ರಿಲಯನ್ಸ್ ರಿಟೇಲ್ ಜೊತೆ ₹24,731 ಕೋಟಿ ವಿಲೀನ ಒಪ್ಪಂದಕ್ಕೆ ಮುಂದಾಗದಂತೆ ಫ್ಯೂಚರ್ ಗ್ರೂಪ್ ಅನ್ನು ನಿರ್ಬಂಧಿಸಿದ್ದ ಸಿಂಗಾಪುರ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ (ಎಸ್‌ಐಎಸಿ) ಹೊರಡಿಸಿದ್ದ ತುರ್ತು ಪರಿಹಾರ ಆದೇಶಕ್ಕೆ ತಡೆ ನೀಡಲು ನಿರಾಕರಿಸಿ ದೆಹಲಿ ಹೈಕೋರ್ಟ್ ಕಳೆದ ವರ್ಷದ ಅಕ್ಟೋಬರ್ 29ರಂದು ಹೊರಡಿಸಿದ್ದ ಆದೇಶವನ್ನು ಮಂಗಳವಾರ ಸುಪ್ರೀಂ ಕೋರ್ಟ್ ಬದಿಗೆ ಸರಿಸಿದೆ (ಫ್ಯೂಚರ್ ಕೂಪನ್ಸ್ ಪ್ರೈ. ಲಿ. ವರ್ಸಸ್ ಅಮೆಜಾನ್).
ದೆಹಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ಕಳೆದ ವರ್ಷದ ಫೆಬ್ರವರಿ 2ರಂದು ಹೊರಡಿಸಿದ್ದ ಆದೇಶವನ್ನು ಸಹ ಬದಿಗೆ ಸರಿಸಿರುವ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಹಿಮಾ ಕೊಹ್ಲಿ ನೇತೃತ್ವದ ತ್ರಿಸದಸ್ಯ ಪೀಠವು ಹೊಸದಾಗಿ ಪ್ರಕರಣ ಪರಿಗಣಿಸುವಂತೆ ದೆಹಲಿ ಹೈಕೋರ್ಟ್‌ಗೆ ಆದೇಶಿಸಿದೆ.
ರಿಲಯನ್ಸ್ ರೀಟೇಲ್ ಜೊತೆ ₹24,713 ಕೋಟಿ ವಿಲೀನ ಮಾಡಿಕೊಳ್ಳುವ ಫ್ಯೂಚರ್ ರಿಟೇಲ್ ಲಿಮಿಟೆಡ್ ಒಪ್ಪಂದವನ್ನು ನಿರ್ಬಂಧಿಸಿ, ಆಸ್ತಿ ವಶಕ್ಕೆ ಆದೇಶಿಸಿದ್ದ ತುರ್ತು ಮಧ್ಯಸ್ಥಿಕೆದಾರರ ಆದೇಶವನ್ನು ಫೆಬ್ರವರಿ 2ರ ಆದೇಶದಲ್ಲಿ ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿತ್ತು.
“2021ರ ಫೆಬ್ರವರಿ 2 ಮತ್ತು 2021ರ ಅಕ್ಟೋಬರ್ 29ರ ಆದೇಶವನ್ನು ಬದಿಗೆ ಸರಿಸಿದ್ದು, ಅರ್ಹತೆಯ ಆಧಾರದಲ್ಲಿ ಪ್ರಕರಣವನ್ನು ನಿರ್ಧರಿಸುವಂತೆ ನ್ಯಾಯಾಧೀಶರಿಗೆ ನಾವು ನಿರ್ದೇಶಿಸುತ್ತಿದ್ದೇವೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಎಸ್‌ಐಎಸಿ ಹೊರಡಿಸಿದ್ದ ತುರ್ತು ತೀರ್ಪಿಗೆ ಸಂಬಂಧಿಸಿದಂತೆ ತಡೆ ನೀಡಲು ನಿರಾಕರಿಸಿದ್ದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಫ್ಯೂಚರ್ ಗ್ರೂಪ್ ಸಂಸ್ಥೆಗಳು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. ತುರ್ತು ಮಧ್ಯಸ್ಥಿಕೆಯ ಮೂಲಕ ಎಸ್‌ಐಎಸಿ ನ್ಯಾಯಾಧಿಕರಣವು ರಿಲಯನ್ಸ್ ರಿಟೇಲ್ ಜೊತೆಗಿನ ₹24,731 ಕೋಟಿ ಮೊತ್ತದ ವಿಲೀನ ಒಪ್ಪಂದಕ್ಕೆ ನಿರ್ಬಂಧ ವಿಧಿಸುವ ಮೂಲಕ ಅಮೆಜಾನ್‌ಗೆ ಪರಿಹಾರ ಕಲ್ಪಿಸಿತ್ತು.