ಅಸ್ಸಾಂನಲ್ಲಿ ಎಮ್ಮೆ ಮತ್ತು ಬುಲ್‌ಬುಲ್‌ ಕಾಳಗಗಳಿಗೆ ಗುವಾಹಟಿ ಹೈಕೋರ್ಟ್ ನಿಷೇಧ

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಪಿಸಿಎ) ಕಾಯಿದೆಯ ಸೆಕ್ಷನ್ 3ರ ಪ್ರಕಾರ, ಪ್ರಾಣಿಗಳನ್ನು ಸಲಹುವ ವ್ಯಕ್ತಿಗಳು ಅವುಗಳ ಒಳಿತನ್ನು ಬಯಸುವ ಕಡ್ಡಾಯ ಕರ್ತವ್ಯಕ್ಕೆ ಬದ್ಧರು ಎಂದು ನ್ಯಾಯಮೂರ್ತಿ ದೇವಶಿಶ್‌ ಬರುವಾ ಅವರು ಒತ್ತಿ ಹೇಳಿದರು.
Gauhati High Court
Gauhati High Court
Published on

ಎಮ್ಮೆ ಕಾಳಗ ಮತ್ತು ಬುಲ್‌ಬುಲ್‌ ಪಕ್ಷಿ ಕಾಳಗಗಳ ಮೇಲೆ ಗುವಾಹಟಿ ಹೈಕೋರ್ಟ್ ಮಂಗಳವಾರ ಸಂಪೂರ್ಣ ನಿಷೇಧ ಹೇರಿದೆ [ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಟು ಅನಿಮಲ್ಸ್ – ಪೆಟಾ ಇಂಡಿಯಾ ಮತ್ತು ಅಸ್ಸಾಂ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಪಿಸಿಎ) ಕಾಯಿದೆಯ ಸೆಕ್ಷನ್ 3ರ ಪ್ರಕಾರ, ಪ್ರಾಣಿಗಳನ್ನು ಸಲಹುವ ವ್ಯಕ್ತಿಗಳು ಅವುಗಳ ಒಳಿತನ್ನು ಬಯಸುವ ಕಡ್ಡಾಯ ಕರ್ತವ್ಯಕ್ಕೆ ಬದ್ಧರು ಎಂದು ನ್ಯಾಯಮೂರ್ತಿ ದೇವಶಿಶ್‌ ಬರುವಾ ಅವರು ಒತ್ತಿ ಹೇಳಿದರು.

Also Read
ಕಂಬಳ, ಜಲ್ಲಿಕಟ್ಟು, ಬಂಡಿ ಓಟ ಕ್ರೀಡೆಗಳಿಗೆ ಸುಪ್ರೀಂ ಅನುಮತಿ; ತಿದ್ದುಪಡಿ ಕಾಯಿದೆಗಳನ್ನು ಎತ್ತಿ ಹಿಡಿದ ನ್ಯಾಯಾಲಯ

ಪಿಸಿಎ ಕಾಯಿದೆ 1960 ರ ಸೆಕ್ಷನ್ 3 ಪ್ರಾಣಿಗಳ ಉಸ್ತುವಾರಿ ಹೊಂದಿರುವ ವ್ಯಕ್ತಿಗಳ ಕಡ್ಡಾಯ ಕರ್ತವ್ಯದ ಬಗ್ಗೆ ಹೇಳುತ್ತದೆ. ಪ್ರಾಣಿಗಳಿಗೆ ನೀಡಲಾದ ಹಕ್ಕುಗಳು ಕರ್ತವ್ಯದ ವ್ಯತಿರಿಕ್ತವಾಗಿದ್ದು ಅಂತಹ ಹಕ್ಕುಗಳ ಉಲ್ಲಂಘನೆಯಾದರೆ ಕಾನೂನು ಕ್ರಮಗಳ ಮೂಲಕ ಆ ಹಕ್ಕುಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ನ್ಯಾಯಾಲಯ ನುಡಿಯಿತು.

ಎಮ್ಮೆ ಕಾಳಗ ಮತ್ತು ಬುಲ್‌ಬುಲ್‌ ಹಕ್ಕಿಗಳ ಅಂಕಕ್ಕೆ ಸಂಬಂಧಿಸಿದ ಎರಡು ಪ್ರತ್ಯೇಕ ಅರ್ಜಿಗಳ ವಿಚಾರನೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ಮಾಗ್ ಬಿಹು ಹಬ್ಬದ ಹಿನ್ನೆಲೆಯಲ್ಲಿ ಅಸ್ಸಾಂ ಸರ್ಕಾರ ಡಿಸೆಂಬರ್ 27, 2023 ರಂದು ಪ್ರಾಣಿಗಳ ಕಾಳಗಕ್ಕೆ ಅನುಮತಿಸುವ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್ಒಪಿ) ಜಾರಿಗೆ ತಂದಿತ್ತು.

ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ರೀತಿಯ ರಾಜ್ಯಗಳು ಸಾಂಪ್ರದಾಯಿಕ ಪ್ರಾಣಿ ಆಧಾರಿತ ಪಂದ್ಯಾಚರಣೆಗಳಿಗೆ ಅವಕಾಶ ಕಲ್ಪಿಸಲು ರಾಷ್ಟ್ರಪತಿಗಳ ಒಪ್ಪಿಗೆಯೊಂದಿಗೆ ಪಿಸಿಎ ಕಾಯಿದೆಗೆ ತಿದ್ದುಪಡಿ ತಂದಿದ್ದರೂ, ಅಸ್ಸಾಂನಲ್ಲಿ ಆ ರೀತಿಯ ತಿದ್ದುಪಡಿ ಆಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

"ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕದಂತೆ, ಅಸ್ಸಾಂ 1960ರ ಕಾಯಿದೆಗೆ ಯಾವುದೇ ತಿದ್ದುಪಡಿಗಳನ್ನು ಮಾಡದೆ (ಎಸ್ಒಪಿ ಮೂಲಕ) 1960ರ ಕಾಯಿದೆ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯಿದೆ, 1972 ಮತ್ತು ಎ ನಾಗರಾಜ ಸಂವಿಧಾನ ಪೀಠದ ತೀರ್ಪನ್ನು ಮೀರಲು ಆಶ್ರಯಿಸಿದೆ, ಇದನ್ನು ಅನುಮತಿಸುವುದಿಲ್ಲ" ಎಂದು ನ್ಯಾಯಾಲಯ ಹೇಳಿದೆ. ಸಂವಿಧಾನದ 254ನೇ ವಿಧಿಯ ಅಡಿಯಲ್ಲಿ ಹಾಗೆ ಮಾಡಲು ಅನುಮತಿ ಇಲ್ಲ ಎಂದು ಅದು ತಿಳಿಸಿದೆ.

Also Read
ಪಿಲಿಕುಳದಲ್ಲಿ ಡಿಸೆಂಬರ್‌ನಲ್ಲಿ ಕಂಬಳ ಸ್ಪರ್ಧೆ ಆಯೋಜಿಸುವುದಿಲ್ಲ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

"ನೀವು 1960ರ ಕಾಯಿದೆಗೆ ತಿದ್ದುಪಡಿ ಮಾಡಿ ರಾಷ್ಟ್ರಪತಿಗಳ ಒಪ್ಪಿಗೆ ಪಡೆಯಿರಿ. ಹಾಗಲ್ಲದೆ ನೀವು 254ನೇ ವಿಧಿಯನ್ನು ಎಸ್ಒಪಿ ಮೂಲಕ ಅತಿಕ್ರಮಿಸಲು ಸಾಧ್ಯವಿಲ್ಲ. ದೇಶದ ಕಾನೂನಾಗಿರುವ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಪಾಲಿಸಬೇಕು" ಎಂದು ಪೀಠ ಸೂಚಿಸಿದೆ.

ಅಂತೆಯೇ ಎಸ್ಒಪಿ ರದ್ದುಗೊಳಿಸಿದ ಅದು ಪಿಸಿಎ ಕಾಯಿದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯಿದೆಯ ಸೆಕ್ಷನ್‌ಗಳ ಸಂಪೂರ್ಣ ಪಾಲನೆ ಮಾಡುವಂತೆ ಅಸ್ಸಾಂ ಸರ್ಕಾರಕ್ಕೆ ನಿರ್ದೇಶಿಸಿತು.

Kannada Bar & Bench
kannada.barandbench.com