದ ಹೊರತೆಗೆದು ಕೊಳಗೇರಿ ನಿವಾಸಿಗಳನ್ನು ʼಅತಿಕ್ರಮಣಕಾರರುʼ ಎನ್ನುವ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
Supreme Court and NCERT textbooks
Supreme Court and NCERT textbooks
Published on

ನ್ಯಾಯಾಂಗವನ್ನು ತಪ್ಪಾಗಿ ಚಿತ್ರಿಸಿದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) 8ನೇ ತರಗತಿಯ ಪಠ್ಯಪುಸ್ತಕದ ವಿರುದ್ಧ ಸುಪ್ರೀಂ ಕೋರ್ಟ್ ಇತ್ತೀಚೆಗೆ ಕಠಿಣ ಕ್ರಮ ತೆಗೆದುಕೊಂಡ ಬೆನ್ನಿಗೇ , ನ್ಯಾಯಾಂಗವನ್ನು ವಿರೂಪಗೊಳಿಸಿ ಚಿತ್ರಿಸಿದ ಆರೋಪದ ಮೇಲೆ ಮತ್ತೊಂದು ಶಾಲಾ ಪುಸ್ತಕದಲ್ಲಿನ ನಿರ್ದಿಷ್ಟ ಭಾಗವನ್ನು ಪ್ರಶ್ನಿಸಿ ಹೊಸ ಅರ್ಜಿಯೊಂದು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿದೆ [ಡಾ. ಪಂಕಜ್ ಪುಷ್ಕರ್ ವರ್ಸಸ್‌. ಯೂನಿಯನ್ ಆಫ್ ಇಂಡಿಯಾ & ಅನರ್].

ವಿಶೇಷವೆಂದರೆ ಮಾಜಿ ಎನ್‌ಸಿಇಆರ್‌ಟಿಯಲ್ಲಿ ಸೀನಿಯರ್‌ ಅಸೋಸಿಯೇಟ್‌ ಫೆಲೋ ಆಗಿ ಕಾರ್ಯನಿರ್ವಹಿಸಿದ್ದ ಪಂಕಜ್‌ ಪುಷ್ಕರ್‌ ಎಂಬುವರು ಈ ಅರ್ಜಿಯನ್ನು ದಾಖಲಿಸಿದ್ದಾರೆ. ದೇಶಾದ್ಯಂತ 2007ರಿಂದ ನಿಗದಿಪಡಿಸಲಾದ 8 ನೇ ತರಗತಿಯ ಸಾಮಾಜಿಕ ಮತ್ತು ರಾಜಕೀಯ ಜೀವನ - III ಪಠ್ಯಪುಸ್ತಕದ ನಿರ್ದಿಷ್ಟ ಪ್ಯಾರಾ ಒಂದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

ನ್ಯಾಯಾಲಯವು ಫೆಬ್ರವರಿ 26 ರಂದು ತಾನು ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣದಲ್ಲಿ ನೀಡಿದ ಆದೇಶದ ಹಿನ್ನೆಲೆಯಲ್ಲಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ. ತನ್ನ ಆದೇಶದಲ್ಲಿ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಬಿಡುಗಡೆಯಾದ 8ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕವಾದ ಎಕ್ಸ್‌ಪ್ಲೋರಿಂಗ್ ಸೊಸೈಟಿ: ಇಂಡಿಯಾ ಅಂಡ್ ಬಿಯಾಂಡ್ (ಸಂಪುಟ 2) ಎಂಬ ಪಠ್ಯಪುಸ್ತಕದ ವಿಷಯಕ್ಕೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿತ್ತು.

ತನ್ನ ಆದೇಶದಲ್ಲಿ ಪೀಠವು, "ನ್ಯಾಯಾಂಗದಲ್ಲಿ ಭ್ರಷ್ಟಾಚಾರ" ಎಂದು ಪ್ರತಿಪಾದಿಸುವ 8 ನೇ ತರಗತಿಯ ಹೊಸ ಪುಸ್ತಕದ ವಿಚಾರವಾಗಿ ಎನ್‌ಸಿಇಆರ್‌ಟಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಆ ಪ್ರಕರಣದಲ್ಲಿ, ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠವು ಶಾಲಾ ಶಿಕ್ಷಣ ಇಲಾಖೆ ಮತ್ತು ಎನ್‌ಸಿಇಆರ್‌ಟಿ ನಿರ್ದೇಶಕರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿತ್ತು.

ಪ್ರಸಕ್ತ ದಾಖಲಾಗಿರುವ ಹೊಸ ಅರ್ಜಿಯು ಸಾಮಾಜಿಕ ಮತ್ತು ರಾಜಕೀಯ ಜೀವನ - III ರ ಪುಟ 62ರಲ್ಲಿ ನ್ಯಾಯಾಂಗದ ಪಾತ್ರ ಮತ್ತು ಜೀವನೋಪಾಯದ ಹಕ್ಕನ್ನು ನಿರ್ವಹಿಸುವ ಅಧ್ಯಾಯದಲ್ಲಿರುವ ಒಂದು ಭಾಗವನ್ನು ಪ್ರಶ್ನಿಸುತ್ತದೆ. "ಇತ್ತೀಚಿನ ನ್ಯಾಯಾಂಗದ ತೀರ್ಪುಗಳು ಕೊಳೆಗೇರಿ ನಿವಾಸಿಗಳನ್ನು ನಗರಗಳಲ್ಲಿನ ಅತಿಕ್ರಮಣಕಾರರು ಎಂದು ನೋಡುವ ಪ್ರವೃತ್ತಿಯನ್ನು ಹೊಂದಿವೆ" ಎನ್ನುವ ನಿರ್ದಿಷ್ಟ ವಾಕ್ಯದ ಬಗ್ಗೆ ಅರ್ಜಿದಾರರು ಆಕ್ಷೇಪವೆತ್ತಿದ್ದಾರೆ.

ಅರ್ಜಿದಾರರ ಪ್ರಕಾರ, ಈ ಹೇಳಿಕೆಯು ತೆರವು ಕಾರ್ಯಾಚರಣೆಗೆ ಸಂಬಂಧಿಸಿದ ನ್ಯಾಯತತ್ವವನ್ನು ಸಂದರ್ಭದಿಂದ ಹೊರತೆಗೆದು, ಸಮುಚಿತವಲ್ಲದ ರೀತಿಯಲ್ಲಿ ಪ್ರಸ್ತುತಪಡಿಸುತ್ತದೆ. ಇದು ನ್ಯಾಯಾಲಯಗಳು ಸಾಂವಿಧಾನಿಕ ಹಕ್ಕುಗಳು, ಶಾಸನಬದ್ಧ ಆದೇಶಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ಪರಿಗಣನೆಗಳನ್ನು ಸಮತೋಲಿತವಾಗಿ ಪರಿಗಣಿಸುವ ಅಗತ್ಯವನ್ನು ವಿವರಿಸುವಲ್ಲಿ ವಿಫಲವಾಗಿದೆ ಎನ್ನಲಾಗಿದೆ.

ಅರ್ಜಿಯ ಪ್ರಕಾರ, 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಉದ್ದೇಶಿಸಲಾದ ಮೂಲಭೂತ ಪಠ್ಯಪುಸ್ತಕದಲ್ಲಿ ಅಂತಹ ಚಿತ್ರಣವನ್ನು ಪರಿಚಯಿಸಿದಾಗ, ಅದು ವಿದ್ಯಾರ್ಥಿಗಳಲ್ಲಿ ಸಾಂವಿಧಾನಿಕ ನ್ಯಾಯಾಲಯಗಳು ಸಂವೇದನಾರಹಿತವಾಗಿದ್ದು, ಪ್ರತಿಗಾಮಿ ಧೋರಣೆಯುಳ್ಳವು ಎನ್ನುವ ಏಕಪಕ್ಷೀಯ ಗ್ರಹಿಕೆಯನ್ನು ಸೃಷ್ಟಿಸುವ ಅಪಾಯವಿದೆ. ಅಂತಹ ವಿಷಯವನ್ನು ಸರಿಯಾಗಿ ಸಂದರ್ಭೋಚಿತಗೊಳಿಸದಿದ್ದರೆ, ಅದು ನ್ಯಾಯಾಂಗದೆಡೆಗಿನ ಸಾರ್ವಜನಿಕ ವಿಶ್ವಾಸವನ್ನು ಕುಗ್ಗಿಸಬಹುದು ಮತ್ತು ಸಾಂಸ್ಥಿಕ ಘನತೆಯನ್ನು ಹಾಳುಮಾಡಬಹುದು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಈ ಪಠ್ಯಪುಸ್ತಕವು 2007ನೇ ಇಸವಿಯಿಂದ ಈವರೆಗೆ ಪ್ರಸರಣದಲ್ಲಿರುವುದರಿಂದ ಅರ್ಜಿಯ ತುರ್ತು ವಿಚಾರಣೆಯ ಅಗತ್ಯವಿದೆ ಎನ್ನಲಾಗಿದೆ.

ಈ ಅರ್ಜಿಯ ವಿಚಾರಣೆಯನ್ನು ಪ್ರತ್ಯೇಕವಾಗಿ ಅಥವಾ ಸುಪ್ರೀಂ ಕೋರ್ಟ್‌ ಪ್ರಸ್ತುತ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ವಿಚಾರಣೆಯೊಟ್ಟಿಗೇ ಆಲಿಸುವ ನಿರೀಕ್ಷೆ ಇದೆ.

Kannada Bar & Bench
kannada.barandbench.com