ಪ್ರಧಾನಿಯನ್ನು ನಿಂದಿಸಿ ವಾಕ್ ಸ್ವಾತಂತ್ರ್ಯದಡಿ ರಕ್ಷಣೆ ಪಡೆಯಲಾಗದು: ಅಲಾಹಾಬಾದ್ ಹೈಕೋರ್ಟ್
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಮತ್ತು ನಿಂದನೀಯ ಪೋಸ್ಟ್‌ಗಳನ್ನು ಪ್ರಕಟಿಸಿದ್ದ ವ್ಯಕ್ತಿಯೊಬ್ಬರ ಎಫ್‌ಐಆರ್ ರದ್ದುಗೊಳಿಸಲು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ [ಮುಮ್ತಾಜ್ ಮನ್ಸೂರಿ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಯಾವುದೇ ನಾಗರಿಕರ ವಿರುದ್ಧ ಅದರಲ್ಲಿಯೂ ಪ್ರಧಾನಿಯವರ ವಿರುದ್ಧ ನಿಂದನೆ ಮಾಡಿದರೆ ವಾಕ್ ಸ್ವಾತಂತ್ರ್ಯದಡಿ ರಕ್ಷಣೆ ದೊರೆಯದು ಎಂದು ನ್ಯಾಯಮೂರ್ತಿ ಅಶ್ವನಿ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ರಾಜೇಂದ್ರ ಕುಮಾರ್ ಅವರಿದ್ದ ಪೀಠ ತಿಳಿಸಿತು.
ದೇಶದ ಸಂವಿಧಾನ ಪ್ರತಿಯೊಬ್ಬ ಪ್ರಜೆಗೆ ವಾಕ್ ಸ್ವಾತಂತ್ರ್ಯ ನೀಡುತ್ತದೆ. ಆದರೆ ಅಂತಹ ಹಕ್ಕು ಭಾರತ ಸರ್ಕಾರದ ಪ್ರಧಾನ ಮಂತ್ರಿ ಅಥವಾ ಇತರ ಮಂತ್ರಿಗಳು ಸೇರಿದಂತೆ ಯಾವುದೇ ನಾಗರಿಕರ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಅಥವಾ ನಿಂದನೆಯನ್ನು ಮಾಡಲು ಬಳಕೆಯಾಗಬಾರದು ಎಂದು ನ್ಯಾಯಾಲಯ ವಿವರಿಸಿದೆ.
ಎಫ್ಐಆರ್ ಪ್ರಕಾರ, ಅರ್ಜಿದಾರ-ಆರೋಪಿ ಮುಮ್ತಾಜ್ ಮನ್ಸೂರಿ ಅವರು ಪ್ರಧಾನಿ ಮತ್ತು ಗೃಹ ಸಚಿವರು ಮತ್ತು ಇತರ ಮಂತ್ರಿಗಳನ್ನು ‘ನಾಯಿ’ ಎಂದು ಉಲ್ಲೇಖಿಸಿ ಅತ್ಯಂತ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 (ಶಾಂತಿ ಭಂಗ ಉಂಟು ಮಾಡುವ ಉದ್ದೇಶದ ಅವಮಾನ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಇದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಸಂಜ್ಞೇಯ ಅಪರಾಧ ನಡೆದಿರುವುದು ಎಫ್‌ಐಆರ್‌ನಿಂದ ಬಹಿರಂಗವಾಗಿದೆ. ಹೀಗಾಗಿ ಅರ್ಜಿಯನ್ನು ವಜಾಗೊಳಿಸುತ್ತಿರುವುದಾಗಿ ನ್ಯಾಯಾಲಯ ತಿಳಿಸಿತು.