ಭೂಮಿ ಮಾರಾಟ ಮಾಡಿ ನಾಲ್ಕೂವರೆ ದಶಕಗಳ ಬಳಿಕ ಅದರ ಮೇಲಿನ ಹಕ್ಕು ಸಾಧಿಸಲು ಹೂಡಿದ್ದ ದಾವೆ ತಿರಸ್ಕರಿಸಿದ ಹೈಕೋರ್ಟ್
ಭೂಮಿ ಮಾರಾಟ ಮಾಡಿ ನಾಲ್ಕೂವರೆ ದಶಕಗಳ ಬಳಿಕ ಅದರ ಮೇಲಿನ ಹಕ್ಕು ಸಾಧಿಸಲು ಹೂಡಿದ್ದ ದಾವೆಯನ್ನು ತಿರಸ್ಕರಿಸಿರುವ ಕರ್ನಾಟಕ ಹೈಕೋರ್ಟ್, 138 ಪ್ರತಿವಾದಿಗಳಿಗೆ ತಲಾ 20 ಸಾವಿರ ರೂಪಾಯಿಯಂತೆ ಒಟ್ಟು 27.6 ಲಕ್ಷ ರೂಪಾಯಿ ದಂಡ ಪಾವತಿಸಲು ಅರ್ಜಿದಾರರಿಗೆ ನಿರ್ದೇಶಿಸಿ ಮಹತ್ವದ ಆದೇಶ ಮಾಡಿದೆ.
ತಮ್ಮ ಭೂಮಿಯ ಸ್ವಾಧೀನ ಸಂಬಂಧ 1980ರ ಸೆಪ್ಟೆಂಬರ್ 30ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯಿದೆ ಸೆಕ್ಷನ್ 19(1)ರ ಹೊರಡಿಸಿದ್ದ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಜೀವನಹಳ್ಳಿಯ ಎ ರಾಮಮೂರ್ತಿ, ಎ ಅಶ್ವಥ್‌ಮೂರ್ತಿ ಮತ್ತು ಕೆ ಉಮಾಶಂಕರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.
ಭೂಸ್ವಾಧೀನ, ಪುನರ್ವಸತಿ, ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಕಾಯಿದೆಯ ಸೆಕ್ಷನ್ 24(2) ರದ್ದಾಗಿರುವುದರಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯಿದೆಯ ಅಡಿ 1980ರಲ್ಲಿ ಹೊರಡಿಸಿರುವ ಅಂತಿಮ ಅಧಿಸೂಚನೆ ರದ್ದತಿ ಕೋರಿದ್ದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.
“1978ರ ಜೂನ್ 2ರಂದು ಆಕ್ಷೇಪಾರ್ಹವಾದ ಭೂಮಿಯನ್ನು ಪ್ರಾಥಮಿಕ ಅಧಿಸೂಚನೆಯ ಮೂಲಕ ವಶಪಡಿಸಿಕೊಂಡಿದ್ದು, ಈ ಸಂಬಂಧ 1980ರಲ್ಲಿ ಸೆಕ್ಷನ್ 17(1) ಮತ್ತು 19(1)ರ ಅಡಿ ಅಂತಿಮ ಅಧಿಸೂಚನೆ ಹೊರಡಿಸಿ ಸರ್ಕಾರವು ವಶಕ್ಕೆ ಪಡೆದಿದೆ. ಮೂರನೇ ಅರ್ಜಿದಾರ ಉಮಾಶಂಕರ್ ಅವರ ತಂದೆ ಎ ಕೃಷ್ಣಮೂರ್ತಿ ಅವರಿಗೆ ನೋಟಿಸ್ ಸಹ ನೀಡಲಾಗಿದೆ. 1990ರ ಮೇ 30ರಂದು ಆಕ್ಷೇಪಾರ್ಹವಾದ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ. ಆಕ್ಷೇಪಾರ್ಹವಾದ ಭೂಮಿ ಮತ್ತು ಇತರೆ ಭೂಮಿ ವಶಕ್ಕೆ ಪಡೆದು ಲೇಔಟ್ ಅಭಿವೃದ್ಧಿಪಡಿಸಲಾಗಿದೆ. ಈ ಮಧ್ಯೆ, ಹಿಂದೆ ಭೂಸ್ವಾಧೀನ ಪ್ರಶ್ನಿಸಿದ್ದನ್ನು ವಿಭಾಗೀಯ ಪೀಠವು ತಿರಸ್ಕರಿಸಿತ್ತು. ಅದೇ ಅರ್ಜಿಯಲ್ಲಿನ ಕೋರಿಕೆಗಳನ್ನು ನಕಲು ಮಾಡಿ, ನಾಲ್ಕೂವರೆ ದಶಕಗಳ ಬಳಿಕ 2017ರ ಫೆಬ್ರವರಿ 3ರಂದು ಅರ್ಜಿ ಸಲ್ಲಿಸಲಾಗಿದೆ. ಇಲ್ಲಿ ಸೂಕ್ತ ವಿವರಣೆ ನೀಡಲಾಗಿಲ್ಲ. ಇಂಥ ಸಂದರ್ಭದಲ್ಲಿ ಮಂದಗತಿಯಲ್ಲಿರುವವರ ಮತ್ತು ನಿದ್ರೆಗೆ ಜಾರಿರುವವರ ನೆರವಿಗೆ ರಿಟ್ ನ್ಯಾಯಾಲಯ ಬರುವುದಿಲ್ಲ” ಎಂದು ಪೀಠ ಆದೇಶದಲ್ಲಿ ಹೇಳಿದೆ.
“ಈ ಹಿಂದೆ ಇದ್ದ ಭೂಸ್ವಾಧೀನ ಕಾಯಿದೆ 1894ರ ಕಾಯಿದೆ ಅಡಿ ಸ್ವಾಧೀನ ನಡೆದಿರುವುದರಿಂದ 2013ರ ಕಾಯಿದೆ ಸೆಕ್ಷನ್ 24(2)ರ ಅಡಿ ಭೂಸ್ವಾಧೀನ ರದ್ದಾಗಲಿದೆ ಎಂಬ ವಾದ ವಿಫಲವಾಗಲಿದೆ. ಭೂಮಿಯನ್ನು ಲೇಔಟ್ ಆಗಿ ಪರಿವರ್ತಿಸಿ, ಹಲವು ಮನೆ ನಿರ್ಮಿಸಿದ್ದು, ಸೈಟ್ ಪಡದಿರುವವರು ಸಲ್ಲಿಸಿರುವ ಮಧ್ಯಪ್ರವೇಶ ಅರ್ಜಿಗೆ ಅರ್ಜಿದಾರರು ಆಕ್ಷೇಪಣೆ ಸಲ್ಲಿಸಿಲ್ಲ. 94 ಕೊಳಗೇರಿ ನಿವಾಸಿಗಳಿಗೆ ಭೂಮಿಯ ಮಾಲೀಕರು ನಿವೇಶನ ಹಂಚಿಕೆ ಮಾಡುವ ವಿವಾದರಹಿತ ಚಿತ್ರವನ್ನು ಒದಗಿಸಿದ್ದಾರೆ. ಅದಾಗ್ಯೂ, ಆಕ್ಷೇಪಾರ್ಹವಾದ ಭೂಮಿಯು ತಮ್ಮ ವಶದಲ್ಲಿದೆ ಎಂದು ಅರ್ಜಿದಾರರು ಹೇಳುತ್ತಿರುವುದು ನ್ಯಾಯಾಲಯಕ್ಕೆ ಹೇಳುತ್ತಿರುವ ಸುಳ್ಳಲ್ಲದೇ ಬೇರೇನು ಅಲ್ಲ” ಎಂದು ಪೀಠವು ಆದೇಶದಲ್ಲಿ ಹೇಳಿದೆ.
“ನಾಲ್ಕು ದಶಕಗಳ ಹಿಂದೆಯೇ ಆಕ್ಷೇಪಾರ್ಹವಾದ ಭೂಮಿ ವಶಪಡಿಸಿಕೊಂಡು ಅದನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ವಹಿಸಲಾಗಿದೆ. ಇಲ್ಲಿ ಲೇಔಟ್ ಅಭಿವೃದ್ಧಿಪಡಿಸಿ, ಸಮಾಜದ ಕೆಳಸ್ತರದಲ್ಲಿರುವ ಸಮುದಾಯದ 138 ಮಂದಿಗೆ ಇಲ್ಲಿ ನಿವೇಶನ/ಮನೆ ಹಂಚಿಕೆ ಮಾಡಿದೆ. ಫಲಾನುಭವಿಗಳಿಗೆ ಮೊದಲನೇ ಅರ್ಜಿದಾರ ನಿವೇಶನ ಹಂಚಿಕೆ ಪತ್ರ ನೀಡಿರುವ ಚಿತ್ರ ಒದಗಿಸಲಾಗಿದೆ. ಇದನ್ನು ಅರ್ಜಿದಾರರು ನಿರಾಕರಿಸಿಲ್ಲ. ಅಲ್ಲದೇ, ನಿವೇಶನ ಪಡೆದಿರುವವರನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಏಕೆ ಮಾಡಿಲ್ಲ ಎಂಬುದಕ್ಕೆ ಅರ್ಜಿದಾರರು ಉತ್ತರಿಸಿಲ್ಲ” ಎಂದು ಪೀಠವು ಆದೇಶದಲ್ಲಿ ವಿವರಿಸಿದೆ.
ಹೀಗಾಗಿ, ಅರ್ಜಿಯು ನಿರ್ವಹಣೆಗೆ ಅರ್ಹವಾಗಿಲ್ಲ ಎಂದಿರುವ ನ್ಯಾಯಾಲಯವು ಅರ್ಜಿದಾರರು ತಲಾ 20 ಸಾವಿರ ರೂಪಾಯಿಯಂತೆ 138 ಪ್ರತಿವಾದಿಗಳಿಗೆ ಒಟ್ಟು 27.6 ಲಕ್ಷ ರೂಪಾಯಿ ದಂಡ ಪಾವತಿಸಬೇಕು. ಆರು ವಾರಗಳಲ್ಲಿ ಅದನ್ನು ಪಾವತಿಸಬೇಕು. ಇದನ್ನು ಉಲ್ಲಂಘಿಸಿದರೆ ಪ್ರತಿ ವಾರ ಹೆಚ್ಚುವರಿಯಾಗಿ ಒಂದು ಸಾವಿರ ರೂಪಾಯಿ ದಂಡ ಪಾವತಿಸಬೇಕು ಎಂದು ಆದೇಶದಲ್ಲಿ ಹೇಳಿದೆ.