[ಉಚಿತ ಕೊಡುಗೆ] ರಾಜಕೀಯ ಪಕ್ಷಗಳ ರದ್ದತಿ ವಿಚಾರಕ್ಕೆ ಬರುವುದಿಲ್ಲ, ಏಕೆಂದರೆ ಅದು ಪ್ರಜಾಸತ್ತೆಗೆ ವಿರುದ್ಧ: ಸುಪ್ರೀಂ

ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ.
[ಉಚಿತ ಕೊಡುಗೆ] ರಾಜಕೀಯ ಪಕ್ಷಗಳ ರದ್ದತಿ ವಿಚಾರಕ್ಕೆ ಬರುವುದಿಲ್ಲ, ಏಕೆಂದರೆ ಅದು ಪ್ರಜಾಸತ್ತೆಗೆ ವಿರುದ್ಧ: ಸುಪ್ರೀಂ
A1

ಚುನಾವಣೆಗೆ ಮುನ್ನ ರಾಜಕೀಯ ಪಕ್ಷಗಳು ನೀಡುವ ಉಚಿತ ಕೊಡುಗೆಯ ಭರವಸೆ ವಿಚಾರವನ್ನು ಪರಿಶೀಲಿಸುತ್ತೇನಾದರೂ ಅದಕ್ಕಾಗಿ ರಾಜಕೀಯ ಪಕ್ಷಗಳ ನೋಂದಣಿ ರದ್ದುಗೊಳಿಸಬೇಕೆಂಬ ಮನವಿಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಸ್ಪಷ್ಟಪಡಿಸಿದೆ.

ಇಂತಹ ವಿನಂತಿ ಪರಿಗಣಿಸುವುದು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದ್ದು ಅದಕ್ಕೆ ಅನುಮತಿ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ, ನ್ಯಾಯಮೂರ್ತಿ ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠ ಹೇಳಿತು.

Also Read
ರಾಜಕೀಯ ಪಕ್ಷಗಳ ಉಚಿತ ಕೊಡುಗೆ: ಪ್ರಸ್ತಾವಿತ ತಜ್ಞರ ಸಮಿತಿಯಿಂದ ಹೊರಗುಳಿಯಲು ನಿರ್ಧರಿಸಿದ ಚುನಾವಣಾ ಆಯೋಗ

ಉಚಿತ ಕೊಡುಗೆಯ ಭರವಸೆ ನೀಡುವ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಿಗೆ ಕಡಿವಾಣ ಹಾಕಲು ಹಾಗೂ ಅಂತಹ ಪ್ರಣಾಳಿಕೆ ಹೊರಡಿಸಿದ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳನ್ನು ನಿಯಂತ್ರಿಸುವ ಅಗತ್ಯವಿದ್ದು ಶಾಸಕಾಂಗ ಈ ನಿಟ್ಟಿನಲ್ಲಿ ಕಾನೂನು ರೂಪಿಸುವವರೆಗೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಏನನ್ನಾದರೂ ಮಾಡಬೇಕು ಎಂದು ಕೋರಿದರು.

Also Read
ಉದ್ದಿಮೆಗಳಿಗೆ ನೀಡುವ ಉಚಿತ ಕೊಡುಗೆಗಳ ಬಗ್ಗೆ ಬಿಜೆಪಿಯ ನಂಟಿರುವ ಅರ್ಜಿದಾರರು ಪ್ರಸ್ತಾಪಿಸಿಲ್ಲ: ಸುಪ್ರೀಂಗೆ ಎಎಪಿ

ಆದರೆ ಪ್ರಕರಣ ಸಂಕೀರ್ಣ ಸಮಸ್ಯೆಯಿಂದ ಕೂಡಿದ್ದು ದೃಢ ಮಾಹಿತಿ ಆಧಾರಿಸಿ ಮಾತ್ರ ನಿರ್ಧಾರ ಮಾಡಬಹುದು ಎಂದು ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ತಿಳಿಸಿದರು (ಸಂಸದೀಯ ಪಟುವೂ ಆಗಿರುವ ಸಿಬಲ್‌ ಅವರು ಕೂಡ ತಮ್ಮ ಅಭಿಪ್ರಾಯಗಳನ್ನು ನೀಡಬೇಕು ಎಂದು ನ್ಯಾಯಾಲಯ ಈ ಹಿಂದಿನ ವಿಚಾರಣೆ ವೇಳೆ ತಿಳಿಸಿತ್ತು.)

ನಂತರ ಸಿಜೆಐ ರಮಣ ಅವರು ಉಚಿತ ಕೊಡುಗೆಗಳು ಅಕ್ರಮಗಳನ್ನು ಸಕ್ರಮಗೊಳಿಸುವುದಕ್ಕೆ ಹೇಗೆ ಕಾರಣವಾಗಬಹುದು ಎಂಬುದನ್ನು ವಿವರಿಸಿದರು. "ನನ್ನ ಮಾವ ಕೃಷಿಕರು. ಸರ್ಕಾರವು ಕೃಷಿಕರಿಗೆ ಅಥವಾ ಜಮೀನು ಹೊಂದಿರುವವರಿಗೆ (ಉಚಿತ ಕೊಡುಗೆ) ವಿದ್ಯುತ್ ಸಂಪರ್ಕ ನೀಡುವುದಿಲ್ಲ ಎಂದು ಹೇಳಿತ್ತು. ಆತ ತಾನು ರಿಟ್ ಸಲ್ಲಿಸಬಹುದೇ ಎಂದು ಮಾವ ನನ್ನನ್ನು ಕೇಳಿದರು, ಆದರೆ ನಾನು ಅವರಿಗೆ ಇದು ನೀತಿ ನಿರ್ಧಾರದ ವಿಷಯ ಎಂದು ಹೇಳಿದೆ. ಮುಂದೊಂದು ದಿನ ಅಕ್ರಮ ಸಂಪರ್ಕವನ್ನು ಸಕ್ರಮಗೊಳಿಸಲಾಗಿತ್ತು. ಆದರೆ, ಅವರದ್ದು ಅಕ್ರಮವಾಗಿರಲಿಲ್ಲ" ಎಂದರು. ಮುಂದುವರೆದು, "ನಾನು ನನ್ನ ಮನೆಯ ಇಟ್ಟಿಗೆಯನ್ನು ಮುಟ್ಟಲೂ ಸಾಧ್ಯವಿಲ್ಲ ಏಕೆಂದರೆ ಅದು ಮಂಜೂರಾತಿಯನ್ನು ಉಲ್ಲಂಘಿಸುತ್ತದೆ. ಆದರೆ, ಇತರೆ ಬಂಗಲೆಗಳು ಮಾತ್ರ ಅಂತಸ್ತುಗಳನ್ನು ಏರಿಸುತ್ತಿವೆ. ಮುಂದೆ ಅವುಗಳನ್ನು ಸಕ್ರಮಗೊಳಿಸಲಾಗಿರುತ್ತದೆ. ಹೀಗೆ ತಪ್ಪು ಮಾಡಿದವರನ್ನು ಮನ್ನಿಸಿ ಕಾನೂನು ಪಾಲಿಸುವವರನ್ನು ಶಿಕ್ಷಿಸಲಾಗುತ್ತದೆ. ಬೊಕ್ಕಸಕ್ಕೆ ಆಗುತ್ತಿರುವ ಹಣದ ನಷ್ಟ ಮತ್ತು ಜನರ ಕಲ್ಯಾಣವನ್ನು ಸಮತೋಲನಗೊಳಿಸಬೇಕು" ಎಂದು ಸಿಜೆಐ ಉದಾಹರಣೆಗಳ ಮೂಲಕ ಹೇಳಿದರು.

“ಅದಕ್ಕಾಗಿಯೇ ಈ ಚರ್ಚೆ ನಡೆಸಿದ್ದು ತಮ್ಮ ದೃಷ್ಟಿಕೋನ ಮತ್ತು ಆಲೋಚನೆಗಳನ್ನು ತಿಳಿಸುವವರು ದಯವಿಟ್ಟು ನನ್ನ ನಿವೃತ್ತಿಯ ಮೊದಲು (ನ್ಯಾ. ರಮಣ ಆ. 26ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ) ಏನಾದರೂ ವಾದ ಮಂಡಿಸಿ” ಎಂದು ಕೇಳಿದರು. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 17ಕ್ಕೆ ನಿಗದಿಯಾಗಿದೆ.

Related Stories

No stories found.
Kannada Bar & Bench
kannada.barandbench.com