ತನೇಜಾ-ಮಿಂಟ್ ಪ್ರಕರಣ: ಟೀಕೆ ಕುಟುಂಬದ ಮಟ್ಟಕ್ಕೆ ಹೋಗದಿರಲಿ ಎಂದು ಕಿವಿಮಾತು ಹೇಳಿದ ದೆಹಲಿ ಹೈಕೋರ್ಟ್

ನ್ಯಾಯಾಧೀಶರು ನೀಡಿದ ತೀರ್ಪಿಗಾಗಿ ಪತ್ರಕರ್ತರು ಮತ್ತು ಜನ ಅವರನ್ನು ಟೀಕಿಸಬಹುದು. ಆದರೆ ಟೀಕೆಗಳು ಅವರ ವೈಯಕ್ತಿಕ ಬದುಕು ಮತ್ತು ಕುಟುಂಬ ಸದಸ್ಯರ ಮಟ್ಟಕ್ಕೆ ವಿಸ್ತರಿಸಬಾರದು ಎಂದು ನ್ಯಾಯಾಲಯ ಹೇಳಿದೆ.
Youtuber Gaurav Taneja, Mint newspaper
Youtuber Gaurav Taneja, Mint newspaper
Published on

ನ್ಯಾಯಾಧೀಶರು, ಸಾರ್ವಜನಿಕ ವ್ಯಕ್ತಿಗಳು ಅಥವಾ ಸಾಮಾಜಿಕ ಮಾಧ್ಯಮದ ಪ್ರಭಾವಿಗಳನ್ನು ಅವರ ನಡೆ ನುಡಿ ಹಾಗೂ ತೀರ್ಪಿಗಾಗಿ ಟೀಕಿಸಬಹುದು, ಆದರೆ ಆ ಟೀಕೆ ಅವರ ಮಕ್ಕಳು ಮತ್ತು ಕುಟುಂಬ ಸದಸ್ಯರವರೆಗೆ ಚಾಚಿಕೊಳ್ಳಬಾರದು ಎಂದು ದೆಹಲಿ ಹೈಕೋರ್ಟ್‌ ಮಂಗಳವಾರ ಹೇಳಿದೆ.

ಪತ್ರಕರ್ತರ ಸ್ವಾತಂತ್ರ್ಯ ಎಂಬುದು ಜನರ ಮನೆಗಳವರೆಗೂ ಚಾಚಿಕೊಂಡು ಕುಟುಂಬದ ಸದಸ್ಯರ ಬಗ್ಗೆ ಹೇಳಿಕೆ ನೀಡುವವರೆಗೂ ಹೋಗಬಹುದೇ ಎಂಬುದು ಚರ್ಚಿಸಬೇಕಾದ ವಿಚಾರ. ಆದರೆ ಪುರಾವೆಗಳಿಲ್ಲದೆ ಯಾರನ್ನಾದರೂ ಮಕ್ಕಳ ವಿರುದ್ಧ ದೌರ್ಜನ್ಯ ಎಸಗುವವರು ಎಂದು ಕರೆಯುವುದು ಅಪರಾಧವಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ಅಮಿತ್ ಶರ್ಮಾ ಅವರಿದ್ದ ವಿಭಾಗೀಯ ಪೀಠ ಹೇಳಿತು.

Also Read
ಕಿವಿ ಚುಚ್ಚುವುದು ಮಕ್ಕಳ ವಿರುದ್ಧದ ದೌರ್ಜನ್ಯವಲ್ಲ: ಲೇಖನ ತೆಗೆದುಹಾಕಲು ʼಮಿಂಟ್ʼಗೆ ದೆಹಲಿ ಹೈಕೋರ್ಟ್ ನಿರ್ದೇಶನ

ʼಫ್ಲೈಯಿಂಗ್‌ ಬೀಸ್ಟ್‌ʼ ವ್ಲಾಗ್‌ ಖ್ಯಾತಿಯ ಯೂಟ್ಯೂಬರ್‌ ಗೌರವ್‌ ತನೇಜಾ ಅವರು ತಮ್ಮ ಹೆಣ್ಣು ಮಗುವಿಗೆ ಕಿವಿ ಚುಚ್ಚಿಸಿರುವ ವಿಚಾರವನ್ನು ಮಿಂಟ್‌ ಪತ್ರಿಕೆಯು ಪ್ರಸ್ತಾಪಿಸಿ ಅದು ಮಕ್ಕಳ ದೌರ್ಜನ್ಯ ಎಂದು ಲೇಖನ ಪ್ರಕಟಿಸಿತ್ತು. ಆದರೆ ಹೆಣ್ಣುಮಕ್ಕಳ ಕಿವಿ ಚುಚ್ಚಿಸುವುದು ಮಕ್ಕಳ ದೌರ್ಜನ್ಯವಲ್ಲ. ಮಕ್ಕಳ ದೌರ್ಜನ್ಯ ಎಂದು ಕರೆಯಲು ಗಂಭೀರ ಕೃತ್ಯಗಳು ನಡೆದಿರಬೇಕು ಎಂದಿದ್ದ ಹೈಕೋರ್ಟ್‌ ಏಕಸದಸ್ಯ ಪೀಠ ತನೇಜಾ ವಿರುದ್ಧದ ಲೇಖನಗಳನ್ನು ತೆಗೆದುಹಾಕುವಂತೆ ಪತ್ರಿಕೆಗೆ ಇತ್ತೀಚೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಿಂಟ್‌‌ ಮಾಲೀಕತ್ವ ಹೊಂದಿರುವ ಹಿಂದೂಸ್ತಾನ್‌ ಟೈಮ್ಸ್‌ ಸಂಸ್ಥೆಯು ವಿಭಾಗೀಯ ಪೀಠದ ಮೊರೆ ಹೋಗಿತ್ತು.

ಮಿಂಟ್‌ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅಮಿತ್‌ ಸಿಬಲ್‌ ಏಕಸದಸ್ಯ ಪೀಠ ನೀಡಿದ ಮಧ್ಯಂತರ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಇದನ್ನು ಒಪ್ಪದ ನ್ಯಾಯಾಲಯ ತನೇಜಾ ಅವರ ಮಗುವನ್ನು ಲೇಖನದಲ್ಲಿ ಉಲ್ಲೇಖಿಸಿರುವುದು ಒಪ್ಪುವಂತಹ ವಿಚಾರವಲ್ಲ ಎಂದು ಅಭಿಪ್ರಾಯಪಟ್ಟಿತು.

ಮತ್ತೊಮ್ಮೆ ಏಕಸದಸ್ಯ ಪೀಠವನ್ನು ಸಂಪರ್ಕಿಸಲು ಹಿಂದೂಸ್ತಾನ್‌ ಟೈಮ್ಸ್‌ಗೆ ಸೂಚಿಸಿದ ವಿಭಾಗೀಯ ಪೀಠ ಸಿಪಿಸಿಯ ಆದೇಶ 39ರ ನಿಯಮ 4ರಡಿ ಅರ್ಜಿ ಸಲ್ಲಿಸಿ ಪರಿಹಾರ ಪಡೆಯುವಂತೆ ತಿಳಿಸಿತು. ತನೇಜಾ ಪರ ವಕೀಲರಿಗೆ ನೋಟಿಸ್‌ಗೆ ಹಾಜರಾಗಿ, ವಿಷಯದ ಬಗ್ಗೆ ವಾದಿಸುವಂತೆಯೂ ಮತ್ತು ಪ್ರತಿಕ್ರಿಯೆ ಸಲ್ಲಿಸಲು ಸಮಯ ಕೇಳದಂತೆಯೂ ನ್ಯಾಯಾಲಯ ಹೇಳಿತು.

Kannada Bar & Bench
kannada.barandbench.com