ಸಿಪಜಾರ್ ತೆರವು ಕಾರ್ಯಚರಣೆ ವೇಳೆ ಸೆಪ್ಟೆಂಬರ್ 2021ರಲ್ಲಿ ನಡೆದಿದ್ದ ಹಿಂಸಾಚಾರದ ಹಿನ್ನೆಲೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ನಿರ್ದೇಶಿಸಿದ್ದ ಕೆಳ ನ್ಯಾಯಾಲಯದ ಆದೇಶವನ್ನು ಗುವಾಹಟಿ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ [ಅಸ್ಸಾಂ ಸರ್ಕಾರ ಮತ್ತಿತರರು ಹಾಗೂ ಅಬ್ದುಲ್ ಖಲೀಕ್ ಇನ್ನಿತರರ ನಡುವಣ ಪ್ರಕರಣ].
ಸಿಪಜಾರ್ ತೆರವು ಕಾರ್ಯಚರಣೆಯನ್ನು ಪ್ರತೀಕಾರದ ಕ್ರಿಯೆ ಎಂದು ಮೋರಿಗಾಂವ್ ಜಿಲ್ಲೆಯಲ್ಲಿ ಮಾಡಲಾದ ಭಾಷಣದಲ್ಲಿ ಸಿಎಂ ಶರ್ಮ ಸಮರ್ಥಿಸಿಕೊಂಡಿದ್ದರು.
ಮ್ಯಾಜಿಸ್ಟ್ರೇಟ್ ಅವರು ಮುಖ್ಯಮಂತ್ರಿ ಅಥವಾ ಪೊಲೀಸ್ ಅಧಿಕಾರಿಗಳ ವಾದ ಆಲಿಸದೆ ಎಫ್‌ಐಆರ್ ದಾಖಲಿಸಲು ತರಾತುರಿಯಲ್ಲಿ ಆದೇಶ ಹೊರಡಿಸಿದಂತಿದೆ. ಯಾವುದೇ ಸಂಜ್ಞೇಯ ಅಪರಾಧ ನಡೆದಿಲ್ಲ ಎನ್ನುವುದನ್ನು ಪೊಲೀಸ್ ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದರು. ಹಾಗಾಗಿ, ಇದು ಖಂಡಿತವಾಗಿಯೂ ನ್ಯಾಯದ ಸಂಪೂರ್ಣ ವೈಫಲ್ಯ ಮತ್ತು ನ್ಯಾಯಾಲಯ ಪ್ರಕ್ರಿಯೆಯ ದುರುಪಯೋಗ ಎಂದು ಗುವಾಹಟಿ ಹೈಕೋರ್ಟ್ ನ್ಯಾಯಮೂರ್ತಿ ಅಜಿತ್ ಬೋರ್ತಕೂರ್ ಅವರು ಗುರುವಾರ (ಆಗಸ್ಟ್ 3) ನೀಡಿದ ಆದೇಶದಲ್ಲಿ ಹೇಳಿದ್ದಾರೆ.
ಪ್ರಕರಣದಲ್ಲಿ ಸಿಎಂ ಬಳಸಿರುವ ಪದಗಳನ್ನು ಕೋಮು ಪ್ರಚೋದಕ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದು ಯಾವುದೇ ದಂಡನೀಯ ಅಪರಾಧವನ್ನು ಆಕರ್ಷಿಸುವುದಿಲ್ಲ ಎಂದು ನ್ಯಾ. ಬೋರ್ತಕೂರ್ ಹೇಳಿದ್ದಾರೆ.
ಮುಖ್ಯಮಂತ್ರಿ ವಿರುದ್ಧದ ಆರೋಪಗಳನ್ನು ಸರಿಯಾಗಿ ಪರಿಗಣಿಸದೆ ಮ್ಯಾಜಿಸ್ಟ್ರೇಟ್ ಅವರು ತೀರ್ಪು ನೀಡುವಲ್ಲಿ ಎಡವಿದ್ದಾರೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸಂಜ್ಞೇಯ ಅಪರಾಧಗಳ ತನಿಖೆಗೆ ನಿರ್ದೇಶಿಸಲು ಸಿಆರ್‌ಪಿಸಿ ಸೆಕ್ಷನ್ 156 (3) ಮ್ಯಾಜಿಸ್ಟ್ರೇಟ್‌ಗಳಿಗೆ ಅಧಿಕಾರ ನೀಡುತ್ತದೆ. ಇದನ್ನು ಪೊಲೀಸರು ಎಫ್‌ಐಆರ್ ದಾಖಲಿಸಬೇಕು ಎಂದು ಕಟ್ಟುನಿಟ್ಟಾಗಿ ಅರ್ಥೈಸುವಂತಿಲ್ಲ ಎಂದು ನ್ಯಾಯಾಲಯ ವಿವರಿಸಿದೆ.
ಸೆಪ್ಟೆಂಬರ್ 23, 2021 ರಂದು ದರ್ರಾಂಗ್ ಜಿಲ್ಲೆಯ ಸಿಪಜರ್‌ನಲ್ಲಿ ನಡೆದ ತೆರವು ಕಾರ್ಯಾಚರಣೆ ವೇಳೆ ಭದ್ರತಾ ಪಡೆ ಮತ್ತು ನಿವಾಸಿಗಳ ನಡುವೆ ಗೋರುಖುತಿ ಎಂಬಲ್ಲಿ ನಡೆದ ಘರ್ಷಣೆ ವೇಳೆ ಪೊಲೀಸರ ಗುಂಡೇಟಿಗೆ ಕನಿಷ್ಠ ಇಬ್ಬರು ಬಲಿಯಾಗಿದ್ದರು.