ಹಣಕ್ಕಾಗಿ ಸ್ನೇಹಿತನ ಕೊಲೆ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್‌

2014ರ ಅಕ್ಟೋಬರ್‌ 31ರಂದು ಮೇಲ್ಮನವಿದಾರನನ್ನು ದೋಷಿಗಳು ಎಂದು ತೀರ್ಮಾನಿಸಿದ್ದ ಮತ್ತು 2014ರ ನವೆಂಬರ್‌ 6ರಂದು ನಾಲ್ವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
High Court of Karnataka
High Court of Karnataka

ಹಣಕ್ಕಾಗಿ ಸ್ನೇಹಿತನನ್ನು ಅಪಹರಿಸಿ ಕೊಲೆಗೈದ ಪ್ರಕರಣದಲ್ಲಿ ಮುಂಬೈ ಮೂಲದ ಇಬ್ಬರು ಯುವತಿರು ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಎತ್ತಿ ಹಿಡಿದಿದೆ.

ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಆರೋಪಿಗಳಾದ ಜಾರ್ಖಾಂಡ್‌ನ ರೋಹಿತ್ ಕುಮಾರ್, ಮುಂಬೈ ಮೂಲದ ಶಿವಾನಿ ಠಾಕೂರ್, ಪ್ರೀತಿ ರಾಜ್ ಮತ್ತು ಬಿಹಾರದ ವಾರಿಶ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್‌ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠವು ನಾಲ್ವರಿಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿದೆ.

ಕೊಲೆಯು ಶಿವಾನಿ ಮತ್ತು ರೋಹಿತ್ ಕುಮಾರ್ ಮನೆಯಲ್ಲಿ ನಡೆದಿದೆ. ಮೊದಲನೆ ಆರೋಪಿಯ ಬಟ್ಟೆಗಳು ಮತ್ತು ಆತನ ಉಳಿದುಕೊಂಡ ಲಾಡ್ಜ್‌ನ ರಸೀದಿಗಳು ರೋಹಿತ್ ಮನೆಯಲ್ಲೇ ದೊರೆತಿದೆ. ಎಸ್ಟೀಮ್ ಮಾಲ್‌ನ ಸಿಸಿಟಿವಿ ದೃಶ್ಯಾವಳಿ ಪ್ರಕಾರ 2011ರ ಜನವರಿ 14ರ ಮೊದಲಿಂದಲೂ ಶಿವಾನಿ ಮತ್ತು ಪ್ರೀತಿ ರಾಜ್‌ಗೆ ತುಷಾರ್ ಜೊತೆಗೆ ಪರಿಚಯವಿತ್ತು ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ನಾಲ್ವರು ಆರೋಪಿಗಳು ಜೊತೆಗೂಡದಿದ್ದರೆ ತುಷಾರ್ ಅನ್ನು ಅಪಹರಿಸಿ, ಕೊಲೆ ಮಾಡಲಾಗುತ್ತಿರಲಿಲ್ಲ. ಆರೋಪಿಗಳು ಕೇವಲ ಕೊಲೆ ಮಾಡಿಲ್ಲ. ಮೃತದೇಹವನ್ನು ವಿಲೇವಾರಿ ಮಾಡಿ ಸಾಕ್ಷ್ಯ ನಾಶಕ್ಕೂ ಯತ್ನಿಸಿದ್ದಾರೆ. ಲಭ್ಯವಿರುವ ದಾಖಲೆ ಗಮನಿಸಿದರೆ ಇಬ್ಬರು ಯುವತಿಯರು ಮೃತನೊಂದಿಗೆ ಸ್ನೇಹ ಸಾಧಿಸಿ, ಹತ್ತಿರವಾಗಿದ್ದಾರೆ. ರೋಹಿತ್ ಮತ್ತು ವಾರಿಶ್ ಜೊತೆಗೂಡಿ ತುಷಾರ್ ಅನ್ನು ಅಪಹರಿಸಿದ್ದಾರೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

ವಾರಿಶ್‌ ಸೂಚನೆ ಮೇರೆಗೆ ರೋಹಿತ್ ಮೃತನ ತಂದೆಯಿಂದ ಹಣ ಪಡೆಯಲು ರೈಲು ನಿಲ್ದಾಣಕ್ಕೆ ಹೋಗಿದ್ದಾನೆ. ಈ ವೇಳೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಹೇಳಿಕೆ ಆಧರಿಸಿ, ಮೃತದೇಹವನ್ನು ಪತ್ತೆ ಹಚ್ಚಲಾಗಿತ್ತು. ಆದ್ದರಿಂದ, ಎಲ್ಲರೂ ಪ್ರಕರಣದಲ್ಲಿ ಒಳಸಂಚು ರೂಪಿಸಿದ್ದರು ಎಂಬುದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಿದೆ. ಇದನ್ನು ಪರಿಗಣಿಸಿ ನಾಲ್ವರು ಆರೋಪಿಗಳಿಗೂ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಎಲ್ಲಾ ಸಾಕ್ಷ್ಯಧಾರಗಳನ್ನು ಮರು ಪರಿಶೀಲಿಸಿದರೆ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡುವ ಅಗತ್ಯ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟು ಮೇಲ್ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಅಂತೆಯೇ, 2014ರ ಅಕ್ಟೋಬರ್‌ 31ರಂದು ಮೇಲ್ಮನವಿದಾರನನ್ನು ದೋಷಿಗಳು ಎಂದು ತೀರ್ಮಾನಿಸಿದ್ದ ಮತ್ತು 2014ರ ನವೆಂಬರ್‌ 6ರಂದು ನಾಲ್ವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಪ್ರಕರಣದ ಹಿನ್ನೆಲೆ: ವಾರಿಶ್ ಮತ್ತು ತುಷಾರ್ ರಾಜಸ್ಥಾನದಲ್ಲಿ ಒಟ್ಟಿಗೆ ಓದಿದ್ದರು. ಎಂಜಿನಿಯರಿಂಗ್ ವ್ಯಾಸಂಗ ಮಾಡಲು ತುಷಾರ್ ಬೆಂಗಳೂರಿಗೆ ಬಂದಿದ್ದ. ಶ್ರೀಮಂತ ಕುಟುಂಬದ ಹಿನ್ನೆಲೆ ಹೊಂದಿದ್ದರಿಂದ ತುಷಾರ್‌ನನ್ನು ಅಪಹರಿಸಿ ಹಣಕ್ಕೆ ವಸೂಲಿ ಮಾಡಲು ಯೋಜಿಸಿ, ವಾರಿಶ್ ಬೆಂಗಳೂರಿಗೆ ಬಂದಿದ್ದ. ನಂತರ ಎಂಜಿನಿಯರಿಂಗ್ ಕೋರ್ಸ್ ಅನ್ನು ಅರ್ಧಕ್ಕೆ ಬಿಟ್ಟು ನಗರದಲ್ಲಿ ಉದ್ಯೋಗ ಮಾಡುತ್ತಿದ್ದ ತಮ್ಮ ಸಂಬಂಧಿಕರಾದ ಪ್ರೀತಿ ಮತ್ತು ಶಿವಾನಿಯನ್ನು ತುಷಾರ್‌ಗೆ ವಾರಿಶ್‌ ಪರಿಚಯ ಮಾಡಿಕೊಟ್ಟಿದ್ದ.

2011ರ ಜನವರಿ 14ರಂದು ತುಷಾರ್ ಕಾಣೆಯಾಗಿದ್ದ. ಇದಾದ ಏಳು ದಿನಗಳ ನಂತರ ಆತನ ಮೃತ ದೇಹ ವೀರಸಾಗರ ರಸ್ತೆಯ ನೀಲಗಿರಿ ತೋಪಿನಲ್ಲಿ ಪತ್ತೆಯಾಗಿತ್ತು.

ತುಷಾರ್ ಮತ್ತು ಆತನ ಗೆಳೆಯ ಆಯುಷ್ಮಾನ್ ನಗರದಲ್ಲಿ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ತುಷಾರ್ ಕೊನೆಯದಾಗಿ ಶಿವಾನಿ ಠಾಕೂರ್ ಮತ್ತು ಪ್ರೀತಿ ರಾಜ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಜನವರಿ 14ರಂದು ತುಷಾರ್ ಸ್ನೇಹಿತ ಆಯುಷ್ಮಾನ್ ಲಾಲ್ ಜೊತೆಗೆ ನಗರದ ಎಸ್ಟೀಮ್ ಮಾಲ್‌ಗೆ ಹೋಗಿದ್ದ. ಆ ವೇಳೆ ತುಷಾರ್ ತನ್ನ ಗೆಳತಿಯರೂ ಅದ ಪ್ರಕರಣದ ನಾಲ್ಕನೇ ಆರೋಪಿ ಪ್ರೀತಿ ರಾಜ್ ಮತ್ತು ಮೂರನೇ ಆರೋಪಿ ಶಿವಾನಿ ಠಾಕೂರ್ ಅನ್ನು ಆಯುಷ್ಮಾನ್ ಲಾಲ್‌ಗೆ ಪರಿಚಯ ಮಾಡಿಕೊಟ್ಟಿದ್ದ. ಮಾಲ್‌ನಲ್ಲಿ ಊಟ ಮುಗಿಸಿ ಹೊರಬಂದ ವೇಳೆ ತಮ್ಮನ್ನು ಮನೆಯವರೆಗೆ ಬಿಡುವಂತೆ ತುಷಾರ್‌ಗೆ ಶಿವಾನಿ ಮತ್ತು ಪ್ರೀತಿ ಕೋರಿದ್ದರು. ಆಗ ಆ ಮೂವರು ಆರ್ ಟಿ ನಗರದ ಮನೆಗೆ ಆಟೋ ಹಿಡಿದು ಹೊರಟಿದ್ದರು.

ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿದ್ದ ಆಯುಷ್ಮಾನ್ ಲಾಲ್, ಆಟೊ ಯಲಹಂಕ ಕಡೆಗೆ ಹೋಗುವುದನ್ನು ಗಮನಿಸಿ, ಕಾಲೇಜಿನ ಬಳಿ ವಾಪಸ್ ಬಂದು ಕಾಯುತ್ತಿದ್ದ. ಆದರೆ, ಆಯುಷ್ಮಾನ್‌ಗೆ ಮೊಬೈಲ್‌ಗೆ ತುಷಾರ್‌ನಿಂದ ‘ನಾನು ಹುಡಗಿಯರೊಂದಿಗೆ ಇದ್ದೇನೆ. ಮದ್ಯವನ್ನು ತಂದಿದ್ದೇನೆ. ಇಲ್ಲಿಯೇ ಸ್ವಲ್ಪ ಹೊತ್ತು ಇರುತ್ತೇನೆ’ ಎಂಬ ಸಂದೇಶ ಬಂದಿತ್ತು. ಇದರಿಂದ ಆಯುಷ್ಮಾನ್ ತನ್ನ ರೂಮಿಗೆ ತೆರಳಿದ್ದ. ಜನವರಿ 16ರಂದು ತುಷಾರ್ ಮೊಬೈಲ್‌ನಿಂದಲೇ ಆತನ ತಂದೆಗೆ ಕರೆ ಮಾಡಿದ್ದ ಆರೋಪಿಗಳು, ನಿಮ್ಮ ಮಗನನ್ನು ಅಪಹರಣ ಮಾಡಿದ್ದು, 10 ಲಕ್ಷ ನೀಡಿ, ಬಿಡಿಸಿಕೊಂಡು ಹೋಗುವಂತೆ ಸೂಚಿಸಿದ್ದರು. ಇದರಿಂದ ತುಷಾರ್ ತಂದೆ ಬಿಹಾರದಿಂದ ಬೆಂಗಳೂರಿಗೆ ಬಂದು ಪೊಲೀಸರಿಗೆ ದೂರು ನೀಡಿದ್ದರು.

10 ಲಕ್ಷ ಹಣ ಪಡೆಯಲು ರೈಲು ನಿಲ್ದಾಣಕ್ಕೆ ಬಂದ ಎರಡನೇ ಆರೋಪಿ ರೋಹಿತ್ ಕುಮಾರ್ ಅನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ತುಷಾರ್ ತಂದೆ ನೀಡುವ ಹಣವನ್ನು ತೆಗೆದುಕೊಂಡು ಬರುವಂತೆ ತನಗೆ ವಾರಿಶ್‌ ತಿಳಿಸಿದ್ದ ಎಂದು ಆತ ಮಾಹಿತಿ ನೀಡಿದ್ದನು. ಇದನ್ನು ಆಧರಿಸಿದ ಪೊಲೀಸರು, ಚಿಕ್ಕಪೇಟೆಯ ಲಾಡ್ಜ್‌ವೊಂದರಲ್ಲಿ ವಾರಿಶ್‌ನನ್ನು ಬಂಧಿಸಿದ್ದರು. ಆತ, ಜನವರಿ 14ರಂದೇ ತುಷಾರ್‌ನನ್ನು ಅಪಹರಿಸಿ, ಕೊಲೆ ಮಾಡಿರುವುದಾಗಿ ತಿಳಿಸಿದ್ದ. ಆತ ನೀಡಿದ ಮಾಹಿತಿ ಮೇರೆಗೆ ವೀರಸಾಗರ ರಸ್ತೆಯ ನೀಲಗಿರಿ ತೋಟದಲ್ಲಿ ಮೃತ ದೇಹವನ್ನು ಪತ್ತೆ ಹಚ್ಚಲಾಗಿತ್ತು.

ನಂತರ ಪೊಲೀಸರು ಶಿವಾನಿ ಮತ್ತು ಪ್ರೀತಿಯನ್ನು ಬಂಧಿಸಿದ್ದರು. ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪಿಗಳೇ ಹಣಕ್ಕಾಗಿ ತುಷಾರ್ ಅನ್ನು ಅಪಹರಿಸಿ ಕೊಲೆ ಮಾಡಿರುವುದಾಗಿ ಪ್ರಾಸಿಕ್ಯೂಷನ್ ಸಂಶಯತೀತಾತವಾಗಿ ಸಾಬೀತುಪಡಿಸಿದೆ ಎಂದು ಅಭಿಪ್ರಾಯಪಟ್ಟಿದ್ದ ಬೆಂಗಳೂರಿನ 15ನೇ ತ್ವರಿತಗತಿ ನ್ಯಾಯಾಲಯ ನಾಲ್ವರು ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪು ರದ್ದು ಕೋರಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು.

Related Stories

No stories found.
Kannada Bar & Bench
kannada.barandbench.com