ದೇವಾಸ್‌ ಸಿಇಒ ರಾಮಚಂದ್ರನ್‌ ವಿರುದ್ಧ ದೇಶಭ್ರಷ್ಟ ಆರ್ಥಿಕ ಅಪರಾಧಗಳ ಪ್ರಕರಣ: ಸಾಕ್ಷ್ಯ ದಾಖಲಿಸಲು ಮುಂದಾದ ನ್ಯಾಯಾಲಯ

ಹಾಲಿ ನಿಯಮಾವಳಿಯು ಅಪರಾಧವನ್ನು ಸಾಬೀತುಪಡಿಸುವ ಹೊಣೆಗಾರಿಕೆ ಬಗ್ಗೆ ಮಾತನಾಡುವುದರಿಂದ ಅದನ್ನು ಸಾಬೀತುಪಡಿಸಲು ಸಾಕ್ಷ್ಯ ಅಗತ್ಯವಾಗಿದೆ. ಆದ್ದರಿಂದ, ಪ್ರಾಸಿಕ್ಯೂಷನ್‌ ವಾದ ಆಲಿಸುವುದಕ್ಕೂ ಮುನ್ನ ಸಾಕ್ಷ್ಯದ ದಾಖಲೀಕರಣ ಅಗತ್ಯ ಎಂದ ನ್ಯಾಯಾಲಯ.
Bengaluru City civil court and CBI
Bengaluru City civil court and CBI

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಅಮೆರಿಕದ ನಿವಾಸಿ, ದೇವಾಸ್‌ ಮಲ್ಟಿಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ರಾಮಚಂದ್ರನ್‌ ವಿಶ್ವನಾಥನ್‌ ಅವರ ವಿಚಾರದಲ್ಲಿ ದೇಶಭ್ರಷ್ಟ ಆರ್ಥಿಕ ಅಪರಾಧಗಳ ಕಾಯಿದೆ 2018ರ ಸೆಕ್ಷನ್‌ 11(3)(ಎ) ಅನುಸರಿಸಲಾಗಿದೆ ಎಂದು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯವು ಈಚೆಗೆ ಹೇಳಿದೆ.

ರಾಮಚಂದ್ರನ್‌ ವಿಶ್ವನಾಥನ್‌ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಗಳ ಕಾಯಿದೆ 2018ರ ಸೆಕ್ಷನ್‌ 4 ಜೊತೆಗೆ ಸೆಕ್ಷನ್‌ 10 ಮತ್ತು 12ರ ಅಡಿ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸುವಂತೆ ಕೋರಿ ಜಾರಿ ನಿರ್ದೇಶನಾಲಯವು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸಿಬಿಐ ನ್ಯಾಯಾಲಯದ ಪ್ರಧಾನ ವಿಶೇಷ ನ್ಯಾಯಾಧೀಶ ಕೆ ಎಲ್‌ ಅಶೋಕ್‌ ಅವರು ನಡೆಸಿದರು.

ದೇಶಭ್ರಷ್ಟ ಆರ್ಥಿಕ ಅಪರಾಧಗಳ ಕಾಯಿದೆ 2018ರ ಸೆಕ್ಷನ್‌ 10ರ ಅಡಿ ವಿಶ್ವನಾಥನ್‌ಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ವಿದೇಶದಲ್ಲಿ ನೆಲೆಸಿರುವುದರಿಂದ ವಿಶ್ವನಾಥನ್‌ಗೆ ಕ್ರಿಮಿನಲ್‌ ಪ್ರಕ್ರಿಯಾ ಸಂಹಿತೆ ಅಧ್ಯಾಯ 7ರ ಅಡಿ ನೋಟಿಸ್‌ ನೀಡಲಾಗಿರಲಿಲ್ಲ. ವಿದೇಶಾಂಗ ಸಚಿವಾಲಯದ ಮೂಲಕ ವಿಶ್ವನಾಥನ್‌ಗೆ ನೋಟಿಸ್‌ ಜಾರಿ ಮಾಡಲಾಗಿದೆ. ಆನಂತರ ಅವರು 2022ರ ಡಿಸೆಂಬರ್‌ 12ರಂದು ಅವರು ವಿಚಾರಣೆಗೆ ಗೈರಾಗಿದ್ದರು. ಇದರಿಂದಾಗಿ ಡಿಸೆಂಬರ್‌ 26ರಂದು ವಿಚಾರಣೆಗೆ ಹಾಜರಾಗಲು ಮತ್ತೊಂದು ಅವಕಾಶವನ್ನು ನ್ಯಾಯಾಲಯ ನೀಡಿತ್ತು. ಆದರೂ ವಿಶ್ವನಾಥನ್‌ ವಿಚಾರಣೆಗೆ ಹಾಜರಾಗಲಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

ವಿಶ್ವನಾಥನ್‌ ವೈಯಕ್ತಿಕ ಅಥವಾ ಅವರ ವಕೀಲರ ಮೂಲಕ ವಿಚಾರಣೆಗೆ ಹಾಜರಾಗಿದ್ದರೆ ನ್ಯಾಯಾಲಯವು ದೇಶಭ್ರಷ್ಟ ಆರ್ಥಿಕ ಅಪರಾಧಗಳ ಕಾಯಿದೆಗಳ ಸೆಕ್ಷನ್‌ 11(1) ಅಥವಾ 11(2)ರ ಅಡಿ ಮುಂದುವರಿಯಬೇಕಿತ್ತು. ವಿಶ್ವನಾಥನ್‌ ನ್ಯಾಯಾಲಯದ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ಕಾಯಿದೆಯ ಸೆಕ್ಷನ್‌ 11(3)ರ ಅಡಿ ಮುಂದುವರಿಯಬೇಕಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್‌ 12ರಂದು ನೀಡಿದ್ದ ನೋಟಿಸ್‌ ಸಾಕಾಗಿದೆ. ಆದ್ದರಿಂದ, ಕಾಯಿದೆಯ ಸೆಕ್ಷನ್‌ 11(3)(ಎ) ಅನುಸರಿಸಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಕಾಯಿದೆಯ ಸೆಕ್ಷನ್‌ 4ರ ಅನ್ವಯ ಜಾರಿ ನಿರ್ದೇಶನಾಲಯದ ನಿರ್ದೇಶಕರು ಅಥವಾ ಅವರು ನಿಯೋಜಿಸಿದವರು ಅರ್ಜಿ ಸಲ್ಲಿಸುವ ಮೂಲಕ ವ್ಯಕ್ತಿಯೊಬ್ಬ ಆರ್ಥಿಕ ಅಪರಾಧಿ ಎಂದು ಸಾಬೀತುಪಡಿಸುವ ಹೊಣೆಗಾರಿಕೆ ಇದೆ ಎಂದು ಸೆಕ್ಷನ್‌ 16 ಹೇಳುತ್ತದೆ. ಹಾಲಿ ನಿಯಮಾವಳಿಯು ಅಪರಾಧವನ್ನು ಸಾಬೀತುಪಡಿಸುವ ಹೊಣೆಗಾರಿಕೆ ಬಗ್ಗೆ ಮಾತನಾಡುವುದರಿಂದ ಅದನ್ನು ಸಾಬೀತುಪಡಿಸಲು ಸಾಕ್ಷ್ಯ ಅಗತ್ಯವಾಗಿದೆ. ಆದ್ದರಿಂದ, ಪ್ರಾಸಿಕ್ಯೂಷನ್‌ ವಾದ ಆಲಿಸುವುದಕ್ಕೂ ಮುನ್ನ ಪ್ರಕರಣದಲ್ಲಿ ವಾಸ್ತವಿಕ ವಿಚಾರ ಸಾಬೀತುಪಡಿಸಲು ಸಾಕ್ಷ್ಯದ ದಾಖಲೀಕರಣ ಅಗತ್ಯವಾಗಿದೆ. ಅಂತೆಯೇ, ಆರ್ಥಿಕ ಅಪರಾಧಗಳ ಕಾಯಿದೆ 2018ರ ಸೆಕ್ಷನ್‌ 4, ಜೊತೆಗೆ ಸೆಕ್ಷನ್‌ಗಳಾದ 10 ಮತ್ತು 12ರ ಅಡಿ ಸಾಕ್ಷಿ ದಾಖಲಿಸಿಕೊಳ್ಳಲು ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ವಿಶ್ವನಾಥನ್‌ ವಿರುದ್ಧದ ಆರೋಪವೇನು?: 2004ರಲ್ಲಿ ಬೆಂಗಳೂರಿನಲ್ಲಿ ಉಪಗ್ರಹ ಆಧಾರಿತ ಮಲ್ಟಿಮೀಡಿಯಾ ಸೇವೆಗಳನ್ನು ನೀಡುವ ಉದ್ದೇಶದಿಂದ ವಿಶ್ವನಾಥನ್‌ ಅವರು ದೇವಾಸ್‌ ಮಲ್ಟಿಮೀಡಿಯಾ ಪ್ರೈ. ಲಿ ಎಂಬ ಕಂಪೆನಿ ಆರಂಭಿಸಿದ್ದರು. ಒಂದು ವರ್ಷದ ಬಳಿಕ ದೇವಾಸ್‌ ಸಂಸ್ಥೆಯು ಆಂತರಿಕ್ಷ್‌ ಕಾರ್ಪೊರೇಶನ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಆಂತರಿಕ್ಷ್‌ ಎರಡು ಉಪಗ್ರಹಗಳನ್ನು ನಿರ್ಮಿಸಬೇಕಿತ್ತು. ದೇವಾಸ್‌ ಎಸ್-ಬ್ಯಾಂಡ್‌ ಟ್ರಾನ್ಸ್‌ಪಾಂಡರ್ಸ್ ಸಂಹವನ ಉಪಗ್ರಹದ ಮೂಲಕ ಭಾರತೀಯ ಮೊಬೈಲ್‌ ಬಳಕೆದಾರರಿಗೆ ಮಲ್ಟಿಮೀಡಿಯಾ ಸೇವೆ ನೀಡಬೇಕಿತ್ತು. ಇದಕ್ಕೆ ಹಲವು ಹೂಡಿಕೆದಾರರು ಬೆಂಬಲ ನೀಡಿದ್ದರು. ಆನಂತರ ಆಂತರಿಕ್ಷ್‌-ದೇವಾಸ್‌ ಒಡಂಬಡಿಕೆಯಲ್ಲಿ ಭ್ರಷ್ಟಾಚಾರ, ಅಕ್ರಮದ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಲಾಗಿತ್ತು.

ಆಂತರಿಕ್ಷ್‌ ಕಾರ್ಪೊರೇಶನ್‌ ಜೊತೆ ವಿಫಲವಾದ ಉಪಗ್ರಹ ಒಪ್ಪಂದ ಮಾಡಿಕೊಂಡಿದ್ದಕ್ಕೆ ಸಂಬಂಧಿಸಿದಂತೆ ವಿಶ್ವನಾಥನ್‌ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸುವಂತೆ ಜಾರಿ ನಿರ್ದೇಶನಾಲಯವು ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದೆ. ಇಸ್ರೊದ ಆರ್ಥಿಕ ವಿಭಾಗವಾದ ಆಂತರಿಕ್ಷ್‌ನಿಂದ ಅಕ್ರಮವಾಗಿ 578 ಕೋಟಿ ರೂಪಾಯಿಗಳನ್ನು ಖಾಸಗಿ ಮಲ್ಟಿಮೀಡಿಯಾ ಕಂಪೆನಿಯಾದ ದೇವಾಸ್‌ ಲಾಭ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು.

Related Stories

No stories found.
Kannada Bar & Bench
kannada.barandbench.com