ಕರ್ನಾಟಕ ಹೈಕೋರ್ಟ್ ಮಧ್ಯಪ್ರವೇಶ: ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್‌ ಲ್ಯಾಪ್‌ಟಾಪ್‌ ಒದಗಿಸಲು ಸರ್ಕಾರದ ಸಮಗ್ರ ಯೋಜನೆ

ಸರ್ಕಾರದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಅರ್ಜಿದಾರ ವಕೀಲರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸರ್ಕಾರ ಕಡೆಗೂ ಲ್ಯಾಪ್‌ಟಾಪ್‌ ವಿತರಣೆ ಸಂಬಂಧ ಸಮಗ್ರ ನೀತಿಯೊಂದನ್ನು ರೂಪಿಸಿದೆ.
Karnataka High Court
Karnataka High Court
Published on

ಕರ್ನಾಟಕ ಹೈಕೋರ್ಟ್‌ ನೀಡಿದ್ದ ಮಧ್ಯಂತರ ಆದೇಶದನ್ವಯ ಕರ್ನಾಟಕ ಸರ್ಕಾರ ರಾಜ್ಯದ ಎಸ್‌ಎಸ್‌ಎಲ್‌ಸಿ ಮತ್ತು ನಂತರದ ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್‌ (ಮಾತನಾಡುವ) ಲ್ಯಾಪ್‌ಟಾಪ್‌ ಒದಗಿಸಲು ಆದೇಶಿಸಿದೆ.

ವಕೀಲ ಎಸ್‌ ಉಮಾಪತಿ ಅವರು ಸಲ್ಲಸಿದ್ದ ರಿಟ್‌ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ 18.03.2021ರಂದು ಉಚಿತ ಮಾತನಾಡುವ ಲ್ಯಾಪ್‌ಟಾಪ್‌ ಒದಗಿಸುವ ಸಂಬಂಧ ಒಂದು ತಿಂಗಳ ಒಳಗಾಗಿ ನೀತಿಯೊಂದನ್ನು ರೂಪಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು.

ಆದರೆ ಸರ್ಕಾರದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಅರ್ಜಿದಾರ ವಕೀಲರು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಶೇಷ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರು ಮತ್ತು ಪ್ರಧಾನ ಕಾರ್ಯದರ್ಶಿಗಳ ವಿರುದ್ಧ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸರ್ಕಾರ ಕಡೆಗೂ ಲ್ಯಾಪ್‌ಟಾಪ್‌ ವಿತರಣೆ ಸಂಬಂಧ ಸಮಗ್ರ ನೀತಿಯೊಂದನ್ನು ರೂಪಿಸಿದೆ.

ಈ ಸಂಬಂಧ ಇತ್ತೀಚೆಗೆ ಆದೇಶ ಹೊರಡಿಸಿರುವ ಸರ್ಕಾರ ಸಂಬಂಧ ಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು, ತಾಲ್ಲೂಕು ಪಂಚಾಯತ್‌ನ ಎಲ್ಲಾ ಕಾರ್ಯ ನಿರ್ವಾಹಕ ಅಧಿಕಾರಿಗಳು ಜೊತೆಗೆ ತಹಶೀಲ್ದಾರರರಿಗೆ ಲ್ಯಾಪ್‌ಟಾಪ್‌ ಯೋಜನೆಯ ಜವಾಬ್ದಾರಿ ನಿಗದಿಪಡಿಸಿದೆ.

ಯೋಜನೆ ಕುರಿತು ಕೈಗೊಂಡ ಕ್ರಮದ ಮಾಹಿತಿಯನ್ನು ಪ್ರತಿ ತಿಂಗಳು ತಪ್ಪದೆ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರಿಗೆ ಸಲ್ಲಿಸುವಂತೆ ಕೂಡ ತಿಳಿಸಲಾಗಿದೆ. ಯೋಜನೆ ಪಡೆಯಲು ಅರ್ಹ ಅಂಧ ವಿದ್ಯಾರ್ಥಿಗಳಿಗೆ ತೊಂದರೆ ಅಥವಾ ಅನನೂಕೂಲವಾದಲ್ಲಿ ಜಿಲ್ಲಾಧಿಕಾರಿಗಳಿಗೆ/ ಇಲಾಖಾ ಮುಖ್ಯಸ್ಥರಿಗೆ/ ಸರ್ಕಾರಕ್ಕೆ ದೂರು ಸಲ್ಲಿಸಬಹುದಾಗಿದೆ ಎಂದು ಇಲಾಖೆ ಹೊರಡಿಸಿರುವ ಅಧಿಸೂಚನೆ ತಿಳಿಸಿದೆ.

ಆದೇಶದ ಪ್ರತಿ ಮತ್ತು ಸಮಗ್ರ ಯೋಜನೆಯ ವಿವರಗಳನ್ನು ಇಲ್ಲಿ ಓದಿ:

Attachment
PDF
TALKING LAPTOP POLICY
Preview
Kannada Bar & Bench
kannada.barandbench.com