[ಘಂಟಿ ಚೋರ್‌ ಗಲಭೆ] ದಿಂಗಾಲೇಶ್ವರ ಶ್ರೀ ಆರೋಪಿಯಾಗಿರುವ ಪ್ರಕರಣದಲ್ಲಿ ಅಂತಿಮ ವರದಿ ಕಾನೂನುಬಾಹಿರ: ಹೈಕೋರ್ಟ್‌

ಐಪಿಸಿ ಸೆಕ್ಷನ್‌ 149ರ ಅಡಿ ಪ್ರಕರಣ ದಾಖಲಿಸಿರುವುದರಿಂದ ಎಲ್ಲಾ ಆರೋಪಿಗಳನ್ನು ಒಟ್ಟುಗೂಡಿಸಿ ಅಂತಿಮ ವರದಿ ಸಲ್ಲಿಸಬಹುದು. ಇದರ ಬದಲು ತನಿಖಾಧಿಕಾರಿ ಮೂರು ಪ್ರತ್ಯೇಕ ವರದಿ ಸಲ್ಲಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದ ನ್ಯಾಯಾಲಯ.
Karnataka HC (Dharwad bench) Dingaleshwar Swamiji (Balehosur mutt)
Karnataka HC (Dharwad bench) Dingaleshwar Swamiji (Balehosur mutt)
Published on

ಗದಗ ಜಿಲ್ಲೆಯ ಬಾಲೆ ಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿಯವರು ಆರೋಪಿಯಾಗಿರುವ ಘಂಟಿ ಚೋರ್‌ ಸಮುದಾಯದವರ ಮೇಲಿನ ಹಲ್ಲೆ ಪ್ರಕರಣದಲ್ಲಿ ತನಿಖಾಧಿಕಾರಿ ಸಲ್ಲಿಸಿರುವ ಅಂತಿಮ ವರದಿಯು ಕಾನೂನುಬಾಹಿರ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ಹೇಳಿದೆ.

ಲಕ್ಷ್ಮೇಶ್ವರ ತಾಲ್ಲೂಕಿನ ಬಾಲೆ ಹೊಸೂರು ಗ್ರಾಮದಲ್ಲಿನ ಘಂಟಿ ಚೋರ್‌ ಸಮುದಾಯದವರ ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದಿಂಗಾಲೇಶ್ವರ ಸ್ವಾಮೀಜಿ ಅವರು ಒಂದೇ ಅಪರಾಧಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಪ್ರತ್ಯೇಕವಾಗಿ ಮೂರು ಆರೋಪ ಪಟ್ಟಿ ಸಲ್ಲಿಸಿದ್ದನ್ನು ಪ್ರಶ್ನಿಸಿದ್ದ ಮನವಿಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

ಒಂದೇ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್‌ 173ರ ಅಡಿ ಪ್ರತ್ಯೇಕವಾಗಿ ಮೂರು ಆರೋಪ ಪಟ್ಟಿ ಸಲ್ಲಿಸಲು ಅವಕಾಶವಿಲ್ಲ. ಕೆಲವು ಅಪರಾಧಗಳಿಗೆ ಕೆಲವು ವ್ಯಕ್ತಿಗಳು ಕಾರಣರಲ್ಲ ಎಂಬ ಆಧಾರ ನೀಡಿ ಪ್ರತ್ಯೇಕ ಆರೋಪ ಪಟ್ಟಿ ಸಲ್ಲಿಸಲು ಸಿಆರ್‌ಪಿಸಿ ಸೆಕ್ಷನ್‌ 173ರಲ್ಲಿ ಅವಕಾಶವಿಲ್ಲ. ಯಾವ ಅಪರಾಧಕ್ಕೆ ಯಾರು ಕಾರಣರು ಮತ್ತು ವರದಿಯ ಕಲಂ ನಂ. 17ರಲ್ಲಿ ಯಾವೆಲ್ಲಾ ಅಪರಾಧಗಳನ್ನು ಉಲ್ಲೇಖಿಸಬೇಕು ಎಂಬುದು ತನಿಖಾಧಿಕಾರಿಗೆ ಬಿಟ್ಟ‌ ವಿಚಾರವಾಗಿದ್ದು, ನಿರ್ದಿಷ್ಟ ಆರೋಪಿಗಳು ಯಾವೆಲ್ಲಾ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ತನಿಖಾಧಿಕಾರಿಯು ಪ್ರತ್ಯೇಕ ಮತ್ತು ಸ್ಪಷ್ಟವಾಗಿ ಉಲ್ಲೇಖಿಸಬೇಕು ಎಂದು ಪೀಠ ಆದೇಶದಲ್ಲಿ ಹೇಳಿದೆ.

ಪ್ರಾಸಿಕ್ಯೂಷನ್‌ ಐಪಿಸಿ ಸೆಕ್ಷನ್‌ 149ರ ಅಡಿ ಪ್ರಕರಣ ದಾಖಲಿಸಿರುವುದರಿಂದ ಎಲ್ಲಾ ಆರೋಪಿಗಳನ್ನು ಒಟ್ಟುಗೂಡಿಸಿ, ಸೂಕ್ತವಾದ ಅಂತಿಮ ವರದಿ ಸಲ್ಲಿಸಬಹುದಿತ್ತು. ಇದನ್ನು ಮಾಡುವ ಬದಲು ತನಿಖಾಧಿಕಾರಿಯು ಮೂರು ಪ್ರತ್ಯೇಕ ವರದಿ ಸಲ್ಲಿಸುವ ನಿರ್ಧಾರ ಕೈಗೊಂಡಿದ್ದಾರೆ. ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ಒಂದೊಮ್ಮೆ ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯಿದೆ ಅಡಿ ಆರೋಪವಿಲ್ಲದಿದ್ದರೂ ಅದನ್ನು ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಬಹುದಾಗಿದೆ. ಏಕೆಂದರೆ ಇಡೀ ಪ್ರಕರಣದ ಅದೇ ಘಟನೆಯಿಂದ ಹೊರಹೊಮ್ಮಿದ್ದಾಗಿದೆ. ಹೀಗಾಗಿ, ಪ್ರತ್ಯೇಕ ವರದಿಗಳನ್ನು ಸಲ್ಲಿಸುವ ಅಗತ್ಯವಿರಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅಲ್ಲದೇ, ಸಿಆರ್‌ಪಿಸಿ ಸೆಕ್ಷನ್‌ 173ರ ಅಡಿ ಹೊಸ ಮತ್ತು ಸಮಗ್ರವಾದ ಅಂತಿಮ ವರದಿ ಸಲ್ಲಿಸಲು ನ್ಯಾಯಾಲಯ ಗದಗದ ಡಿವೈಎಸ್‌ಪಿಗೆ ಆದೇಶ ಮಾಡಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರಾದ ಕೆ ಎಲ್‌ ಪಾಟೀಲ್‌ ಅವರು “ಒಂದೇ ಅಪರಾಧಕ್ಕೆ ಸಂಬಂಧಿಸಿದಂತೆ ಮೂರು ಆರೋಪ ಪಟ್ಟಿಗಳನ್ನು ಸಲ್ಲಿಸಲಾಗದು. ಒಂದೇ ಘಟನೆಗೆ ಸಂಬಂಧಿಸಿದಂತೆ ಮೂರು ಪ್ರಕರಣಗಳು ದಾಖಲಾಗಿದ್ದರೂ ಒಂದೇ ಪ್ರಕರಣವಾಗಿಸಿ, ಸಿಆರ್‌ಪಿಸಿ 173ರ ಅಡಿ ಅಂತಿಮ ವರದಿ ಸಲ್ಲಿಸುವಂತೆ ಸಂಬಂಧಿತ ಪೊಲೀಸರಿಗೆ ಹೈಕೋರ್ಟ್‌ ಈಗಾಗಲೇ ಸೂಚಿಸಿದೆ. ಆದರೆ, ತನಿಖಾಧಿಕಾರಿಯೂ ಮೂರು ಆರೋಪ ಪಟ್ಟಿಗಳಲ್ಲಿಯೂ ಒಂದೇ ಅಪರಾಧ ಸಂಖ್ಯೆ ಉಲ್ಲೇಖಿಸಿ ವರದಿ ಸಲ್ಲಿಸಿದ್ದಾರೆ. ಇದು ಕಾನೂನುಬಾಹಿರ” ಎಂದು ವಾದಿಸಿದ್ದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ರಮೇಶ್‌ ಚಿಗರಿ ಅವರು “ಒಂದು ಆರೋಪ ಪಟ್ಟಿಯಲ್ಲಿ ಎಸ್‌ಸಿ/ಎಸ್‌ಟಿ ಕಾಯಿದೆ ಅಡಿ ಸೆಕ್ಷನ್‌ಗಳನ್ನು ಉಲ್ಲೇಖಿಸಿಲ್ಲ. ಇದನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ. ಮತ್ತೆರಡು ವರದಿಗಳಲ್ಲಿ ಎಸ್‌ಸಿ/ಎಸ್‌ಟಿ ಕಾಯಿದೆ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿರುವುದರಿಂದ ಎರಡು ವರದಿಗಳನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಹೀಗಾಗಿ, ತನಿಖಾಧಿಕಾರಿ ಸರಿಯಾದ ಕೆಲಸ ಮಾಡಿದ್ದಾರೆ” ಎಂದು ಸಮರ್ಥಿಸಿದ್ದರು.

ಘಟನೆಯ ಹಿನ್ನೆಲೆ: 2015ರ ಜೂನ್‌ 7ರಂದು ಬಾಲೆ ಹೊಸೂರು ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಘಂಟಿ ಚೋರ್‌ ಸಮುದಾಯದವರ ನಡುವೆ ಗಲಭೆ ಆರಂಭವಾಗಿತ್ತು. 500-600 ಮಂದಿ ಉದ್ರಿಕ್ತರ ಗುಂಪು ನೆರೆದಿದ್ದು, ಪೊಲೀಸ್‌ ಸಿಬ್ಬಂದಿಯ ನೆರವಿನಿಂದ ಲಕ್ಷ್ಮೇಶ್ವರ ಠಾಣೆಯ ಇನ್‌ಸ್ಪೆಕ್ಟರ್‌ ಅವರು ಪರಿಸ್ಥಿತಿಯನ್ನು ತಹಬಂದಿಗೆ ತಂದಿದ್ದರು. ಇಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಮತ್ತು ಅವರ ಬೆಂಬಲಿಗರ ಪಾತ್ರದ ಕುರಿತು ಆರೋಪಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ಇನ್‌ಸ್ಪೆಕ್ಟರ್‌ ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು. ಇದೇ ಘಟನೆಯ ಕುರಿತಾಗಿ ಮತ್ತೆರಡು ಪ್ರಕರಣಗಳು ಸಹ ದಾಖಲಾಗಿದ್ದವು. ಇವೆಲ್ಲವನ್ನೂ ಒಟ್ಟಾಗಿಸಿ, ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಲು ದಿಂಗಾಲೇಶ್ವರ ಸ್ವಾಮೀಜಿ ಕೋರಿದ್ದರು.

Kannada Bar & Bench
kannada.barandbench.com