ಟೆಂಪಲ್ಟನ್‌ ಪ್ರಕರಣ: ಕರ್ನಾಟಕ ಹೈಕೋರ್ಟ್‌ ʼಜಾಲ ಕಲಾಪʼದ ಮೂಲಕ ನಡೆಸಿದ ಅತಿ ಸುದೀರ್ಘ ವಿಚಾರಣೆ?

ಕರ್ನಾಟಕ ಹೈಕೋರ್ಟ್‌ ವೀಡಿಯೊ ಕಾನ್ಫರೆನ್ಸ್ ಮೂಲಕ 25 ದಿನಗಳ ಕಾಲ ನಡೆಸಿದ ವಿಚಾರಣೆ ಬಹುಶಃ ಒಂದೇ ಪ್ರಕರಣಕ್ಕೆ ಸಂಬಂಧಿಸಿದ ಸುದೀರ್ಘ ಅವಧಿಯ ‘ಜಾಲ ಕಲಾಪ’ ಎನ್ನಲಾಗುತ್ತಿದೆ.
Chief Justice Abhay S Oka and Justice Nagarathna of the Karnataka High Court
Chief Justice Abhay S Oka and Justice Nagarathna of the Karnataka High Court

ಕೋವಿಡ್‌- 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿರುವ ʼಜಾಲ ಕಲಾಪʼದ (ವರ್ಚುವಲ್‌ ಹಿಯರಿಂಗ್) ಬಗ್ಗೆ ನ್ಯಾಯವಾದಿ ಸಮುದಾಯ ಹಿಂದು-ಮುಂದು ನೋಡುತ್ತಿರುವಾಗಲೇ ಕರ್ನಾಟಕ ಹೈಕೋರ್ಟ್‌ ಹೊಸ ದಾಖಲೆ ಸೃಷ್ಟಿಸಿದೆ. ಆರು ಸಾಲ ನಿಧಿ ಯೋಜನೆಗಳನ್ನು ರದ್ದುಪಡಿಸಿರುವ ಮ್ಯೂಚುವಲ್‌ ಫಂಡ್‌ ಸಂಸ್ಥೆ ಫ್ರಾಂಕ್ಲಿನ್ ಟೆಂಪಲ್ಟನ್‌ನ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳಲ್ಲಿ ಕೆಲವನ್ನು 25 ದಿನಗಳ ಕಾಲ ವೀಡಿಯೊ ಕಾನ್ಫರೆನ್ಸ್ ವಿಚಾರಣೆ ನಡೆಸಿ 333 ಪುಟಗಳ ತೀರ್ಪನ್ನು ನ್ಯಾಯಾಲಯ ಶನಿವಾರ ಪ್ರಕಟಿಸಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ನ್ಯಾಯಪೀಠ ತೀರ್ಪು ನೀಡುವ ಮೊದಲು ಕೋವಿಡ್‌ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಸುದೀರ್ಘ ʼಜಾಲ ಕಲಾಪʼ ಇದು ಎಂದು ಅಭಿಪ್ರಾಯಪಟ್ಟಿತು.

"ಇದು ಅತಿ ದೀರ್ಘವಾದ ವೀಡಿಯೊ ಕಾನ್ಫರೆನ್ಸಿಂಗ್ ವಿಚಾರಣೆ‌ ಆಗಿರಬಹುದು. 25 ದಿನಗಳ ಕಾಲ ಇದು ನಡೆಯಿತು. ಲಂಡನ್, ನವದೆಹಲಿ, ಚೆನ್ನೈ, ಮುಂಬೈ ಮತ್ತು ಬೆಂಗಳೂರಿನಿಂದ ಪ್ರಕರಣಕ್ಕೆ ಸಂಬಂಧಿಸಿದ್ದವರು ಭಾಗಿಯಾಗಿದ್ದರು."
ಕರ್ನಾಟಕ ಹೈಕೋರ್ಟ್

ವಿಚಾರಣೆಯ ಅವಧಿಯಲ್ಲಿ, ಸಂಪರ್ಕದ ಸಮಸ್ಯೆ ಕೇವಲ ಒಮ್ಮೆ ಮಾತ್ರ ಅಂದರೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದಗಳನ್ನು ಆಲಿಸುವ ಸಂದರ್ಭದಲ್ಲಿ ಉದ್ಭವಿಸಿತ್ತು ಎಂದು ನ್ಯಾಯಾಲಯ ತಿಳಿಸಿತು. ವಿವಿಧ ಪಕ್ಷಗಳು ಸಲ್ಲಿಸಿದ ಪೂರ್ವನಿದರ್ಶನಗಳು ಮತ್ತಿತರ ದಾಖಲೆಗಳು ಇಮೇಲ್ ಮೂಲಕ ನ್ಯಾಯಾಲಯಕ್ಕೆ ತಲುಪಿದ್ದವು. ಪೀಠದ ಅವಲೋಕನದ ಪ್ರಕಾರ, 5,000 ಕ್ಕೂ ಹೆಚ್ಚು ಪುಟಗಳನ್ನು ಪ್ರಕರಣದ ದಾಖಲೆ ಒಳಗೊಂಡಿದೆ.

Also Read
ಫ್ರಾಂಕ್ಲಿನ್‌ ಟೆಂಪಲ್ಟನ್‌ ಸಾಲ ಯೋಜನೆ ರದ್ದತಿ: ಯೂನಿಟ್‌ ಹೋಲ್ಡರ್‌ಗಳ‌ ಒಪ್ಪಿಗೆ ಪಡೆಯಬೇಕೆಂದ ಕರ್ನಾಟಕ ಹೈಕೋರ್ಟ್‌

ಎಲ್ಲಾ ಪಕ್ಷಗಳು ತನ್ನ ತೀರ್ಪು ಒಪ್ಪದಿದ್ದರೂ ಸಹ, ಸುದೀರ್ಘ ಎನಿಸುವ ವಾದ ಮತ್ತು ಬೃಹತ್‌ ದಾಖಲೆಯ ಹೊರತಾಗಿಯೂ ವಿಚಾರಣೆಯನ್ನು ಸಮರ್ಥವಾಗಿ ನಡೆಸಿರುವುದನ್ನು ನಿರಾಕರಿಸಲು ಅವುಗಳಿಗೆ ಕಷ್ಟವಾಗುತ್ತದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಇಂತಹ ಪ್ರಕರಣಗಳನ್ನು ಆಲಿಸುವಾಗ, ನ್ಯಾಯವಾದಿ ವರ್ಗದ ಸಕ್ರಿಯ ಸಹಕಾರ ಅಗತ್ಯ ಎಂದು ಕೋರ್ಟ್‌ ಪ್ರತಿಕ್ರಿಯಿಸಿದೆ. "ಅವರೆಲ್ಲರಿಂದ (ವಿಚಾರಣೆಯಲ್ಲಿ ಭಾಗಿಯಾದ ವಕೀಲರು) ಸಂಪೂರ್ಣ ಸಹಕಾರ ಪಡೆದ ನಾವು ಅದೃಷ್ಟಶಾಲಿಗಳು" ಎಂದು ಪೀಠ ಕೃತಜ್ಞತೆ ಸೂಚಿಸಿತು.

ಸುದೀರ್ಘವಾದ ಮಂಡನೆ ಮತ್ತು ಕಾನೂನಿನ ಪ್ರಮುಖ ಪ್ರಶ್ನೆಗಳಿಗಾಗಿ ನ್ಯಾಯಾಲಯಗಳ ಭೌತಿಕ ವಿಚಾರಣೆಯನ್ನೇ ಅವಲಂಬಿಸಬೇಕಾದ ಸ್ಥಿತಿ ಬಗ್ಗೆ ವರ್ಚುವಲ್ ವಿಚಾರಣೆಗಳು ಆರಂಭವಾದಾಗಿನಿಂದಲೂ, ವಕೀಲರು ಗೋಳು ತೋಡಿಕೊಳ್ಳುತ್ತಿದ್ದಾರೆ. ಆದರೂ ಟೆಂಪಲ್ಟನ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ನಿರ್ವಹಿಸಿರುವ ರೀತಿಯಿಂದ ದೀರ್ಘ ವಾದಗಳು ಮತ್ತು ದಾಖಲಾತಿಗಳು ಉದ್ದವಾಗಿರುವುದು ಸಮಸ್ಯೆಯಲ್ಲ, ಜೊತೆಗೆ ನ್ಯಾಯಾಲಯಗಳು ಇಂತಹ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ವಿಚಾರಣೆ ನಡೆಸಿ ತೀರ್ಪು ನೀಡಬಹುದು ಎಂದು ಸಾಬೀತಾಗಿದೆ. ಇಂಟರ್ನೆಟ್‌ ಸಂಪರ್ಕ ಮತ್ತು ವಕೀಲರ ಸಿದ್ಧತೆ ಕಲಾಪಗಳ ಯಶಸ್ಸಿನಲ್ಲಿ ಬಹುಮುಖ್ಯವಾಗುತ್ತದೆ.

Related Stories

No stories found.
Kannada Bar & Bench
kannada.barandbench.com