ತಾನು ಒಂದು ಖಾಸಗಿ ಕಂಪೆನಿಯಾಗಿದ್ದು ಸಂವಿಧಾನದ 19ನೇ ವಿಧಿಯಡಿ ಒದಗಿಸಲಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ತನ್ನ ವಿರುದ್ಧ ಪ್ರತಿಪಾದಿಸಲು ಸಾಧ್ಯವಿಲ್ಲ ಎಂದು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಒಡೆತನದ ʼಮೆಟಾʼ ಪ್ಲಾಟ್‌ಫಾರ್ಮ್' ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಮೆಟಾದ ಸೇವಾ ನಿಯಮಗಳ ಪ್ರಕಾರ ತಾನು ಒದಗಿಸುವ ಸೇವೆಗಾಗಿ ಸೈನ್ ಅಪ್ ಆಗುವಾಗ ಬಳಕೆದಾರರು ಮತ್ತು ತನ್ನ ನಡುವೆ ಒಪ್ಪಂದ ಏರ್ಪಡಲಿದ್ದು ಇದು ಖಾಸಗಿಯಾದ ಒಪ್ಪಂದವಾಗಿದೆ ಎಂದು ಅದು ಹೇಳಿಕೊಂಡಿದೆ.
ಮೆಟಾದ ಸೇವೆಗಳನ್ನು ಪಡೆಯಲು ಬಳಕೆದಾರರು ಸೈನ್ ಅಪ್ ಆಗುವ ವೇಳೆ ಸಂಸ್ಥೆಯೊಂದಿಗೆ ಕರಾರಿಗೆ ಒಳಪಡುತ್ತಾರೆ. ಹಾಗಾಗಿ, ಸಂಸ್ಥೆ (ವೇದಿಕೆ) ಮತ್ತು ಬಳಕೆದಾರರೊಂದಿಗಿನ ಸಂಬಂಧವು ಮೆಟಾದ ಸೇವಾ ನಿಯಮಗಳಿಗೆ ಒಳಪಟ್ಟಂತೆ ಖಾಸಗಿ ಒಪ್ಪಂದದ ಮೂಲಕ ಪ್ರಕಟವಾಗುತ್ತದೆ.
ವೋಕ್‌ಫ್ಲಿಕ್ಸ್ ಸಲ್ಲಿಸಿರುವ ಅರ್ಜಿ ಸಂಬಂಧ ಮೆಟಾ ವೇದಿಕೆಯು ಈ ಪ್ರತಿಕ್ರಿಯೆ ನೀಡಿದೆ. ಇನ್‌ಸ್ಟಾಗ್ರಾಂ ತನ್ನ ಒಂದು ಸ್ಟೋರಿಯನ್ನು ಅಳಿಸಿಹಾಕಿತ್ತು. ಅದಾದ ಒಂದು ದಿನದ ಬಳಿಕ ದ್ವೇಷ ಭಾಷಣವನ್ನು ಒಳಗೊಂಡಿದೆ ಎಂಬ ಕಾರಣಕ್ಕೆ ತನ್ನ ಖಾತೆಯನ್ನೇ ನಿಷ್ಕ್ರಿಯಗೊಳಿಸಲಾಗಿದೆ ಎಂದು ವೋಕ್‌ಫ್ಲಿಕ್ಸ್ ದೂರು ನೀಡಿತ್ತು.
ತಾನು ಸಾರ್ವಜನಿಕ ಚಟುವಟಿಕೆಗಳನ್ನು ನಡೆಸುವುದಿಲ್ಲವಾದ್ದರಿಂದ ತನ್ನ ವಿರುದ್ಧ ಹೈಕೋರ್ಟ್‌ನ ರಿಟ್ ನ್ಯಾಯವ್ಯಾಪ್ತಿ ಅನ್ವಯಿಸಲು ಆಗದು. ಸಂವಿಧಾನದ 12ನೇ ವಿಧಿಯಲ್ಲಿ ತಿಳಿಸಿರುವಂತೆ ತಾನು 'ಪ್ರಭುತ್ವ' ಅಲ್ಲ ಹಾಗೂ ಸಾರ್ವಜನಿಕ ಕಾರ್ಯದಲ್ಲಿ ತೊಡಗಿಲ್ಲʼ ಎಂದು ಫೇಸ್ಬುಕ್ ಮತ್ತು ಇನ್‌ಸ್ಟಾಗ್ರಾಂ ಒಡೆತನ ಹೊಂದಿರುವ ʼಮೆಟಾʼ ತಿಳಿಸಿದೆ.