[ರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ] ವಾಕ್‌ ಸ್ವಾತಂತ್ರ್ಯದೇಶದ ಸಾರ್ವಭೌಮತ್ವ ಉಲ್ಲಂಘಿಸಬಾರದು: ನ್ಯಾ. ಮಿಶ್ರಾ

ಭಾರತವು ಜಗತ್ತಿನಲ್ಲಿಯೇ ಅತಿ ದೊಡ್ಡದಾದ ಚೈತನ್ಯಶೀಲ ಪ್ರಜಾಪ್ರಭುತ್ವವಾಗಿದ್ದು, ವಿವಿಧ ಧರ್ಮ, ಸಂಸ್ಕೃತಿ, ಶ್ರದ್ಧೆ ಮತ್ತು ಭಾಷೆಗಳ ನಡುವೆ ಏಕತೆಯನ್ನು ಹೊಂದಿದೆ ಎಂದ ಎನ್‌ಎಚ್‌ಆರ್‌ಸಿ ಅಧ್ಯಕ್ಷ ನ್ಯಾ. ಅರುಣ್‌ ಮಿಶ್ರಾ.
Justice Arun Mishra, NHRC
Justice Arun Mishra, NHRC

ವಾಕ್‌ ಸ್ವಾತಂತ್ರ್ಯವು ರಕ್ಷಿಸಲೇಬೇಕಾದ ಮೂಲಭೂತ ಹಕ್ಕಾಗಿದೆ. ಆದರೆ, ಹಾಗೆಂದು ಅದು ದೇಶದ ಸಾರ್ವಭೌಮತೆ, ಸಮಗ್ರತೆಯನ್ನು ಉಲ್ಲಂಘಿಸುವ ಕಾಡುಕುದುರೆಯಾಗಬಾರದು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾ. ಅರುಣ್‌ ಮಿಶ್ರಾ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೂ ಆಗಿರುವ ಅರುಣ್‌ ಮಿಶ್ರಾ ಅವರು ಮಾನವ ಹಕ್ಕುಗಳ ದಿನಾಚರಣೆಯ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದರು. ಅವರ ಭಾಷಣದ ಪ್ರಮುಖ ಅಂಶಗಳು:

  • ವಾಕ್‌ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕಾಗಿ ರಕ್ಷಿಸಬೇಕು. ಅದರೆ, ಅದು ದೇಶದ ಸಮಗ್ರತೆ, ಸಾರ್ವಭೌಮತ್ವವನ್ನಾಗಲಿ, ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಘನತೆಯನ್ನಾಗಲಿ ಉಲ್ಲಂಘಿಸುವ ಕಾಡು ಕುದುರೆಯಾಗಬಾರದು.

  • ಭಾರತವು ಜಗತ್ತಿನಲ್ಲಿಯೇ ಅತಿ ದೊಡ್ಡದಾದ ಚೈತನ್ಯಶೀಲ ಪ್ರಜಾಪ್ರಭುತ್ವವಾಗಿದ್ದು, ವಿವಿಧ ಧರ್ಮ, ಸಂಸ್ಕೃತಿ, ಶ್ರದ್ಧೆ ಮತ್ತು ಭಾಷೆಗಳ ನಡುವೆ ಏಕತೆಯನ್ನು ಹೊಂದಿದೆ. ನಮ್ಮ ಉಜ್ವಲ ಭವಿಷ್ಯವು ಅಸಮಾನತೆ, ಅಜ್ಞಾನ, ಅನಕ್ಷರತೆ, ರೋಗ, ಬಡತನಗಳನ್ನು ತೊಡೆಯುವುದನ್ನು ಆಶ್ರಯಿಸಿರುತ್ತದೆ.

  • ಲಿಂಗಾಧಾರಿತ, ವೈಕಲ್ಯ ಕೇಂದ್ರಿತ, ವಯೋಮಾನ ಆಧರಿತ ತಾರತಮ್ಯ ನಿವಾರಣೆಯನ್ನು ನಾವು ಸಾಧಿಸಬೇಕಿದೆ. ಸಾಮರಸ್ಯದ ಸಮಾಜ ನಿರ್ಮಾಣ ಮಾಡುವಲ್ಲಿ ಎದುರಾಗಿರುವ ತೊಡಕುಗಳನ್ನು ನಿವಾರಿಸಬೇಕಿದೆ. ದುರ್ಬಲರನ್ನು ಸಬಲರನ್ನಾಗಿಸಬೇಕಿದೆ.

  • ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯ ಸಾಕಾರಕ್ಕೆ ಅಡಚಣೆಯಾಗುವ ಹೊರಗುಳಿಯುವಿಕೆಗೆ ಕಾರಣವಾಗುವ ಅಂಶಗಳನ್ನು ನಾವು ಗಣನೆಗೆ ತೆಗೆದುಕೊಂಡು ಯಾರೊಬ್ಬರೂ ತಾರತಮ್ಯಕ್ಕೆ ಸಿಲುಕಿ ಸಂತ್ರಸ್ತರಾಗದಂತೆ ಖಚಿತಪಡಿಸಿಕೊಳ್ಳಬೇಕಿದೆ.

  • ಪ್ರತಿಯೊಬ್ಬರೂ ತಮ್ಮ ಶ್ರಮದ ಪ್ರತಿಫಲವನ್ನು ಪಡೆಯುವುದನ್ನು ನಾವು ಖಾತರಿಪಡಿಸಬೇಕಿದೆ. ಸಣ್ಣ ವ್ಯಾಪಾರಿಗಳು ಹಸಿವಿನಿಂದ ನರಳಬಾರದು. ನಾಗರಿಕ ಸ್ವಾತಂತ್ರ್ಯದ ದಮನವಾಗಬಾರದು.

Related Stories

No stories found.
Kannada Bar & Bench
kannada.barandbench.com