[ಹೈಕೋರ್ಟ್‌ ಕಟ್ಟಡ ವಿಸ್ತರಣೆ] 10 ಮಹಡಿ ಕಟ್ಟಡ ನಿರ್ಮಾಣ ಸೇರಿದಂತೆ 4 ಪ್ರಸ್ತಾವ: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ಖುದ್ದು ಮುಖ್ಯ ಕಾರ್ಯದರ್ಶಿಗಳೇ ಲಂಬವಾಗಿ ಹತ್ತು ಮಹಡಿಗಳ ಕಟ್ಟಡವನ್ನು ಏಕೆ ನಿರ್ಮಾಣ ಮಾಡಬಾರದು ಎಂಬುದಾಗಿ ಕೇಳಿದ್ದಾರೆ ಎಂದು ಪೀಠಕ್ಕೆ ಎಎಜಿ ವಿವರಣೆ.
High Court of Karnataka
High Court of Karnataka
Published on

ಹತ್ತು ಮಹಡಿಗಳ ಕಟ್ಟಡ ನಿರ್ಮಾಣ ಸೇರಿದಂತೆ ಕರ್ನಾಟಕ ಹೈಕೋರ್ಟ್ ವಿಸ್ತರಣೆಗೆ ಸಂಬಂಧಿಸಿದಂತೆ ನಾಲ್ಕು ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರ ಸಿದ್ದಪಡಿಸಿದೆ ಎಂದು ಹೈಕೋರ್ಟ್‌ಗೆ ಗುರುವಾರ ಮಾಹಿತಿ ನೀಡಿದೆ.

ಬೆಂಗಳೂರಿನ ಹೈಕೋರ್ಟ್ ಕಟ್ಟಡದ ನೆಲಮಹಡಿಯಲ್ಲಿ ಇರುವ ಕಚೇರಿಗಳನ್ನು ಸ್ಥಳಾಂತರಿಸಲು ಸೂಕ್ತ ಆದೇಶ ಹೊರಡಿಸುವಂತೆ ಕೋರಿ ವಕೀಲ ಎಲ್ ರಮೇಶ್ ನಾಯಕ್ ಮತ್ತು ಹೈಕೋರ್ಟ್ ಕಟ್ಟಡ ಸಂಕೀರ್ಣಕ್ಕೆ ಬೆಂಗಳೂರಿನ ಕೇಂದ್ರ ಭಾಗದಲ್ಲಿ ಜಮೀನು ಮಂಜೂರು ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಶರಣ ದೇಸಾಯಿ ಎಂಬುವವರು ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಹೈಕೋರ್ಟ್‌ ಆಡಳಿತ ವಿಭಾಗದ ಪರ ಹಾಜರಾದ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌ ಅವರು “ಹೈಕೋರ್ಟ್‌ ವಿಸ್ತರಣೆಗೆ ಸ್ಥಳಾವಕಾಶ ಒದಗಿಸುವ ಸಂಬಂಧ ಮೂರು ಪ್ರಸ್ತಾವನೆಗಳನ್ನು ಸರ್ಕಾರ ಸಲ್ಲಿಸಿದೆ. ಅವುಗಳನ್ನು ಹೈಕೋರ್ಟ್‌ ಕಟ್ಟಡ ಸಮಿತಿ ಪರಿಶೀಲನೆ ನಡೆಸಲಿದೆ. ಹೈಕೋರ್ಟ್‌ ಆಗಸ್ಟ್‌ 14ರಂದು ಹೊರಡಿಸಿದ ಆದೇಶದಂತೆ ಸರ್ಕಾರವು ಮೂರು ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ಆ ಮೂರು ಪ್ರಸ್ತಾವನೆಗಳನ್ನು ಹೈಕೋರ್ಟ್‌ ಕಟ್ಟಡ ಸಮಿತಿ ಪರಿಶೀಲಿಸಿ, ತನ್ನ ಅಭಿಪ್ರಾಯಗಳೊಂದಿಗೆ ಮುಖ್ಯಮಂತ್ರಿಗಳಿಗೆ ಸಲ್ಲಿಸಬೇಕಿದೆ. ನಂತರ ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ತೆಗೆದುಕೊಂಡು, ಅದನ್ನು ನ್ಯಾಯಾಲಯದ (ಹೈಕೋರ್ಟ್‌) ಮುಂದಿಡಬೇಕಿದೆ” ಎಂದು ಪೀಠಕ್ಕೆ ವಿವರಿಸಿದರು.

ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಪ್ರತಿಮಾ ಹೊನ್ನಾಪುರ ಅವರು “ಈ ಮೂರು ಪ್ರಸ್ತಾವನೆಯಲ್ಲದೆ ಹೆಚ್ಚುವರಿಯಾಗಿ ನಾಲ್ಕನೇ ಪ್ರಸ್ತಾವನೆ ಸಹ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಕೆಯಾಗಿದೆ. ಹತ್ತು ಮಹಡಿಗಳ ಕಟ್ಟಡಗಳನ್ನು ನಿರ್ಮಿಸುವುದೇ ನಾಲ್ಕನೇ ಪ್ರಸ್ತಾವನೆಯಾಗಿದೆ. ಮೊದಲಿಗೆ ಆರು ಮಹಡಿಗಳ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಇತ್ತು. ಆದರೆ, ಖುದ್ದು ಮುಖ್ಯ ಕಾರ್ಯದರ್ಶಿಗಳೇ ಲಂಬವಾಗಿ ಹತ್ತು ಮಹಡಿಗಳ ಕಟ್ಟಡವನ್ನು ಏಕೆ ನಿರ್ಮಾಣ ಮಾಡಬಾರದು ಎಂಬುದಾಗಿ ಕೇಳಿದ್ದಾರೆ. ಅದರಂತೆ ಹೊಸದಾಗಿ ಹತ್ತು ಮಹಡಿಗಳ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿದೆ” ಎಂದರು.

ಈ ಹೇಳಿಕೆ ದಾಖಲಿಸಿಕೊಂಡ ಹೈಕೋರ್ಟ್‌, ಒಂದು ವಾರದಲ್ಲಿ ರಾಜ್ಯ ಸರ್ಕಾರವು ಈ ನಾಲ್ಕು ಪ್ರಸ್ತಾವನೆಗಳನ್ನು ಹೈಕೋರ್ಟ್‌ ರಿಜಿಸ್ಟ್ರಿಗೆ ಸಲ್ಲಿಸಬೇಕು. ಪ್ರಸ್ತಾವನೆಗಳನ್ನು ಸ್ವೀಕರಿಸಿದರೆ, ಅದನ್ನು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರು ಹೈಕೋರ್ಟ್‌ ಕಟ್ಟಡದ ಸಮಿತಿ ಮುಂದೆ ಮಂಡಿಸಬೇಕು. ನಂತರ ಹೈಕೋರ್ಟ್‌ ಆಗಸ್ಟ್‌ 14ರಂದು ನೀಡಿರುವ ನಿರ್ದೇಶನದಂತೆ ಮುಂದಿನ ಪ್ರಕ್ರಿಯೆ ನಡೆಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಒಂದು ತಿಂಗಳ ಕಾಲ ಮುಂದೂಡಿತು.

ಚುನಾವಣೆ ಆಯೋಗದ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ, ಅಲ್ಲಿಯೇ ಹೈಕೋರ್ಟ್‌ ಆಡಳಿತ ವ್ಯವಹಾರಗಳ ನಿರ್ವಹಣೆಗಾಗಿ 10 ಮಹಡಿ ಮತ್ತು 3 ಮಹಡಿಯ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡುವುದು, ಹೈಕೋರ್ಟ್‌ ಆವರಣದಲ್ಲಿರುವ ಕ್ಯಾಂಟೀನ್‌ ಕಟ್ಟಡದ ಮೇಲೆ ಕಟ್ಟಡವೊಂದನ್ನು ನಿರ್ಮಾಣ ಮಾಡಲು ಸರ್ಕಾರ ಉದ್ದೇಶಿಸಿದೆ ಎನ್ನಲಾಗಿದೆ.

Kannada Bar & Bench
kannada.barandbench.com