
ಕಳೆದ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ₹2 ಕೋಟಿ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ದೂರುದಾರರಿಗೆ ವಾಪಸ್ ಕೊಡಬೇಕಾದ ಹಣದಲ್ಲಿ ₹25 ಲಕ್ಷ ಹಣವನ್ನು ಸೋಮವಾರದೊಳಗೆ (ಜುಲೈ 21) ಅವರ ಖಾತೆಗೆ ಜಮೆ ಮಾಡುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಹೋದರ ಗೋಪಾಲ್ ಜೋಶಿಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಗಡುವು ನೀಡಿದೆ.
ವಿಜಯಪುರದ ಮಾಜಿ ಶಾಸಕ ದೇವಾನಂದ ಚವ್ಹಾಣ್ ಪತ್ನಿ ಸುನೀತಾ ಚವ್ಹಾಣ್ ದಾಖಲಿಸಿರುವ ಎಫ್‌ಐಆರ್ ಹಾಗೂ ವಿಚಾರಣಾಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸಲು ಕೋರಿ ಗೋಪಾಲ್ ಜೋಶಿ, ಪುತ್ರ ಅಜಯ್ ಜೋಶಿ ಹಾಗೂ ವಿಜಯಲಕ್ಷ್ಮೀ ಜೋಶಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಡಿ ಆರ್ ರವಿಶಂಕರ್ ವಾದ ಆಲಿಸಿದ ನ್ಯಾಯಾಲಯವು “ಒಟ್ಟು ₹2 ಕೋಟಿ ಪೈಕಿ ₹50 ಲಕ್ಷ ವಾಪಸ್ ಕೊಡಲಾಗಿದ್ದು, ಬಾಕಿ ಉಳಿದ ₹1.50 ಕೋಟಿಯಲ್ಲಿ ₹ 25 ಲಕ್ಷ ಹಣವನ್ನು 2025ರ ಮಾರ್ಚ್ 25ರೊಳಗೆ ಪಾವತಿಸುವಂತೆ ಅರ್ಜಿದಾರರಿಗೆ ಹೇಳಲಾಗಿತ್ತು. ಇದನ್ನು ಒಪ್ಪಿಕೊಂಡು ಅರ್ಜಿದಾರರ ಪರ ವಕೀಲರು ಅಫಿಡವಿಟ್ ಸಹ ಸಲ್ಲಿಸಿದ್ದರು. ಇದೇ ಆಧಾರದಲ್ಲಿ ಪ್ರಕರಣಕ್ಕೆ ತಡೆ ನೀಡಿ ಹೊರಡಿಸಲಾಗಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಲಾಗಿತ್ತು. ಆದರೆ, ಈವರೆಗೆ ₹ 25 ಲಕ್ಷ ಹಣವನ್ನು ಪಾವತಿ ಮಾಡಲಾಗಿಲ್ಲ. ಕೋರ್ಟ್ ಆದೇಶ ಪಾಲಿಸಿಲ್ಲ ಎಂದಾದರೆ ಅರ್ಜಿಯನ್ನು ವಜಾಗೊಳಿಸುವುದಾಗಿ ಪೀಠ ಹೇಳಿತು. ವಕೀಲರ ಮನವಿ ಹಿನ್ನೆಲೆಯಲ್ಲಿ ₹ 25 ಲಕ್ಷ ಪಾವತಿಸಲು ಸೋಮವಾರದವರೆಗೆ ಅವಕಾಶ ನೀಡಿದ ಪೀಠವು ವಿಚಾರಣೆ ಮುಂದೂಡಿತು.