ಮುಜರಾಯಿ ಇಲಾಖೆ ವಶಕ್ಕೆ ಗಾಳಿ ಆಂಜನೇಯಸ್ವಾಮಿ ದೇವಾಲಯ: ಮಧ್ಯಂತರ ಕೋರಿಕೆ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಸರ್ಕಾರದ ಆದೇಶ ರದ್ದು ಕೋರಿ ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಆಡಳಿ ಮಂಡಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠವು ಮಧ್ಯಂತರ ಆದೇಶವನ್ನು ಕಾಯ್ದಿರಿಸಿದೆ.
ಮುಜರಾಯಿ ಇಲಾಖೆ ವಶಕ್ಕೆ ಗಾಳಿ ಆಂಜನೇಯಸ್ವಾಮಿ ದೇವಾಲಯ: ಮಧ್ಯಂತರ ಕೋರಿಕೆ ಆದೇಶ ಕಾಯ್ದಿರಿಸಿದ ಹೈಕೋರ್ಟ್‌
Published on

ಬೆಂಗಳೂರು ನಗರದ ಪ್ರಸಿದ್ಧ ಗಾಳಿ ಆಂಜನೇಯಸ್ವಾಮಿ ದೇವಾಲಯವನ್ನು ಸುಪರ್ದಿಗೆ ಪಡೆದು ರಾಜ್ಯ ಮುಜರಾಯಿ ಇಲಾಖೆ ಹೊರಡಿಸಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂಬ ದೇವಾಲಯದ ಆಡಳಿತ ಮಂಡಳಿಯ ಮಧ್ಯಂತರ ಮನವಿ ಕುರಿತ ಆದೇಶವನ್ನು ಹೈಕೋರ್ಟ್‌ ಬುಧವಾರಕ್ಕೆ ಕಾಯ್ದಿರಿಸಿದೆ.

ಸರ್ಕಾರದ ಆದೇಶ ರದ್ದು ಕೋರಿ ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಆಡಳಿ ಮಂಡಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್‌ ದತ್ತ ಯಾದವ್‌ ಅವರ ಪೀಠವು ಮಧ್ಯಂತರ ಆದೇಶವನ್ನು ಕಾಯ್ದಿರಿಸಿದೆ.

ಇದಕ್ಕೂ ಮುನ್ನ, ದೇವಾಲಯದ ಆಡಳಿತ ಮಂಡಳಿ ಪರ ವಕೀಲ ಪಿ ಪ್ರಸನ್ನಕುಮಾರ್‌ ಅವರು “ದೇವಾಲಯವನ್ನು ತನ್ನ ಸುಪರ್ದಿಗೆ ಪಡೆದು ಸರ್ಕಾರ ತರಾತುರಿಯಲ್ಲಿ ಆದೇಶಿಸಿದೆ. ಆ ಆದೇಶ ಹೊರಡಿಸುವ ಮುನ್ನ ಅರ್ಜಿದಾರರ ಅಹವಾಲು ಆಲಿಸಿಲ್ಲ. ಮೇಲಾಗಿ ರಜಾ ದಿನವಾದ ಎರಡನೇ ಶನಿವಾರದಂದು ಆದೇಶ ಹೊರಡಿಸಿದೆ. ದೇವಾಲಯದ ಬಗ್ಗೆ ಸರ್ಕಾರ ಮಾಡಿರುವ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾಗಿದೆ. ಆದ್ದರಿಂದ, ಈ ಅರ್ಜಿ ಇತ್ಯರ್ಥವಾಗುವರೆಗೆ ದೇವಾಲಯವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆದ ಆದೇಶಕ್ಕೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಮಾಡಬೇಕು” ಎಂದು ಕೋರಿದರು.

“ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎನ್‌ ದೇವದಾಸ್‌ ಅವರು “ದೇವಾಲಯದ ಟ್ರಸ್ಟ್ ನಲ್ಲಿ ಹಣದ ದುರುಪಯೋಗವಾಗಿರುವ ಬಗ್ಗೆ ದೂರುಗಳಿದ್ದವು. ದೇವಾಲಯದ ಸಿಬ್ಬಂದಿಯೇ ಹುಂಡಿ ಹಣ ಕಳ್ಳತನ ಮಾಡಿದ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ದೇವಾಲಯದ ಆಡಳಿತ ಮಂಡಳಿ ವಿರುದ್ಧ ಕೇಳಿಬಂದ ಆರೋಪಗಳ ಕುರಿತು ಉನ್ನತ ಮಟ್ಟದ ಅಧಿಕಾರಿಗಳಿಂದ ವಿಚಾರಣಾ ವರದಿ ಪಡೆಯಲಾಗಿತ್ತು. ಅದರಲ್ಲಿ ದೇವಾಲಯದಲ್ಲಿ ಹಣಕಾಸು ದುರುಪಯೋಗ ನಡೆದಿರುವುದು ತಿಳಿದು ಬಂದಿದೆ. ಇದರಿಂದ ದೇವಾಲಯವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆಯಲಾಗಿದ್ದು, ಆ ಆದೇಶಕ್ಕೆ ತಡೆಯಾಜ್ಞೆ ನೀಡಬಾರದು” ಎಂದು ಕೋರಿದರು.

ಪ್ರಕರಣದ ಹಿನ್ನೆಲೆ: ಗಾಳಿ ಆಂಜನೇಯಸ್ವಾಮಿ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳಲ್ಲಿ ಹೊಂದಾಣಿಕೆ ಇಲ್ಲ. ದೇವಾಲಯಕ್ಕೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದ್ದರೂ ಪ್ರತಿ ವರ್ಷ ಉಳಿತಾಯವಿಲ್ಲದೇ ವೆಚ್ಚ ಮಾಡಲಾಗುತ್ತಿದೆ. ದೇವಸ್ಥಾನದ ಹಣ ದುರುಪಯೋಗವಾಗುತ್ತಿದೆ. ಆದಾಯ ಹಾಗೂ ವೆಚ್ಚಕ್ಕೆ ಸಂಬಂಧಿಸಿದಂತೆ ಕಳೆದ 25 ವರ್ಷಗಳಿಂದ ಯಾವುದೇ ದಾಖಲೆ ಇಡದೆ, ಸಹಾಯಕ ಆಯುಕ್ತರು ಮತ್ತು ಮುಜರಾಯಿ ಇಲಾಖೆ ನೋಟಿಸ್ ನೀಡಿದ ಬಳಿಕ ದಾಖಲೆ ಸೃಷ್ಟಿಸಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದ ಮುಜರಾಯಿ ಇಲಾಖೆ, ದೇವಾಲಯವನ್ನು ತನ್ನ ಸುಪರ್ದಿಗೆ ಪಡೆದು ಇತ್ತೀಚೆಗೆ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ದೇವಾಲಯ ಆಡಳಿತ ಮಂಡಳಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

Kannada Bar & Bench
kannada.barandbench.com