ಪತ್ರಿಭಟನೆ ನಡೆಸುವುದು ಪ್ರಜಾಪ್ರಭುತ್ವ ಕಲ್ಪಿಸಿರುವ ಬಹುಮುಖ್ಯ ಹಕ್ಕು: ಹೈಕೋರ್ಟ್‌

ಅರ್ಜಿದಾರ ಸುವಿನ್ ಗಣಪತಿ ವಿರುದ್ಧದ ದೂರು ಹಾಗೂ ಆ ಕುರಿತು ವಿಚಾರಣಾಧೀನ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಮಾಡಿದ ಪೀಠವು ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು.
Justice Krishna S Dixit and Karnataka HC
Justice Krishna S Dixit and Karnataka HC
Published on

“ಪತ್ರಿಭಟನೆ ನಡೆಸುವುದು ಪ್ರಜಾಪ್ರಭುತ್ವ ಕಲ್ಪಿಸಿರುವ ಬಹುಮುಖ್ಯ ಹಕ್ಕು” ಎಂದು ಶುಕ್ರವಾರ ಮೌಖಿಕವಾಗಿ ಪ್ರತಿಪಾದಿಸಿದ ಕರ್ನಾಟಕ ಹೈಕೋರ್ಟ್‌, ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಗೆ ಸಣ್ಣ-ಪುಟ್ಟ ಹಾನಿ ಸಂಭವಿಸುವುದು ಸಹಜ ಎಂದಿದೆ.

ಪೆಟ್ರೋಲ್‌-ಡಿಸೇಲ್‌ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿದ ಹಾಗೂ ಸುಗಮ ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಬಿಜೆಪಿಯ ವಿರಾಜಪೇಟೆ ಮಂಡಲದ ಅಧ್ಯಕ್ಷ ಸುವಿನ್ ಗಣಪತಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರ ಸುವಿನ್ ಗಣಪತಿ ವಿರುದ್ಧದ ದೂರು ಹಾಗೂ ಆ ಕುರಿತು ವಿಚಾರಣಾಧೀನ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಮಾಡಿದ ಪೀಠವು ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲರ ಎಂ ಅರುಣ ಶ್ಯಾಮ್ ಅವರು “ಅರ್ಜಿದಾರರರ ಕಾನೂನು ಪಾಲಿಸುವ ಪ್ರಜೆಯಾಗಿದ್ದಾರೆ. ಪ್ರಕರಣ ಸಂಬಂಧ ಅರ್ಜಿದಾರರು ಅನುಮತಿ ಪಡೆದುಕೊಂಡೇ ಪ್ರತಿಭಟನೆ ನಡೆಸಿದ್ದಾರೆ. ಆದರೆ. ರಾಜಕೀಯ ಪ್ರೇರಿತವಾಗಿ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ಆದ್ದರಿಂದ, ಪ್ರಕರಣವನ್ನು ರದ್ದುಪಡಿಸಬೇಕು” ಎಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ರಾಜ್ಯ ಸರ್ಕಾರಿ ಅಭಿಯೋಜಕರಾದ ಬಿ ಎ ಬೆಳ್ಳಿಯಪ್ಪ ಅವರು “ಪ್ರತಿಭಟನೆ ಶಾಂತಿಯಿಂದ ನಡೆಸಬೇಕು. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರು ಪ್ರತಿಭಟನೆ ನಡೆಸುವ ನೆಪದಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡಿದ್ದಾರೆ. ಎರಡು ಗಂಟೆಗಳ ಹೆಚ್ಚು ಕಾಲ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅಡಚಣೆ ಮಾಡಿದ್ದಾರೆ. ಪರಿಣಾಮ ಸಾಮಾನ್ಯರಿಗೆ ಹಲವು ರೀತಿಯಲ್ಲಿ ತೊಂದರೆಯಾಗಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಬಾರದು” ಎಂದು ಮನವಿ ಮಾಡಿದರು.

ಆಗ ಪೀಠವು “ಪ್ರತಿಭಟನೆ ನಡೆಸುವುದು ಪ್ರಜಾಪ್ರಭ್ವತದ ಬಹು ಮುಖ್ಯ ಹಕ್ಕು. ಪ್ರಕರಣದಲ್ಲಿ ರಸ್ತೆ ಡಾಂಬರ್‌ಗೆ ಅಲ್ಪ ಪ್ರಮಾಣದಲ್ಲಿ ಹಾನಿ ಉಂಟಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಅದು ಸಹಜ. ಇದು ಪ್ರಯೋಗ ಶಾಲೆಯಲ್ಲಿ ನಡೆಯುವ ಪ್ರತಿಭಟನೆಯಲ್ಲ. ಬದಲಿಗೆ ಪೆಟ್ರೋಲ್-ಡೀಸೆಲ್‌ ಬೆಲೆ ವಿಚಾರವಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಡೆಯುವ ಪ್ರತಿಭಟನೆಯಾಗಿದೆ. ಸಿಗರೇಟ್ ತಾಗಿದರೂ ಅಲ್ಪ ಪ್ರಮಾಣದಲ್ಲಿ ರಸ್ತೆಗೆ ಹಾನಿಯಾಗುತ್ತದೆ. ಅದಕ್ಕೆ ಏನೂ ಮಾಡಲು ಸಾಧ್ಯವಾಗುವುದಿಲ್ಲ” ಎಂದು ನುಡಿಯಿತು.

ಆಗ ಬೆಳ್ಳಿಯಪ್ಪ ಅವರು “ಒಂದು ರೂಪಾಯಿ ಹಾನಿಯಾದರೂ ಅಥವಾ 50 ಸಾವಿರ ರೂಪಾಯಿ ಹಾನಿಯಾದರೂ ಅದು ಸಾರ್ವಜನಿಕ ಆಸ್ತಿಯಲ್ಲವೇ. ಹಾಗಾಗಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಪೀಠವನ್ನು ಕೋರಿದರು.

ಇದಕ್ಕೆ ನ್ಯಾಯಾಲಯವು “ಸ್ಥಳದ ಮಹಜರು ವರದಿಯಲ್ಲಿ ಸಾರ್ವಜನಿಕ ಆಸ್ತಿಯ ಹಾನಿ ಕುರಿತು ಉಲ್ಲೇಖಿಸಿಲ್ಲ. ಈ ರೀತಿ ಸಣ್ಣ- ಪುಟ್ಟ ವಿಷಯದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು” ಎಂದಿತು. ಅಂತಿಮವಾಗಿ ಅರ್ಜಿದಾರರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಎಲ್ಲಾ ಕಾನೂನು ಪ್ರಕ್ರಿಯೆ ಹಾಗೂ ತನಿಖೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿತು.

ಪ್ರಕರಣದ ಹಿನ್ನೆಲೆ: ರಾಜ್ಯದಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ಹಿನ್ನೆಲೆ 2024ರ ಜೂನ್‌ 20ರಂದು ಬಿಜೆಪಿ ವಿರಾಜಪೇಟೆ ಮಂಡಲದ ಅಧ್ಯಕ್ಷ ಸುವಿನ್ ಗಣಪತಿ ನೇತೃತ್ವದಲ್ಲಿ ವಿರಾಜಪೇಟೆ ಬಿಜೆಪಿ ಕಚೇರಿ ಬಳಿ ಗುಂಪುಕಟ್ಟಿಕೊಂಡು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯಿಂದ ಸುಗಮ ಸಂಚಾರಕ್ಕೆ ತಡೆ ಉಂಟಾಗಿದೆ ಹಾಗೂ ಪ್ರತಿಭಟನಕಾರರು ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡಿದ್ದಾರೆ ಎಂದು ಆರೋಪಿಸಿ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಅರ್ಜಿದಾರರ ವಿರುದ್ಧ ದೂರು ದಾಖಲಾಗಿತ್ತು. ಅದನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Kannada Bar & Bench
kannada.barandbench.com