ಕಿರುಕುಳ ಆರೋಪ: ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ ವಿರುದ್ಧದ ಎಫ್‌ಐಆರ್‌ ರದ್ದತಿಗೆ ಗುವಾಹಟಿ ಹೈಕೋರ್ಟ್‌ ನಕಾರ

"ಪ್ರತಿಯೊಂದು ಪ್ರಕರಣಕ್ಕೂ ಅನ್ವಯಿಸುವ ಕಾನೂನು ಮತ್ತು ವಾಸ್ತವಿಕ ವಿಚಾರಗಳನ್ನು ಆಧರಿಸಿ, ಯಾವುದೇ ಭಯ ಅಥವಾ ಪಕ್ಷಪಾತ ಅಥವಾ ದುರುದ್ದೇಶ ಹೊಂದದೇ ನ್ಯಾಯಮೂರ್ತಿಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ" ಎಂದಿರುವ ನ್ಯಾಯಾಲಯ.
Gauhati HC
Gauhati HC

ಅಸ್ಸಾಂ ಕಾಂಗ್ರೆಸ್‌ ಯುವ ಘಟಕದ ಉಚ್ಛಾಟಿತ ನಾಯಕಿಯೊಬ್ಬರ ಗೌರವಕ್ಕೆ ಧಕ್ಕೆ ತಂದ ಆರೋಪದಲ್ಲಿ ಕರ್ನಾಟಕದವರಾದ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್‌ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಲು ಗುವಾಹಟಿ ಹೈಕೋರ್ಟ್‌ ಗುರುವಾರ ನಿರಾಕರಿಸಿದೆ. ಅಲ್ಲದೇ, ನಿವೃತ್ತಿ ಅಂಚಿನಲ್ಲಿರುವ ನ್ಯಾಯಮೂರ್ತಿಗಳು ಯಾವಾಗಲೂ ಸರ್ಕಾರದ ಪರವಾಗಿ ಆದೇಶ ಮಾಡುತ್ತಾರೆ ಎಂಬ ವಾದಕ್ಕೆ ತೀವ್ರ ಅಸಮಾಧಾನ ದಾಖಲಿಸಿದೆ.

ಅಸ್ಸಾಂನ ದಿಸ್‌ಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ಮಾಡಿರುವ ನೋಟಿಸ್‌ ರದ್ದುಪಡಿಸಬೇಕು ಮತ್ತು ಪ್ರಕರಣ ಬಾಕಿ ಇರುವಾಗ ಯಾವುದೇ ತೆರನಾದ ದುರುದ್ದೇಶಪೂರಿತ ಕ್ರಮ ಕೈಗೊಳ್ಳದಂತೆ ಆದೇಶಿಸಬೇಕು ಎಂದು ಕೋರಿ ಶ್ರೀನಿವಾಸ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಜಿತ್‌ ಬೊರ್ತಾಕುರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

ಶ್ರೀನಿವಾಸ್‌ ಪರ ಹಿರಿಯ ವಕೀಲ ಕೆ ಎನ್‌ ಚೌಧರಿ ಅವರು ಮಂಡಿಸಿದ ಸುದೀರ್ಘ ವಾದವನ್ನು ನ್ಯಾಯಾಲಯವು ಪುರಸ್ಕರಿಸಲಿಲ್ಲ.

“ನಿವೃತ್ತಿಯ ಗಡಿಯಲ್ಲಿರುವ ನ್ಯಾಯಮೂರ್ತಿಗಳು ಯಾವಾಗಲೂ ಸರ್ಕಾರದ ಪರವಾಗಿ ಆದೇಶ ಮಾಡುತ್ತಾರೆ ಎಂದು ಶ್ರೀನಿವಾಸ್‌ ಪರ ಹಿರಿಯ ವಕೀಲ ಕೆ ಎನ್‌ ಚೌಧರಿ ಅವರು ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಬಿಜೆಪಿ ಮಾಜಿ ಸಚಿವ ದಿವಂಗತ ಅರುಣ್‌ ಜೇಟ್ಲಿ ಅವರು ಸಂಸತ್‌ನಲ್ಲಿ ಹೇಳಿದ್ದನ್ನು ಉಲ್ಲೇಖಿಸಿದ್ದಾರೆ. ಮುಂದುವರಿದು, ಇದಕ್ಕಾಗಿ ನ್ಯಾಯಮೂರ್ತಿಗಳು ನಿವೃತ್ತಿಯಾದ ಬಳಿಕ ನಿರ್ದಿಷ್ಟ ಅವಧಿವರೆಗೆ ಸರ್ಕಾರದಿಂದ ಯಾವುದೇ ಜವಾಬ್ದಾರಿ ತೆಗೆದುಕೊಳ್ಳಬಾರದು ಎಂದು ವಾದಿಸಲಾಗಿದೆ. ದೂರದಲ್ಲಿ ನಿಂತು ಈ ಸಂಬಂಧ ಪ್ರತಿಯನ್ನು ಚೌಧರಿ ಅವರು ತೋರಿಸಿರುವುದರಿಂದ ಸಹಜವಾಗಿ ಇದನ್ನು ನ್ಯಾಯಾಲಯ ನೋಡಲಾಗಿಲ್ಲ. ನ್ಯಾಯಾಲಯದಲ್ಲಿ ಸಾಮಾನ್ಯವಾಗಿ ಸಮಾಧಾನದಿಂದ ವಾದಿಸುವುದನ್ನು ಮೀರಿ ಏರುಧ್ವನಿಯಲ್ಲಿ ವಾದ ಮಂಡನೆ ಮಾಡಿದ್ದಾರೆ” ಎಂದು ಆದೇಶದಲ್ಲಿ ದಾಖಲಿಸಲಾಗಿದೆ.

ಇದಕ್ಕೆ ಪ್ರತಿಯಾಗಿ ಪೀಠವು “ಪ್ರತಿಯೊಂದು ಪ್ರಕರಣಕ್ಕೂ ಅನ್ವಯಿಸುವ ಕಾನೂನು ಮತ್ತು ವಾಸ್ತವಿಕ ವಿಚಾರಗಳನ್ನು ಆಧರಿಸಿ, ಯಾವುದೇ ಭಯ ಅಥವಾ ಪಕ್ಷಪಾತ ಅಥವಾ ದುರುದ್ದೇಶ ಹೊಂದದೇ ನ್ಯಾಯಮೂರ್ತಿಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಹೀಗಾಗಿ, ಸೂಕ್ಷ್ಮ ಕಾನೂನು ಮತಿಯುಳ್ಳವರು ಎಂದು ಭಾವಿಸಲ್ಪಟ್ಟಿರುವ ಚೌಧರಿ ಅವರ ವಿಚಾರದಲ್ಲಿ ವಿವೇಕ ಮೇಲುಗೈ ಸಾಧಿಸಲಿ. ಅದಾಗ್ಯೂ, ಈ ನ್ಯಾಯಾಲಯವು ತನ್ನ ಅಸಂತೋಷವನ್ನು ದಾಖಲಿಸಬೇಕಾದ ಸನ್ನಿವೇಶ ಉದ್ಭವಿಸಿರುವುದು ದುರದೃಷ್ಟಕರ, ಭವಿಷ್ಯದಲ್ಲಿ ಎದುರಾಗಬಹುದಾದ ಇಂತಹ ಮುಜುಗರದ ಸನ್ನಿವೇಶಗಳನ್ನು ತಡೆಯುವ ದೃಷ್ಟಿಯಿಂದ ಇದನ್ನು ಉಲ್ಲೇಖಿಸುವ ಹಕ್ಕನ್ನು ಈ ನ್ಯಾಯಾಲಯವು ಉಳಿಸಿಕೊಂಡಿರುತ್ತದೆ" ಎಂದು ಆದೇಶದಲ್ಲಿ ಹೇಳಿದೆ.

“ಮೇಲಿನ ಮಾಹಿತಿ ನೀಡಲು ಸದರಿ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಅವರ ಮುಂದೆ ಇಡಲು ಈ ಆದೇಶವನ್ನು ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ತಲುಪಿಸಬೇಕು. ಮೇಲೆ ಉಲ್ಲೇಖಿಸಿದ ವಿಚಾರವನ್ನು ವಿಚಕ್ಷಣಾ ರಿಜಿಸ್ಟ್ರಾರ್‌ ಅವರ ಮುಂದೆ ದಾಖಲೆಗೆ ಇಡಬೇಕು” ಎಂದು ನ್ಯಾಯಾಲಯದ ಆದೇಶದಲ್ಲಿ ದಾಖಲಿಸಿದೆ.

ಈಚೆಗೆ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಶ್ರೀನಿವಾಸ್‌ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ನಿರಾಕರಿಸಿತ್ತು.

Also Read
ಕಿರುಕುಳ ಆರೋಪ: ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆಂಗಳೂರು ನ್ಯಾಯಾಲಯ

ಪ್ರಕರಣದ ಹಿನ್ನೆಲೆ: ಯುವ ಕಾಂಗ್ರೆಸ್‌ ಅಧ್ಯಕ್ಷರಾದ ಬಿ ವಿ ಶ್ರೀನಿವಾಸ್‌ ಅವರು ಕಳೆದ ಆರು ತಿಂಗಳಿಂದ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಈ ವಿಷಯವನ್ನು ಕಾಂಗ್ರೆಸ್‌ ಪದಾಧಿಕಾರಿಗಳಿಗೆ ತಿಳಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. 2023ರ ಫೆಬ್ರವರಿ 25ರಂದು ಛತ್ತೀಸ್‌ಗಢದ ರಾಯಪುರದಲ್ಲಿನ ಮೇಫೇರ್ ಹೋಟೆಲ್‌ನಲ್ಲಿ ಹಲ್ಲೆ ನಡೆಸಿದ್ದು, ಕೆಟ್ಟ ಭಾಷೆ ಬಳಕೆ ಮಾಡಿದ್ದಾರೆ. ಇದಲ್ಲದೇ ಗುವಾಹಟಿಯಲ್ಲಿ ನೆಲೆಸಿದ್ದಾಗ ವಿವಿಧ ಸ್ವರೂಪದ ಬೆದರಿಕೆ ಹಾಕಿದ್ದಾರೆ. ತನ್ನ ನಿರ್ದೇಶನ ಪಾಲಿಸದಿದ್ದರೆ ಪಕ್ಷದ ಯಾವುದೇ ಸಭೆ-ಸಮಾರಂಭದಲ್ಲಿ ಭಾಗವಹಿಸಲು ಅಸ್ಸಾಂನಿಂದ ಹೊರಹೋಗದಂತೆ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ 2023ರ ಏಪ್ರಿಲ್‌ 19ರಂದು ಅಸ್ಸಾಂನ ಕಾಮರೂಪ್‌ ಜಿಲ್ಲೆಯಲ್ಲಿರುವ ದಿಸ್‌ಪುರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಶ್ರೀನಿವಾಸ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 294, 341, 352, 354, 354ಎ(iv), 506 ಮತ್ತು 509 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 67ರ ಅಡಿ ಪ್ರಕರಣ ದಾಖಲಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com