ಧರ್ಮ ಪ್ರಚಾರದ ಹಕ್ಕು ಮತಾಂತರದ ಹಕ್ಕನ್ನು ಒಳಗೊಂಡಿಲ್ಲ: ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ಪ್ರತಿಪಾದನೆ

ಸಂವಿಧಾನದ 25 ನೇ ವಿಧಿಯಲ್ಲಿ ಬಳಸಲಾದ 'ಪ್ರಚಾರ' ಪದವು ಮತಾಂತರದ ಹಕ್ಕನ್ನು ತನ್ನ ವ್ಯಾಪ್ತಿಯಲ್ಲಿ ಒಳಗೊಂಡಿಲ್ಲ ಎಂದು ಸರ್ಕಾರ ಸಲ್ಲಿಸಿದ ಅಫಿಡವಿಟ್ ಹೇಳಿದೆ.
Religious Symbols
Religious Symbols
Published on

ಸಂವಿಧಾನದ ಅಡಿಯಲ್ಲಿ ಯಾವುದೇ ಧರ್ಮವನ್ನು ಆಚರಿಸುವ ಮತ್ತು ಪ್ರಚಾರ ಮಾಡುವ ಮೂಲಭೂತ ಹಕ್ಕು, ಜನರನ್ನು ಮತಾಂತರಿಸುವ  ಹಕ್ಕನ್ನು ಒಳಗೊಂಡಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಸಂವಿಧಾನದ 25 ನೇ ವಿಧಿಯಲ್ಲಿ ಬಳಸಲಾದ 'ಪ್ರಚಾರ' ಪದವು ಮತಾಂತರದ ಹಕ್ಕನ್ನು ತನ್ನ ವ್ಯಾಪ್ತಿಯಲ್ಲಿ ಒಳಗೊಂಡಿಲ್ಲ ಎಂದು ಕೇಂದ್ರ ಸರ್ಕಾರವು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಹೇಳಲಾಗಿದೆ.

"ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಇತರ ಜನರನ್ನು ನಿರ್ದಿಷ್ಟ ಧರ್ಮಕ್ಕೆ ಪರಿವರ್ತಿಸುವ ಮೂಲಭೂತ ಹಕ್ಕನ್ನು ಒಳಗೊಂಡಿಲ್ಲ ಎಂದು ಮಂಡಿಸಲಾಗಿದೆ. ಈ ಹಕ್ಕು ಖಂಡಿತವಾಗಿಯೂ ವ್ಯಕ್ತಿಯನ್ನು ವಂಚನೆ, ಪ್ರಚೋದನೆ, ಬಲಾತ್ಕಾರ, ಆಮಿಷ ಅಥವಾ ಇತರ ರೀತಿಯ ಮೂಲಕ ಮತಾಂತರಿಸುವ ಹಕ್ಕನ್ನು ಒಳಗೊಂಡಿಲ್ಲ” ಎಂದು ಅಫಿಡವಿಟ್‌ನಲ್ಲಿ ಹೇಳಿದೆ.

ಬಲವಂತದ ಧಾರ್ಮಿಕ ಮತಾಂತರ ನಿಯಂತ್ರಿಸಲು ಕಠಿಣ ಕ್ರಮ ಜಾರಿಗೊಳಿಸುವಂತೆ ಕೋರಿದ್ದ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಅವರ ಅರ್ಜಿಗೆ ಪ್ರತಿಕ್ರಿಯೆಯಾಗಿ ಅಫಿಡವಿಟ್ ಸಲ್ಲಿಸಲಾಗಿದೆ.

ಮೋಸದ ಮತ್ತು ವಂಚನೆಯ ಧಾರ್ಮಿಕ ಮತಾಂತರ ದೇಶಾದ್ಯಂತ ವ್ಯಾಪಕವಾಗಿದ್ದುಈ  ಬೆದರಿಕೆ ತಡೆಯಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.

ರೆವರೆಂಡ್ ಸ್ಟೇನಿಸ್ಲಾಸ್ ಪ್ರಕರಣದಲ್ಲಿನ ತೀರ್ಪಿನಲ್ಲಿ ಬಲವಂತದ ಮತಾಂತರ ನಾಗರಿಕರ ಆತ್ಮಸಾಕ್ಷಿಯ ಸ್ವಾತಂತ್ರ್ಯದ ಹಕ್ಕಿಗೆ ಧಕ್ಕೆ ತರುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ. ಈ ರೀತಿಯ ಮತಾಂತರಗಳು ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ಪರಿಗಣಿಸಲಾಗಿರುವುದರಿಂದ ಸರ್ಕಾರ ಅದನ್ನು ನಿಯಂತ್ರಿಸುವ ಹಕ್ಕು ಪಡೆದಿದೆ ಎಂಬುದಾಗಿ ಸರ್ಕಾರದ ಅಫಿಡವಿಟ್ ವಿವರಿಸಿದೆ.

ಬಲವಂತದ ಮತಾಂತರವು ಸಂಘಟಿತ, ಕಾನೂನುಬಾಹಿರ ಹಾಗೂ ದೊಡ್ಡ-ಪ್ರಮಾಣದ ಬೆದರಿಕೆಗೆ ಸಮನಾಗಿದ್ದು ಒಂಬತ್ತು ರಾಜ್ಯಗಳು ಅದನ್ನು ನಿಯಂತ್ರಿಸಲು ಈಗಾಗಲೇ ಕಾನೂನು  ಜಾರಿಗೊಳಿಸಿವೆ ಎಂದು ಅದು ಹೇಳಿದೆ. ಹೀಗಾಗಿ ಬೆದರಿಕೆಯ ಕಾರಣಕ್ಕೆ ಮನವಿಯಲ್ಲಿ ಕೋರಿರುವ ಪರಿಹಾರಗಳನ್ನು ಎಲ್ಲಾ ಗಂಭೀರತೆಯೊಂದಿಗೆ ಪರಿಗಣಿಸುವುದಾಗಿ ಅಫಿಡವಿಟ್‌ ವಿವರಿಸಿದೆ.

ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಮಾಡಿಕೊಳ್ಳುವಂತೆ ಕೇಳಿದ್ದ ಕಕ್ಷಿದಾರರೊಬ್ಬರ ಪರವಾಗಿ ಹಿರಿಯ ನ್ಯಾಯವಾದಿ ಸಂಜಯ್‌ ಹೆಗ್ಡೆ, ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದ ಮಂಡಿಸಿದರು.

Kannada Bar & Bench
kannada.barandbench.com