ಗೇಮ್ಸ್‌ಕ್ರಾಫ್ಟ್‌ ಟೆಕ್ನಾಲಜೀಸ್‌ ವಿರುದ್ಧದ ₹21,000 ಕೋಟಿ ತೆರಿಗೆ: ಕರ್ನಾಟಕ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

ಈ ಸಂಬಂಧ ಗೇಮ್ಸ್‌ಕ್ರಾಫ್ಟ್‌ ಟೆಕ್ನಾಲಜೀಸ್ ಪ್ರತಿಕ್ರಿಯೆ ನೀಡಬೇಕೆಂದು ಸೂಚಿಸಿದ ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಮೂರು ವಾರಗಳ ಬಳಿಕ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿತು.
GST, Supreme Court
GST, Supreme Court
Published on

ಆನ್‌ಲೈನ್‌ ಗೇಮಿಂಗ್‌ ಕಂಪೆನಿ ಗೇಮ್ಸ್‌ಕ್ರಾಫ್ಟ್‌ ₹21,000 ಕೋಟಿ ಬಾಕಿ ಪಾವತಿಸುವಂತೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಲಾಖೆ ಹೊರಡಿಸಿದ್ದ ನೋಟಿಸ್‌ ರದ್ದುಗೊಳಿಸಿ ಈ ವರ್ಷದ ಮೇನಲ್ಲಿ ಕರ್ನಾಟಕ ಹೈಕೋರ್ಟ್‌ ಪ್ರಕಟಿಸಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್‌ ಬುಧವಾರ ತಡೆ ನೀಡಿದೆ [ಡೈರೆಕ್ಟರೇಟ್ ಜನರಲ್ ಆಫ್ ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್ ಇಂಟೆಲಿಜೆನ್ಸ್ ಮತ್ತಿತರರು ಹಾಗೂ ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].

ಈ ಸಂಬಂಧ ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜೀಸ್‌ ಪ್ರತಿಕ್ರಿಯೆ ನೀಡಬೇಕೆಂದು ಸೂಚಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಮೂರು ವಾರಗಳ ಬಳಿಕ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿತು. "ಚಿಂತೆ ಮಾಡುವುದು ಬೇಡ... ಮೂರು ವಾರಗಳಲ್ಲಿ ಏನೂ ಘಟಿಸುವುದಿಲ್ಲ" ಎಂದು ಸಿಜೆಐ ತಿಳಿಸಿದರು.

ರಮ್ಮಿ ಆಟದಲ್ಲಿ ಪಣ ಕಟ್ಟಿ ಆಡಿದರೂ ಅಥವಾ ಪಣವಿಲ್ಲದೇ ಆಡಿದರೂ ಅದು ಜೂಜಾಟವಲ್ಲ ಎಂದು ಕೂಡ ಹೈಕೋರ್ಟ್‌ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಪೀಠದಲ್ಲಿ ನಡೆಯಿತು.

ರಮ್ಮಿಯನ್ನು ಆನ್‌ಲೈನ್‌ ಮೂಲಕ ಇಲ್ಲವೇ ಭೌತಿಕವಾಗಿಯೇ ಆಡಿದರೂ ಕೂಡ ಅದು ಕೌಶಲ್ಯದ ಆಟವಾಗುತ್ತದೆಯೇ ವಿನಾ ಅವಕಾಶದ ಆಟವಾಗುವುದಿಲ್ಲ ಎಂದು ನ್ಯಾ. ಎಸ್‌ ಆರ್‌ ಕೃಷ್ಣಕುಮಾರ್‌ ಅವರಿದ್ದ ಹೈಕೋರ್ಟ್‌ ಪೀಠ ತಿಳಿಸಿತ್ತು.

ಗೇಮ್‌ಸ್‌ಕ್ರಾಫ್ಟ್‌ನ ಪ್ಲಾಟ್‌ಫಾರ್ಮ್‌ಗಳಲ್ಲಿ ಆಡುವ ಆನ್‌ಲೈನ್ ರಮ್ಮಿ ಗೇಮ್ ಮತ್ತಿತರ ಡಿಜಿಟಲ್ ಗೇಮ್‌ಗಳನ್ನು 'ಬೆಟ್ಟಿಂಗ್' ಮತ್ತು 'ಜೂಜಾಟ' ಹೆಸರಿನಲ್ಲಿ ತೆರಿಗೆ ವಿಧಿಸುವಂತಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ಈ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿಯೂ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.

ಬೆಂಗಳೂರಿನ ಗೇಮ್ಸ್‌ಕ್ರಾಫ್ಟ್‌ ಟೆಕ್ನಾಲಜೀಸ್‌ ಕಂಪೆನಿ ₹21,000 ಕೋಟಿ ಜಿಎಸ್‌ಟಿ ಪಾವತಿಸುವಂತೆ ಕಳೆದ ವರ್ಷ ಸೆಪ್ಟೆಂಬರ್ 8 ರಂದು ಜಿಎಸ್‌ಟಿ ಅಧಿಕಾರಿಗಳು ಸೂಚಿಸಿದ್ದರು. ಈ ನೋಟಿಸನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಪ್ರಕರಣದಲ್ಲಿ ಹಲವಾರು ವಿವಾದಾತ್ಮಕ ವಿಷಯಗಳಿವೆ ಎಂದು ಗಮನಿಸಿದ ಹೈಕೋರ್ಟ್‌ ಏಕ ಸದಸ್ಯ ಪೀಠ ಸೆಪ್ಟೆಂಬರ್ 23, 2022ರಂದು ಈ ನೋಟಿಸ್‌ಗೆ ತಡೆ ನೀಡಿತ್ತು.

ಮತ್ತೆ ಹೈಕೋರ್ಟ್‌ ಮೊರೆ ಹೋದ ಗೇಮ್ಸ್‌ಕ್ರಾಫ್ಟ್‌, ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದರೂ ಅಧಿಕಾರಿಗಳು ಕಾನೂನುಬಾಹಿರವಾಗಿ, ನ್ಯಾಯಾಂಗ ನಿಂದನೆ ಉಂಟುಮಾಡುವ ರೀತಿಯಲ್ಲಿ ಹಾಗೂ ದುರುದ್ದೇಶಪೂರ್ವಕವಾಗಿ ಹೈಕೋರ್ಟ್‌ ಆದೇಶದ ದಿನವೇ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದಾರೆ ಎಂದು ಆರೋಪಿಸಿತು. ಜೊತೆಗೆ ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿ ರಮೇಶ್‌ ಪ್ರಭು ಅವರಿಗೆ ವೈಯಕ್ತಿಕವಾಗಿ ದಂಡ ವಿಧಿಸಲಾಗಿದೆ ಎಂದು ದೂರಲಾಗಿತ್ತು.

ಜಿಎಸ್‌ಟಿ ಅಧಿಕಾರಿಗಳ ಶೋಕಾಸ್ ನೋಟಿಸ್‌ನಲ್ಲಿರುವ ಆರೋಪಗಳು ಈಗಾಗಲೇ ಹೈಕೋರ್ಟ್‌ ತಡೆ ನೀಡಿದ್ದ ನೋಟಿಸ್‌ನ ಸೂಚನೆಯಂತೆಯೇ ಇವೆ. ಅರ್ಜಿದಾರರು ಕಲ್ಪಿಸಿರುವ ಆಟಕ್ಕೆ ಶೇ.28ರಷ್ಟು ತೆರಿಗೆ ವಿಧಿಸುವಲ್ಲಿ ಜಿಎಸ್‌ಟಿ ಅಧಿಕಾರಿಗಳ ಎಡವಿದ್ದಾರೆ. ನವೆಂಬರ್ 2021ರಲ್ಲಿ ಗೇಮ್ಸ್‌ಕ್ರಾಫ್ಟ್‌ನ ಕಚೇರಿ ಮೇಲೆ ಜಿಎಸ್‌ಟಿ ಅಧಿಕಾರಿಗಳು ದಾಳಿ ನಡೆಸಿ ಕಂಪೆನಿಯ ಎಲ್ಲಾ ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡರು ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಗೇಮ್ಸ್‌ಕ್ರಾಫ್ಟ್‌ ವಂಚಿಸಿದೆ ಎನ್ನಲಾದ ತೆರಿಗೆ ಮೊತ್ತ ಮೊದಲಿಗೆ ₹419 ಕೋಟಿ ಎಂದು ಗುರುತಿಸಲಾಗಿತ್ತು. ಆದರೆ, ನಂತರ ₹ 5,000 ಕೋಟಿ ಎಂದು ಆರೋಪಿಸಿ ಅಂತಿಮವಾಗಿ ಜುಲೈ 2022ರ ನಂತರ ₹ 21,000 ಕೋಟಿಗೆ ಏರಿಕೆ ಮಾಡಿ ಅಧಿಕಾರಿಗಳು ತಮ್ಮ ಹೇಳಿಕೆಯನ್ನು ಬದಲಿಸಿದರು. ಜೊತೆಗೆ ಗೇಮ್ಸ್‌ಕ್ರಾಫ್ಟ್‌ ಬೆಟ್ಟಿಂಗ್‌ನಲ್ಲಿ ತೊಡಗಿರಬಹುದು ಎಂದು ಆರೋಪ ಮಾಡಲಾರಂಭಿಸಿದರು ಎಂದು ದೂರಿನಲ್ಲಿ ವಿವರಿಸಲಾಗಿತ್ತು.

Kannada Bar & Bench
kannada.barandbench.com