ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ 16ನೇ ಆರೋಪಿಯಾಗಿರುವ ಕೆ ಟಿ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಮೂತ್ರ ಪಿಂಡ ಸೇರಿದಂತೆ ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಿರುವುದರಿಂದ ಹಲವು ಷರತ್ತುಗಳನ್ನು ವಿಧಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆತನಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಅವಕಾಶ ಮಾಡಿಕೊಟ್ಟಿದೆ.
ಬೆಂಗಳೂರಿನ ವಿಶೇಷ ನ್ಯಾಯಾಲಯ ಅನುಮತಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಆರೋಪಿ ನವೀನ್ ಕುಮಾರ್ ಸಲ್ಲಿಸಿದ್ದ ಕ್ರಿಮಿನಲ್ ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಮಾಡಿದೆ.
ವಿಶೇಷ ಸೌಲಭ್ಯ ಹೊಂದಿರುವ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯಲು ಆರೋಪಿ ನವೀನ್‌ಗೆ ಅನುಮತಿಸುವುದು ಅಗತ್ಯ ಎಂದು ನ್ಯಾಯಾಲಯ ಭಾವಿಸಿದೆ. ಸರಿಯಾಗಿ ಆಹಾರ ತೆಗೆದುಕೊಳ್ಳದಿದ್ದರೂ ಅರ್ಜಿದಾರರ ತೂಕ 105 ಕೆಜಿಯಷ್ಟಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಸೌಲಭ್ಯಗಳು ಇಲ್ಲದಿರುವ ಹಿನ್ನೆಲೆಯಲ್ಲಿ ತಕ್ಷಣ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ವಾಸ್ತವಿಕ ಅಂಶಗಳು ಮತ್ತು ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಮನವಿಯು ಅನುಮತಿಗೆ ಅರ್ಹವಾಗಿದೆ. ಹೀಗಾಗಿ, ಕಳೆದ ವರ್ಷದ ಡಿಸೆಂಬರ್ 3ರಂದು ಕರ್ನಾಟಕ ಸಂಘಟಿತ ಅಪರಾಧಗಳ ಕಾಯಿದೆ (ಕೋಕಾ) ಅಡಿಯ ಪ್ರಕರಣಗಳ ತನಿಖೆಗಾಗಿ ರಚಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಹೊರಡಿಸಿರುವ ಆದೇಶವನ್ನು ಬದಿಗೆ ಸರಿಸಲಾಗಿದೆ ಎಂದು ಪೀಠವು ಹೇಳಿದೆ.
ಜೈಲಿನ ಆಸ್ಪತ್ರೆ ಮತ್ತು ಆರೋಪಿ ನವೀನ್ ಅವರ ಹಿಂದಿನ ಆಸ್ಪತ್ರೆ ದಾಖಲೆಗಳನ್ನು ಪರಿಶೀಲಿಸಿದ್ದ ಪೀಠವು ಆತನಿಗೆ ಕೆಳ ಬೆನ್ನು ನೋವು, ಮುಖ ಊದಲು ಬಂದಿರುವುದು, ಪಾದ ಮತ್ತು ಕಾಲುಗಳ ಊತ, ಹಸಿವಾಗದಿರುವುದು ಮತ್ತು ದೇಹದಾದ್ಯಂತ ಕೆಂಪು ಮಚ್ಚೆ ಬಂದಿದೆ. ಅಲ್ಲದೇ ಮೂತ್ರ ಪಿಂಡದ ಸಮಸ್ಯೆ ಇದೆ ಎಂಬುದನ್ನು ಪರಿಗಣಿಸಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಿಂದ ಸುಮಾರು 7.7 ಕಿ ಮೀ ಅಂತರದಲ್ಲಿರುವ ಎಚ್‌ಎಸ್‌ಆರ್ ರಸ್ತೆಯಲ್ಲಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಆರೋಪಿಗೆ ಚಿಕಿತ್ಸೆ ಕೊಡಿಸುವಂತೆ ಜೈಲಿನ ಮೇಲ್ವಿಚಾರಕರಿಗೆ ನ್ಯಾಯಾಲಯವು ಆದೇಶಿಸಿದೆ.
ವೈದ್ಯಕೀಯ ವೆಚ್ಚವನ್ನು ಆರೋಪಿ ಭರಿಸಬೇಕು. ಆತ ಆಸ್ಪತ್ರೆಯಲ್ಲಿರುವಾಗ, ಜೈಲಿನಿಂದ ಆಸ್ಪತ್ರೆಗೆ ತೆರಳುವಾಗ ಮತ್ತು ಅಲ್ಲಿಂದ ವಾಪಸಾಗುವಾಗ ಸೂಕ್ತ ಭದ್ರತೆ ಕಲ್ಪಿಸಬೇಕು. ಭದ್ರತೆಗೆ ತಗುಲುವ ವೆಚ್ಚವನ್ನೂ ಆರೋಪಿ ಭರಿಸಬೇಕಿದ್ದು, ಮುಂಚಿತವಾಗಿ ಒಂದು ಲಕ್ಷ ರೂಪಾಯಿಯನ್ನು ಸರ್ಕಾರಕ್ಕೆ ಭದ್ರತಾ ಠೇವಣಿ ಸಲ್ಲಿಸಬೇಕು. ಖರ್ಚು-ವೆಚ್ಚ ಕಳೆದು ಉಳಿದ ಹಣವನ್ನು ಬಳಿಕ ಆತನಿಗೆ ಮರಳಿಸಬಹುದು ಎಂದು ಪೀಠವು ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಆರೋಪಿ ನವೀನ್ ಅವರ ಕುಟುಂಬಸ್ಥರನ್ನು ಹೊರತುಪಡಿಸಿ ಬೇರಾರೂ ಆತನನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡುವಂತಿಲ್ಲ. ಆಹಾರ ಇತ್ಯಾದಿಗೆ ಸಂಬಂಧಿಸಿದಂತೆ ಜೈಲಿನ ಮೇಲ್ವಿಚಾರಕರು ಸೂಕ್ತ ಎಂದು ಭಾವಿಸಿದ ಯಾವುದೇ ಷರತ್ತು ವಿಧಿಸಲು ಸ್ವತಂತ್ರರಾಗಿದ್ದಾರೆ. ಈ ಷರತ್ತುಗಳನ್ನು ಉಲ್ಲಂಘಿಸಿದರೆ ತಕ್ಷಣ ಆರೋಪಿ ನವೀನ್ ಅವರನ್ನು ಜೈಲಿಗೆ ಕಳುಹಿಸಬೇಕು ಎಂದು ಪೀಠ ಆದೇಶದಲ್ಲಿ ಹೇಳಲಾಗಿದೆ.
ಸರ್ಕಾರವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್ ಎನ್ ನಾಯಕ್ ಅವರು ಆರೋಪಿ ನವೀನ್ ವಿರುದ್ಧ ಗಂಭೀರ ಆರೋಪಗಳಿವೆ. ಆತನನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿದರೆ ಅಲ್ಲಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಸರ್ಕಾರಿ ಆಸ್ಪತ್ರೆಗಳಾದ ಸಂಜಯ್ ಗಾಂಧಿ ಆಸ್ಪತ್ರೆ ಅಥವಾ ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಬಹುದಾಗಿದೆ. ಹೀಗಾಗಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಅನುಮತಿಸಬಾರದು ಎಂದು ವಿರೋಧಿಸಿದ್ದರು.
ಆರೋಪಿಯನ್ನು ಪ್ರತಿನಿಧಿಸಿದ್ದ ವಕೀಲ ಶ್ರೀಧರ್ ಪ್ರಭು ಅವರು “ನವೀನ್ ಕಿಡ್ನಿ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜೈಲಿನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಜೈಲು ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯದೇ ಇರುವುದರಿಂದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿಸಬೇಕು. ಎಲ್ಲಾ ವೆಚ್ಚವನ್ನು ಆರೋಪಿ ನವೀನ್ ಭರಿಸಲಿದ್ದಾರೆ” ಎಂದಿದ್ದರು.
ಆರೋಪಿ ನವೀನ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 109 (ಕುಮ್ಮಕ್ಕು), 114 (ಅಪರಾಧ ಸಂದರ್ಭದಲ್ಲಿ ಉಪಸ್ಥಿತಿ), 118 (ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಗುರಿಯಾಗುವ ಯೋಜನೆಯ ವಿನ್ಯಾಸ) 302 (ಕೊಲೆ) ಜೊತೆಗೆ 120ಬಿ (ಕ್ರಿಮಿನಲ್ ಪಿತೂರಿ) ಹಾಗೂ ಕೋಕಾ ಕಾಯಿದೆಯ ಸೆಕ್ಷನ್‌ಗಳಾದ 3(1)(ಐ), 3(2), 3(3) ಮತ್ತು 3(4) (ಸಂಘಟಿತ ಅಪರಾಧ) ಪ್ರಕರಣ ದಾಖಲಿಸಲಾಗಿದ್ದು, ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಆರೋಪಿ ನವೀನ್ ಚಿಂತಕ ಕೆ ಎಸ್ ಭಗವಾನ್ ಹತ್ಯೆ ಸಂಚಿನ ಪ್ರಕಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಗೌರಿ ಹತ್ಯೆಯಲ್ಲಿ ಮೊದಲ ಆರೋಪಿಯಾಗಿರುವ ಮಹಾರಾಷ್ಟ್ರದ ಅಮೋಲ್ ಕಾಳೆ ಅಲಿಯಾಸ್ ಬಾಯಿಸಾಬ್ ಅಲಿಯಾಸ್ ಅರವಿಂದ ರಾಮಚಂದ್ರಗೆ ಆಪ್ತ ಗೆಳೆಯನಾಗಿದ್ದ ಎನ್ನಲಾಗಿದೆ.