ಗೇಮ್ಸ್‌ಕ್ರಾಫ್ಟ್‌ ಪ್ರಕರಣ: ಕಂದಾಯ ಇಲಾಖೆಯಿಂದ ನ್ಯಾಯಾಂಗ ಸಮಯ ವ್ಯರ್ಥ, ವಿನಾ ಕಾರಣ ದಾವೆ ಎಂದು ಅರ್ಜಿದಾರರ ವಾದ

“ಕೇಂದ್ರ ಕಾನೂನು ಇಲಾಖೆಯು ರಾಷ್ಟ್ರೀಯ ಮೊಕದ್ದಮೆ ನೀತಿಯನ್ನು ಜಾರಿಗೊಳಿಸಲು ಉದ್ದೇಶಿಸಿದ್ದು, ಕಂದಾಯ ಇಲಾಖೆಯ ನಿಲುವು ದಾವೆಗಳ ಸಂಖ್ಯೆ ಕಡಿತ ಮಾಡುವ ಉದ್ದೇಶಕ್ಕೆ ವಿರುದ್ಧವಾಗಿಲ್ಲವೇ?” ಎಂದು ಅರ್ಜಿದಾರರು ಪ್ರಶ್ನಿಸಿದ್ದಾರೆ.
Karnataka HC and online games
Karnataka HC and online games

ಆನ್‌ಲೈನ್‌ ಗೇಮಿಂಗ್‌ ಮಧ್ಯಸ್ಥ ವೇದಿಕೆಯಾದ ಗೇಮ್ಸ್‌ಕ್ರಾಫ್ಟ್‌ ಟೆಕ್ನಾಲಜೀಸ್‌ಗೆ ₹21,000 ಕೋಟಿ ತೆರಿಗೆ ನೋಟಿಸ್‌ ನೀಡಿರುವುದಕ್ಕೆ ಈ ಹಿಂದೆ ಕರ್ನಾಟಕ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದರೂ ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ದಳದ ಮಹಾನಿರ್ದೇಶಕರು (ಡಿಜಿಜಿಐ) ಷೋಕಾಸ್‌ ನೋಟಿಸ್‌ ಜಾರಿ ಮಾಡಿರುವುದನ್ನು ಪ್ರಶ್ನಿಸಿ ಕಂಪೆನಿಯು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿದೆ.

ಬೆಂಗಳೂರಿನ ಗೇಮ್ಸ್‌ಕ್ರಾಫ್ಟ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ನ ಹಣಕಾಸು ಅಧಿಕಾರಿ ರಮೇಶ್‌ ಪ್ರಭು ಅವರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಸುದೀರ್ಘವಾಗಿ ನಡೆಸಿ ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣಕುಮಾರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿದೆ. ಈ ನಡುವೆ ಅರ್ಜಿದಾರರು ಹೈಕೋರ್ಟ್‌ ಮುಂದೆ ಮಂಡಿಸಿರುವ ವಾದದ ಪ್ರಮುಖ ಅಂಶಗಳು ಇಂತಿವೆ.

“ನಿರ್ದಿಷ್ಟ ಸಚಿವಾಲಯಕ್ಕೆ ಆನ್‌ಲೈನ್‌ ಗೇಮಿಂಗ್‌ ನಿಯಂತ್ರಣ ವಿಚಾರ ವಹಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರಿ ಪ್ರಾಧಿಕಾರಗಳು ಹಾಗೂ ವಿವಿಧ ಸಚಿವಾಲಯಗಳ ಜೊತೆ ಸಮಾಲೋಚನೆ ನಡೆಸುವಂತೆ 2021ರ ಅಕ್ಟೋಬರ್-ಡಿಸೆಂಬರ್‌ ಅವಧಿಯಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ (ಎಂಇಐಟಿವೈ) ಸಚಿವ ಸಂಪುಟ ಸಚಿವಾಲಯವು ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಗೃಹ, ಕಂದಾಯ, ಕ್ರೀಡೆ, ಕೈಗಾರಿಕೆ ಮತ್ತು ಆತಂತರಿಕ ವ್ಯವಹಾರ, ಕಾನೂನು, ಗ್ರಾಹಕರ ವ್ಯವಹಾರಗಳ ಕಾರ್ಯದರ್ಶಿಗಳು ಸೇರಿದಂತೆ ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳನ್ನು ಒಳಗೊಂಡ ಅಂತರ ಸಚಿವಾಲಯ ಟಾಸ್ಕ್‌ ಫೋರ್ಸ್‌ (ಐಎಂಟಿಎಫ್‌) ಅನ್ನು 2022ರ ಮೇನಲ್ಲಿ ಎಂಇಐಟಿವೈ ರಚಿಸಿತ್ತು. ಈ ಮೂಲಕ ಆನ್‌ಲೈನ್‌ ಗೇಮ್‌ ಕ್ಷೇತ್ರವನ್ನು ನಿಯಂತ್ರಿಸಲು ಭಾರತ ಸರ್ಕಾರವು ಸಕ್ರಿಯವಾಗಿ ಕೆಲಸ ಮಾಡುತ್ತಿದೆ” ಎಂದು ಹೇಳಲಾಗಿದೆ.

“ಆನ್‌ಲೈನ್‌ ಗೇಮ್‌ ವಿಚಾರಗಳು ಸೇರಿದಂತೆ ಭಾರತದಲ್ಲಿ ಆನ್‌ಲೈನ್‌ ಗೇಮಿಂಗ್‌ ಕ್ಷೇತ್ರದ ನಿಯಂತ್ರಣ ಹಾಗೂ ಸೂಕ್ತ ನೋಡಲ್‌ ಸಚಿವಾಲಯದ ನೇಮಕಕ್ಕೆ ಸಂಬಂಧಿಸಿದಂತೆ ತನ್ನ ಅಭಿಪ್ರಾಯ ನೀಡುವುದು ಐಎಂಟಿಎಫ್‌ ಪ್ರಾಥಮಿಕ ಉದ್ದೇಶವಾಗಿದೆ” ಎಂದು ಟಾಸ್ಕ್‌ ಫೋರ್ಸ್‌ ತನ್ನ ವರದಿಯಲ್ಲಿ ಉಲ್ಲೇಖಿಸಿರುವುದನ್ನು ಅರ್ಜಿದಾರರು ವಿವರಿಸಿದ್ದಾರೆ.

“ಸದಸ್ಯ ಸಚಿವಾಲಯಗಳು ಮತ್ತು ಇಲಾಖೆಗಳು, ರಾಜ್ಯ ಸರ್ಕಾರಗಳು ಮತ್ತು ಕೈಗಾರಿಕೆಗಳ ಲಿಖಿತವಾದವನ್ನು ಪರಿಗಣಿಸಿ ತನ್ನ ವರದಿಯನ್ನು ರೂಪಿಸಿದ್ದ ಐಎಂಟಿಎಫ್‌, ಆನ್‌ಲೈನ್‌ ಗೇಮಿಂಗ್‌ ಅಂದರೆ ಕೌಶಲದ ಆಟಗಳಿಗೆ (ನೈಜ ಹಣಗಳಿಕೆ ಕೌಶಲದ ಆಟಗಳು) ಅದನ್ನು ಮಿತಿಗೊಳಿಸಿಕೊಂಡಿತ್ತು. ಈ ಪ್ರಕ್ರಿಯೆಯಲ್ಲಿ ಅದು ನೈಜ ಹಣಗಳಿಕೆ ಕೌಶಲದ ಆಟಗಳನ್ನು ಅದೃಷ್ಟದ ಆಟಗಳು ಎಂದಿದ್ದ ಕಂದಾಯ ಇಲಾಖೆಯ ವಾದವನ್ನು ತಿರಸ್ಕರಿಸಿತ್ತು. ಇದು ಈಗಾಗಲೇ ಇರುವ ಕಾನೂನಿಗೆ ವಿರುದ್ಧವಾಗಿದೆ” ಎಂದು ಹೇಳಿತ್ತು ಎಂಬುದನ್ನು ಅರ್ಜಿದಾರರು ಪೀಠದ ಮುಂದೆ ವಿವರಿಸಿದ್ದಾರೆ.

“ಆನ್‌ಲೈನ್‌ ಗೇಮಿಂಗ್‌ ಅನ್ನು ಕೌಶಲದ ಆಟಗಳಿಗೆ ಸಮನಾಗಿಸಬಾರದು. ನೈಜ ಹಣಗಳಿಕೆಯ ಬಾಜಿ ಇರುವ ಕೌಶಲದ ಆಟಗಳನ್ನು ಅದೃಷ್ಟದ ಆಟ ಎಂದು ಪರಿಗಣಿಸಬೇಕು ಎಂದು 2022ರ ಸೆಪ್ಟೆಂಬರ್‌ 9ರಂದು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಅವರು ಐಎಂಟಿಎಫ್‌ಗೆ ಸಲ್ಲಿಸಿರುವ ಲಿಖಿತ ವಾದದಲ್ಲಿ ಉಲ್ಲೇಖಿಸಿದ್ದಾರೆ. ಕಂದಾಯ ಇಲಾಖೆಯು ತನ್ನ ವಾದಕ್ಕೆ ಪೂರಕವಾಗಿ ಆಂಧ್ರ ಪ್ರದೇಶ ರಾಜ್ಯ ವರ್ಸಸ್‌ ಕೆ ಸತ್ಯನಾರಾಯಣ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅಭಿಪ್ರಾಯ, ಆನ್‌ಲೈನ್‌ ಫ್ಯಾಂಟಸಿ ಗೇಮ್‌ಗಳನ್ನು ನಿಷೇಧಿಸಿದ್ದ ಬಾಂಬೆ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಮಹಾರಾಷ್ಟ್ರ ರಾಜ್ಯ ವರ್ಸಸ್‌ ಗುರ್ದೀಪ್‌ ಸಿಂಗ್‌ ಸಾಚಾರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಮಾರ್ಚ್‌ 6ರಂದು ಮಾಡಿರುವ ಮಧ್ಯಂತರ ಆದೇಶವನ್ನು ಆಧರಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಈ ವಾದವನ್ನು ತಿರಸ್ಕರಿಸಲಾಗಿದೆ ಎಂದು ಸಂಪುಟ ಸಚಿವಾಲಯಕ್ಕೆ 2022ರ ಸೆಪ್ಟೆಂಬರ್‌ 20ರಂದು ಸಲ್ಲಿಸಿರುವ ವರದಿಯಲ್ಲಿ ಐಎಂಟಿಎಫ್‌ ತಿಳಿಸಿದೆ” ಎಂದು ಅರ್ಜಿದಾರರು ಪೀಠದ ಗಮನಸೆಳೆದಿದ್ದಾರೆ.

“ಕೌಶಲದ ಆಟಗಳು ಮತ್ತು ಅದೃಷ್ಟದ ಆಟಗಳ ಕಾನೂನುಬದ್ಧತೆಗೆ ಸಂಬಂಧಿಸಿದಂತೆ ಬಾಂಬೆ ರಾಜ್ಯ ವರ್ಸಸ್‌ ಆರ್‌ಎಂಡಿ ಚಮರ್‌ಬಾಗ್ವಾಲಾ ಪ್ರಕರಣವನ್ನು ಆಧರಿಸಿ ಕಂದಾಯ ಇಲಾಖೆಯ ವಾದವು ಈಗಾಗಲೇ ನಿರೂಪಿತವಾಗಿರುವ ಕಾನೂನಿಗೆ ವಿರುದ್ಧವಾಗಿದೆ ಎಂದು ಐಎಂಟಿಎಫ್‌ ತನ್ನ ವರದಿಯಲ್ಲಿ ಸಾರಸಗಟಾಗಿ ತಿರಸ್ಕರಿಸಿದೆ. “ಸಂವಿಧಾನದ 19(1)(ಜಿ) ಅಡಿ ಮೂಲಭೂತ ವ್ಯವಹಾರ ಹಕ್ಕಿನ ಅಡಿ  ನೈಜ ಹಣಗಳಿಕೆ ಕೌಶಲದ ಆಟಗಳು ಸಂರಕ್ಷಿತ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಯಾಗಿವೆ” ಎಂದಿದ್ದ ಸುಪ್ರೀಂ ಕೋರ್ಟ್‌ ತೀರ್ಪನ್ನು ಮರು ಉಲ್ಲೇಖಿಸಿದೆ. ರಮ್ಮಿ ಮತ್ತು ಕುದುರೆ ರೇಸ್‌ನಂತ ಕೆಲವು ಗೇಮಿಂಗ್‌ ಚಟುವಟಿಕೆಗಳು ಕೌಶಲದ ಆಟಗಳಾಗಿವೆ ಎಂದು ಆಂಧ್ರಪ್ರದೇಶ ರಾಜ್ಯ ವರ್ಸಸ್‌ ಕೆ ಸತ್ಯನಾರಾಯಣ ವರ್ಸಸ್‌ ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅಭಿಪ್ರಾಯವನ್ನು ಐಎಂಟಿಎಫ್‌ ವರದಿಯಲ್ಲಿ ಆಧರಿಸಲಾಗಿದೆ” ಎಂದು ಅರ್ಜಿದಾರರು ಪೀಠದ ಗಮನಕ್ಕೆ ತಂದಿದ್ದಾರೆ.

ನೈಜ ಹಣಗಳಿಕೆ ಕೌಶಲದ ಆಟಗಳು ಆನ್‌ಲೈನ್‌ ಗೇಮಿಂಗ್‌ ವ್ಯಾಪ್ತಿಯೊಳಗಿವೆ ಎನ್ನುವ ಐಎಂಟಿಎಫ್‌ ಶೋಧನೆಯ ಹೊರತಾಗಿಯೂ ಅದನ್ನು ಅದೃಷ್ಟದ ಆಟಗಳು ಎಂದು ಪರಿಗಣಿಸಿರುವ ಕಂದಾಯ ಇಲಾಖೆಯ ನಿಲುವನ್ನು ಐಎಂಟಿಎಫ್‌ ವಜಾ ಮಾಡಿದ ನಂತರವೂ ಕಂದಾಯ ಇಲಾಖೆಯು ಮತ್ತೆ ಮತ್ತೆ ಇದೇ ವಿಷಯವನ್ನು ಪ್ರಸ್ತಾಪಿಸುತ್ತಿದೆ. ಕಾನೂನಿನ ಅಡಿ ಈಗಾಗಲೇ ಈ ವಿಷಯ ತೀರ್ಮಾನವಾಗಿದ್ದರೂ ಕಂದಾಯ ಇಲಾಖೆಯು ಮತ್ತೆ ಅದನ್ನು ಕರ್ನಾಟಕ ಹೈಕೋರ್ಟ್‌ ಮುಂದೆ ಪ್ರತಿಪಾದಿಸುತ್ತಿದೆ. ಇದು ನ್ಯಾಯಾಂಗದ ಸಮಯ ವ್ಯರ್ಥ ಮಾಡಿದಂತಲ್ಲವೇ?” ಎಂದು ಅರ್ಜಿದಾರರು ಪ್ರಶ್ನಿಸಿದ್ದಾರೆ.

ಮುಂದುವರಿದು, “ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಸೇರಿದಂತೆ ನ್ಯಾಯ ನಿರ್ಣಯ ಮಾಡುವ ಪ್ರಾಧಿಕಾರಗಳ ಮುಂದೆ ಪ್ರಕರಣಗಳ ಸಂಖ್ಯೆಯನ್ನು ಕಡಿತಗೊಳಿಸಲು ಕೇಂದ್ರ ಕಾನೂನು ಇಲಾಖೆಯು ರಾಷ್ಟ್ರೀಯ ಮೊಕದ್ದಮೆ ನೀತಿಯನ್ನು ಜಾರಿಗೊಳಿಸಲು ಉದ್ದೇಶಿಸಿದೆ. ಆದರೆ, ಕಂದಾಯ ಇಲಾಖೆಯ ನಿಲುವು ದಾವೆಗಳ ಸಂಖ್ಯೆ ಕಡಿತ ಮಾಡುವ ಈ ಉದ್ದೇಶಕ್ಕೆ ವ್ಯತಿರಿಕ್ತವಾಗಿದೆ” ಎಂದು ಅರ್ಜಿದಾರರು ವಾದಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com