ರಮಣ ಅವರು ಸಿಜೆಐ ಆಗಿ ಅಧಿಕಾರ ವಹಿಸಿಕೊಂಡ ನಂತರ ನ್ಯಾಯಾಂಗದ ಬುನಾದಿಯು ಭದ್ರಗೊಂಡಿದೆ: ಸಿಜೆ ಡಾ. ಎಸ್‌ ಮುರಳೀಧರ್‌

“ನ್ಯಾಯಾಂಗದ ಸ್ವರೂಪದಲ್ಲಿಯೂ ಬದಲಾವಣೆ ಕಂಡುಬರುತ್ತಿರುವುದನ್ನು ನಾನು ಗಮನಿಸಿದ್ದೇನೆ. ಎಲ್ಲ ಹಂತದಲ್ಲಿಯೂ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಇದುವೇ ಅತ್ಯಂತ ಧನಾತ್ಮಕ ಅಂಶವಾಗಿದೆ,” ಎಂದು ನ್ಯಾ. ಮುರಳೀಧರ್‌ ಅಭಿಪ್ರಾಯಪಟ್ಟರು.
CJI NV Ramana and Justice S Muralidhar
CJI NV Ramana and Justice S Muralidhar
Published on

ನ್ಯಾಯಮೂರ್ತಿ ಎನ್‌ ವಿ ರಮಣ ಅವರು ಇದೇ ವರ್ಷ ಏಪ್ರಿಲ್‌ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನ್ಯಾಯಾಂಗದಲ್ಲಿ ಹಾಗೂ ನ್ಯಾಯಿಕ ಸಮುದಾಯದಲ್ಲಿ ಹೊಸ ಶಕ್ತಿಯ ಅವಾಹನೆಯಾಗಿದೆ ಎಂದು ಒಡಿಶಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಾ. ಎಸ್‌ ಮುರಳೀಧರ್ ಶನಿವಾರ ಹೇಳಿದ್ದಾರೆ.

ಒಡಿಶಾ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನೂತನ ಕಟ್ಟಡದ ಉದ್ಘಾಟನೆಯ ಸಮಾರಂಭದಲ್ಲಿ ನ್ಯಾ. ಮುರಳೀಧರ್ ಅವರು ಸಿಜೆಐ ರಮಣ ಅವರನ್ನು ಸ್ವಾಗತಿಸಿ ಮಾತನಾಡುತ್ತಾ ಮೇಲಿನಂತೆ ಅಭಿಪ್ರಾಯಪಟ್ಟರು. ರಮಣ ಅವರು ಅಧಿಕಾರವಹಿಸಿಕೊಂಡ ನಂತರ ಗುರುತರ ಬದಲಾವಣೆಗಳು ಗೋಚರಿಸಿದ್ದು ನ್ಯಾಯಾಲಯದ ಬುನಾದಿಯು ಮತ್ತಷ್ಟು ಭದ್ರವಾಗಿದೆ ಎಂದು ಅವರು ಹೇಳಿದರು.

“ಸಿಜೆಐ ರಮಣ ಅವರು ಅಧಿಕಾರವಹಿಸಿಕೊಂಡು ಐದು ತಿಂಗಳಾಗಿದ್ದು ಅವರ ಬಗ್ಗೆ ನಾನು ಕೆಲ ಮಾತುಗಳನ್ನು ಹೇಳಬೇಕಿದೆ. ಹೊಸ ಶಕ್ತಿಯ ಆವಾಹನೆಯಾಗಿದೆ. ಅಡಿಪಾಯವು ಗಟ್ಟಿಯಾಗಿರುವ ಬಗ್ಗೆ ನಾವುಗಳು ಮಾತನಾಡುತ್ತಿದ್ದೇವೆ. ಬುನಾದಿಯು ಮತ್ತಷ್ಟು ಭದ್ರವಾಗಿದೆ ಎನ್ನಬಹುದು. ನಾವು ಕಾಣುತ್ತಿರುವ ಬದಲಾವಣೆಗಳು ಗುರುತರವಾಗಿವೆ. ಇವು ಒಳ್ಳೆಯದಕ್ಕಾಗಿ ಆಗಿರುವ ಬದಲಾವಣೆಗಳು. ಜನರು ಇದನ್ನು ಧನಾತ್ಮಕವಾಗಿ ಸ್ವೀಕರಿಸಿದ್ದಾರೆ” ಎಂದು ನ್ಯಾ. ಮುರಳೀಧರ್ ಅವರು ವಿವರಿಸಿದರು.

ಇದೇ ವೇಳೆ ಅವರು ನ್ಯಾಯಾಂಗದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆಯೂ ಗಮನಸೆಳೆದರು. ““ನ್ಯಾಯಾಂಗದ ಸ್ವರೂಪದಲ್ಲಿಯೂ ಬದಲಾವಣೆ ಕಂಡುಬರುತ್ತಿರುವುದನ್ನು ನಾನು ಗಮನಿಸಿದ್ದೇನೆ. ಎಲ್ಲ ಹಂತದಲ್ಲಿಯೂ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಇದುವೇ ಅತ್ಯಂತ ಧನಾತ್ಮಕ ಅಂಶವಾಗಿದೆ,” ಎಂದು ಅಭಿಪ್ರಾಯಪಟ್ಟರು.

Kannada Bar & Bench
kannada.barandbench.com