ಈದ್ಗಾ ಗಣೇಶೋತ್ಸವ: ಇತರೆ ಹಬ್ಬಗಳ ಆಚರಿಸಿದರೆ ಅಂಜುಮನ್‌ ಹಕ್ಕಿಗೆ ಹಾನಿಯಾಗಲಿದೆಯೇ ಎಂಬ ಪ್ರಶ್ನೆ ಹೈಕೋರ್ಟ್‌ ಮುಂದೆ

ಕಾಯಿದೆ ಸೆಕ್ಷನ್‌ 176ರ ಅಡಿ ಪಾಲಿಕೆಯ ಆಸ್ತಿಯನ್ನು ಧಾರ್ಮಿಕ ಕಾರ್ಯಕ್ರಮಕ್ಕೆ ನೀಡಲು ಪಾಲಿಕೆಗೆ ಯಾವುದೇ ಹಕ್ಕು, ಅಧಿಕಾರ ಇಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ. ಇದನ್ನು ನಿರ್ಧರಿಸಬೇಕಿದೆ ಎಂದಿರುವ ಪೀಠ.
Karnataka HC (Dharwad Bench) & Justice Sachin Shankar Magadum
Karnataka HC (Dharwad Bench) & Justice Sachin Shankar Magadum
Published on

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ (ಎಚ್‌ಡಿಎಂಸಿ) ನಿರ್ಣಯಕ್ಕೆ ಮಧ್ಯಂತರ ತಡೆ ನೀಡಲು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಶುಕ್ರವಾರ ಸ್ಪಷ್ಟವಾಗಿ ನಿರಾಕರಿಸಿದೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ನಾಲ್ಕು ಸಂಸ್ಥೆಗಳಿಗೆ ಮೂರು ದಿನಗಳ ಕಾಲ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಹಬ್ಬ ಆಚರಣೆಗೆ ಎಚ್‌ಡಿಎಂಸಿ ಅನುಮತಿಸಿರುವುದನ್ನು ಪ್ರಶ್ನಿಸಿ ಅಂಜುಮನ್‌ ಇ-ಇಸ್ಲಾಂ ಸಂಸ್ಥೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

“ಎಚ್‌ಡಿಎಂಸಿ ಹೊರಡಿಸಿರುವ ಆಕ್ಷೇಪಾರ್ಹವಾದ ನಿರ್ಣಯದಿಂದ ಈದ್ಗಾ ಮೈದಾನದ ಮೇಲಿನ ಅರ್ಜಿದಾರರ ಹಕ್ಕು ಮೊಟಕಾಗುವುದೇ ಎಂಬುದನ್ನು ನ್ಯಾಯಾಲಯ ನಿರ್ಧರಿಸಬೇಕಿದೆ. ಬಲವಾದ ಕಾರಣಗಳು ಇವೆ ಎಂಬುದನ್ನು ಅರ್ಜಿದಾರರು ತೋರಿಸಿದರೆ ಸಾಂವಿಧಾನಿಕ ನ್ಯಾಯಾಲಯಗಳು ದಾವೆದಾರರ ಪರವಾಗಿ ಮಧ್ಯಂತರ ಆದೇಶ ಮಾಡುತ್ತವೆ. ಮೇಲ್ನೋಟಕ್ಕೆ ಸೂಕ್ತ ಎನಿಸುವ ದಾಖಲೆಗಳನ್ನು ನ್ಯಾಯಾಲಯದ ಮುಂದಿಟ್ಟು ಪ್ರಕರಣ ಸಮರ್ಥಿಸಿದರೆ ಹಾಗೂ ಮಧ್ಯಂತರ ಆದೇಶ ಮಾಡದಿದ್ದರೆ ಅರ್ಜಿಯು ಮಹತ್ವ ಕಳೆದುಕೊಳ್ಳಲಿದೆ ಎಂದು ಸಾಬೀತುಪಡಿಸಿದರೆ ಮಧ್ಯಂತರ ಆದೇಶ ನೀಡಲಾಗುತ್ತದೆ, " ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಮುಂದುವರೆದು, "ಅರ್ಜಿದಾರರು ಪರವಾನಗಿದಾರರಾಗಿ ಪ್ರಾರ್ಥನೆ ಸಲ್ಲಿಸಲು ಹಕ್ಕು ಹೊಂದಿರುವಾಗ ಇತರರು ಸಂಬಂಧಿತ ಸ್ಥಳದಲ್ಲಿ ತಮ್ಮ ಹಬ್ಬಗಳನ್ನು ಆಚರಿಸಲು ಹಕ್ಕು ಕೋರುವ ಅಧಿಕಾರವನ್ನು ಹೊಂದಿದ್ದಾರೆಯೇ ಎಂಬುದನ್ನು ಈ ನ್ಯಾಯಾಲಯ ಪರಿಗಣಿಸಬೇಕಿದೆ. ಅದಾಗ್ಯೂ, ಇತರೆ ಹಬ್ಬಗಳನ್ನು ಆಕ್ಷೇಪಾರ್ಹವಾದ ಸ್ಥಳದಲ್ಲಿ ಆಚರಿಸಲು ಅನುಮತಿಸಿದರೆ ಅರ್ಜಿದಾರರ ಹಕ್ಕಿಗೆ ನೇರವಾಗಿ ಹಾನಿಯಾಗುತ್ತದೆಯೇ ಎಂಬುದನ್ನು ತೀರ್ಮಾನಿಸಬೇಕಿದೆ. ಆದ್ದರಿಂದ, ಈ ಹಂತದಲ್ಲಿ ಯಾವುದೇ ಮಧ್ಯಂತರ ಆದೇಶ ಮಾಡಲಾಗದು. ಪಕ್ಷಕಾರರು ಆಕ್ಷೇಪಣೆ ಸಲ್ಲಿಸಬೇಕಿದ್ದು, ಇಡೀ ವಿವಾದವನ್ನು ಅರ್ಹತೆಯ ಆಧಾರದಲ್ಲಿ ನಿರ್ಧರಿಸಬೇಕಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

“ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಷನ್‌ ಕಾಯಿದೆಯ ಸೆಕ್ಷನ್‌ 176ರ ಅಡಿ ಪಾಲಿಕೆಯ ಆಸ್ತಿಯನ್ನು ಧಾರ್ಮಿಕ ಕಾರ್ಯಕ್ರಮಕ್ಕೆ ನೀಡಲು ಪಾಲಿಕೆಗೆ ಯಾವುದೇ ಹಕ್ಕು, ಅಧಿಕಾರ ಇಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದು, ಇದನ್ನು ನ್ಯಾಯಾಲಯ ನಿರ್ಧರಿಸಬೇಕಿದೆ. ಆರು ವಾರಗಳಲ್ಲಿ ಪಕ್ಷಕಾರರು ಆಕ್ಷೇಪಣೆ ಸಲ್ಲಿಸಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ಅರ್ಜಿದಾರರ ಪರವಾಗಿ ವಕಾಲತ್ತು ಹಾಕಿರುವ ವಕೀಲ ಸಾದಿಕ್‌ ಎನ್‌ ಗೂಡ್ವಾಲಾ ಪರವಾಗಿ ವಾದಿಸಿದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “ಸಿವಿಲ್‌ ದಾವೆಯಲ್ಲಿ ಸುಪ್ರೀಂ ಕೋರ್ಟ್‌ ಅರ್ಜಿದಾರರ ಹಕ್ಕನ್ನು ಎತ್ತಿ ಹಿಡಿದಿದೆ. ಸ್ವೇಚ್ಛೆಯ ನಿರ್ಣಯದ ಮೂಲಕ ಎಚ್‌ಡಿಎಂಸಿಯು ಅರ್ಜಿದಾರರ ಹಕ್ಕನ್ನು ಮೊಟಕುಗೊಳಿಸಲಾಗದು. ಈ ನೆಲೆಯಲ್ಲಿ ಎಚ್‌ಡಿಎಂಸಿ ಆಕ್ಷೇಪಾರ್ಹವಾದ ನಿರ್ಣಯಕ್ಕೆ ತಡೆ ನೀಡಲು ಇದು ಸೂಕ್ತ ಪ್ರಕರಣವಾಗಿದೆ. ಈದ್ಗಾ ಮೈದಾನವನ್ನು ಅಪಾರ ಪ್ರಮಾಣದಲ್ಲಿ ಸಾರ್ವಜನಿಕರು ಉಚಿತವಾಗಿ ಬಳಕೆ ಮಾಡಲು ಅನುವು ಮಾಡಿಕೊಟ್ಟಿರುವುದು ಆಕ್ಷೇಪಾರ್ಹ. ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ, ತಾತ್ಕಾಲಿಕವಾಗಿಯಾದರೂ ಸಾರ್ವಜನಿಕ ಆಸ್ತಿಯನ್ನು ಉಚಿತವಾಗಿ ನೀಡಲಾಗದು” ಎಂದು ವಾದಿಸಿದರು.

“ಯಾರ ಅಡ್ಡಿಯೂ ಇಲ್ಲದೇ ಈದ್ಗಾ ಮೈದಾನ ಬಳಕೆ ಮಾಡಲು ಅರ್ಜಿದಾರರಿಗೆ ಪರವಾನಗಿ ನೀಡಲಾಗಿದೆ ಮತ್ತು ಪಾಲಿಕೆಯು ಆಕ್ಷೇಪಾರ್ಹ ಆದೇಶ ಮಾಡುವ ಮೂಲಕ ಸ್ವಾಭಾವಿಕ ನ್ಯಾಯ ನಿಯಮ ಉಲ್ಲಂಘಿಸಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿಸುವುದಕ್ಕೂ ಮುನ್ನ ಪಾಲಿಕೆಯು ಕನಿಷ್ಠ ಪಕ್ಷ ಅರ್ಜಿದಾರರ ಗಮನಕ್ಕೆ ವಿಚಾರ ತರಬೇಕಿತ್ತು” ಎಂದು ವಾದಿಸಿದರು.

Also Read
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅಸ್ತು; ಮುಸ್ಲಿಮ್‌ ಪಕ್ಷಕಾರರ ಕೋರಿಕೆ ತಿರಸ್ಕರಿಸಿದ ಹೈಕೋರ್ಟ್‌

ಎಚ್‌ಡಿಎಂಸಿ ಮೇಯರ್‌ ಪರವಾಗಿ ವಕಾಲತ್ತು ವಹಿಸಿರುವ ವಕೀಲ ಶಿವರಾಜ್‌ ಬೆಳ್ಳಕ್ಕಿ ಅವರ ಪರವಾಗಿ ವಾದಿಸಿದ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ ಅವರು “ಈದ್ಗಾ ಮೈದಾನದ ಮಾಲೀಕತ್ವವನ್ನು ಎಚ್‌ಡಿಎಂಸಿ ಹೊಂದಿದ್ದು, ಅರ್ಜಿದಾರರು ಪರವಾನಗಿ ಮಾತ್ರ ಹೊಂದಿದ್ದಾರೆ. ಎಚ್‌ಡಿಎಂಸಿ ಹೊರಡಿಸುವ ಆದೇಶವನ್ನು ಪ್ರಶ್ನಿಸುವ ಹಕ್ಕನ್ನು ಅರ್ಜಿದಾರರು ಹೊಂದಿಲ್ಲ” ಎಂದು ವಾದಿಸಿದರು.

ಎಚ್‌ಡಿಎಂಸಿ ಪರವಾಗಿ ವಕೀಲ ಜಿ ಐ ಗಚ್ಚಿನಮಠ ವಾದಿಸಿದರು. ರಾಜ್ಯ ಸರ್ಕಾರವನ್ನು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಜೆ ಎಂ ಗಂಗಾಧರ್‌ ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com