ವಕೀಲರ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದರಿಂದ ಜಗದೀಶ್‌ ವಿರುದ್ದ ದೂರು: ಎಎಬಿ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ

“ವಕೀಲರ ಪರವಾಗಿ ಸಂಘವು ಕ್ರಮಕೈಗೊಂಡಿದೆ. ಈ ಸಂದರ್ಭದಲ್ಲಿ ರಂಗನಾಥ್‌ ಅವರು ಅಡ್ಡಗಾಲು ಹಾಕುತ್ತಿರುವುದು ಏಕೆ?” ಎಂದು ಪ್ರಶ್ನಿಸಿದ ಎಎಬಿ ಉಪಾಧ್ಯಕ್ಷ ಭಕ್ತವತ್ಸಲ.
AAB
AAB
Published on

ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯದ ಆವರಣದಲ್ಲಿ ವಕೀಲ ಕೆ ಎನ್‌ ಜಗದೀಶ್‌ ಅಲಿಯಾಸ್‌ ಮಹದೇವ್‌ ಅವರು ವಕೀಲರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ ಹಿನ್ನೆಲೆಯಲ್ಲಿ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದೇವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದು, ಜಗದೀಶ್‌ ಅವರ ಬಂಧನವನ್ನು ಸಮರ್ಥಿಸಿದ್ದಾರೆ.

“ವಕೀಲರ ನೀತಿ ಸಂಹಿತೆ ಕಾಯಿದೆಯಲ್ಲಿ ವಕೀಲರು ಹೇಗೆ ನಡೆದುಕೊಳ್ಳಬೇಕು ಎಂದು ಹೇಳಲಾಗಿದೆ. ಆದರೆ, ಜಗದೀಶ್‌ ಅವರು ತಮ್ಮ ವಿಡಿಯೊಗಳಲ್ಲಿ ವಕೀಲರ ವಿರುದ್ಧ ಅಶ್ಲೀಲ ಪದಗಳನ್ನು ಬಳಕೆ ಮಾಡಿದ್ದಾರೆ. ವಕೀಲರ ವೃತ್ತಿಗೆ ಸವಾಲು ಎಸೆದಾಗ ಪ್ರತಿನಿಧಿಗಳಾದ ನಾವು ವಕೀಲರ ಹಿತಾಸಕ್ತಿ ಕಾಯಲು ತೀರ್ಮಾನಿಸಿ, ಆಡಳಿತ ಮಂಡಳಿ ಸದಸ್ಯರೆಲ್ಲಾ ಸೇರಿ ಪೊಲೀಸ್‌ ಆಯುಕ್ತರಿಗೆ ಮನವಿ ನೀಡಿದೆವು. ವಕೀಲ ನಾರಾಯಣ ಸ್ವಾಮಿ ಅವರು ಪ್ರತ್ಯೇಕವಾಗಿ ದೂರು ನೀಡಿದ್ದು, ಅದನ್ನು ಆಧರಿಸಿ ಪೊಲೀಸರು ಜಗದೀಶ್‌ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ” ಎಂದರು.

“ನ್ಯಾಯಾಲಯದ ಆವರಣದಲ್ಲಿ ಜಗದೀಶ್‌ ಅವರು ವಕೀಲರನ್ನು ಗುರಿಯಾಗಿಸಿ ಪ್ರಚೋದನಕಾರಿಯಾಗಿ ಮಾತನಾಡಬಾರದಿತ್ತು. ಜಗದೀಶ್ ಅವರ ಪದ ಬಳಕೆ ಸರಿ ಇರಲಿಲ್ಲ. ಇದಕ್ಕೆ ನಮ್ಮ ಬೆಂಬಲವಿಲ್ಲ, ವೈಯಕ್ತಿಕವಾಗಿ ನನಗೆ ಜಗದೀಶ್‌ ಅವರ ವಿರುದ್ಧ ಯಾವುದೇ ಜಿದ್ದು ಇಲ್ಲ” ಎಂದರು.

ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡಲಿ

“ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣನವರ್ ಸೇರಿದಂತೆ ಯಾರ ವಿರುದ್ಧ ಹೋರಾಟ ಮಾಡಿದರೂ ವಕೀಲರ ಸಂಘ ಬೆಂಬಲ ನೀಡುತ್ತದೆ. ಭ್ರಷ್ಟಾಚಾರದ ವಿಚಾರದಲ್ಲಿ ಸತ್ಯಾಂಶ ಹೊರಬರಬೇಕು. ಕಾನೂನಿನ ಪ್ರಕಾರ ಮುಂದುವರಿಯಲಿ. ಫೇಸ್ ಬುಕ್ ಲೈವ್ ಬದಲು ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡಬೇಕು” ಎಂದರು.

“ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ರಾಜ್ಯದ ಯಾವುದೇ ನ್ಯಾಯಾಲಯದಲ್ಲಿ ಜಗದೀಶ್‌ ಅವರು ವಕೀಲಿಕೆ ಮಾಡಬಾರದು ಎಂಬ ನಿರ್ಧಾರ ಮಾಡಿದೆ ಎನ್ನಲಾಗಿದೆ. ನಾವು ಹಾಗೆ ಮಾಡುವುದಿಲ್ಲ. ಈ ಸಂದರ್ಭದಲ್ಲಿ ಅದು ಸೂಕ್ತವಾದ ತೀರ್ಮಾನವಾಗಲಾರದು. ಅದು ಕೊನೆಯ ಅಸ್ತ್ರವಾಗಿರಲಿದೆ” ಎಂದರು.

Also Read
ನ್ಯಾಯಾಲಯ ಆವರಣದಲ್ಲಿ ಗಲಾಟೆ ಪ್ರಕರಣ: ವಕೀಲ ಜಗದೀಶ್ ಪೊಲೀಸ್ ವಶಕ್ಕೆ

ಎಎಬಿ ಉಪಾಧ್ಯಕ್ಷ ಭಕ್ತವತ್ಸಲ ಅವರು “ಪೊಲೀಸರು, ವಕೀಲರು ಮತ್ತು ಮಾಧ್ಯಮದವರ ನಡುವೆ ಹಿಂದೊಮ್ಮೆ ಭಾರಿ ಗಲಾಟೆಯಾಗಿತ್ತು. ಇದರ ಹಿಂದಿನ ಸೂತ್ರಧಾರರು ಯಾರು ಮತ್ತು ಇದರ ಹಿಂದೆ ಯಾರ ಷಡ್ಯಂತ್ರವಿತ್ತು ಎಂಬುದು ಮಾಧ್ಯಮಗಳಿಗೆ ಗೊತ್ತಿದೆ. ಎಎಬಿ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್‌ ಸೇರಿದಂತೆ 40ಕ್ಕೂ ಹೆಚ್ಚು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ರಂಗನಾಥ್‌ ಅವರ ಹೆಸರನ್ನು ಪ್ರಕರಣದಿಂದ ಕೈಬಿಡಲಾಗಿತ್ತು. ಉಳಿದ ವಕೀಲರ ವಿರುದ್ಧದ ಪ್ರಕರಣ ಹೈಕೋರ್ಟ್‌ನಲ್ಲಿ ಬಾಕಿ ಇದೆ” ಎಂದರು.

“ಕೆ ಆರ್‌ ಪುರಂನ ವಕೀಲೆ ಧರಣಿ ಎಂಬವರು ತಮ್ಮ ಸಮಸ್ಯೆಯನ್ನು ಸಂಘಕ್ಕೆ ತಿಳಿಸಿದ್ದರು. ಆದರೆ, ಅದನ್ನು ಅಂದಿನ ಅಧ್ಯಕ್ಷರಾಗಿದ್ದ ರಂಗನಾಥ್‌ ಅವರ ನೇತೃತ್ವದ ತಂಡ ಬಗೆಹರಿಸಿರಲಿಲ್ಲ. ಆ ಹೆಣ್ಣುಮಗಳು ಆತ್ಮಹತ್ಯೆ ಮಾಡಿಕೊಂಡರು. ಆ ಪ್ರಕರಣವನ್ನು ನಾವು ನ್ಯಾಯಾಲಯಕ್ಕೆ ಕೊಂಡೊಯ್ದಿದ್ದೆವು. ಆಗ ರಂಗನಾಥ್‌ ನಮಗೆ ಸಹಕಾರ ನೀಡಿರಲಿಲ್ಲ. ಈಗ ವಕೀಲರ ಪರವಾಗಿ ಸಂಘವು ಕ್ರಮ ಕೈಗೊಂಡಿದೆ. ಈ ಸಂದರ್ಭದಲ್ಲಿ ರಂಗನಾಥ್‌ ಅವರು ಅಡ್ಡಗಾಲು ಹಾಕುತ್ತಿರುವುದು ಏಕೆ. ಜಗದೀಶ್‌ ಅವರನ್ನು ನೀವು ಸಮರ್ಥಿಸಿಕೊಳ್ಳಬಹುದು. ಆದರೆ, ರಂಗನಾಥ್‌ ಅವರು ಸಂಘದ ವಿರುದ್ಧ ಹೋಗುವುದನ್ನು ನಾವು ಖಂಡಿಸುತ್ತೇವೆ” ಎಂದರು.

Kannada Bar & Bench
kannada.barandbench.com