ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒತ್ತಡದಿಂದ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದೇನೆ. ಪೊಲೀಸರು ಹೇಳಿಕೊಟ್ಟ ವಿಚಾರಗಳನ್ನು ನ್ಯಾಯಾಧೀಶರ ಮುಂದೆ ಹೇಳಿದ್ದೇನೆ ಎಂದು ಪಡುಬಿದ್ರೆಯ 35 ವರ್ಷದ ಸಂದೇಶ್ ಶೆಟ್ಟಿ ಎಂಬವರು ತಿಳಿಸಿದ್ದಾರೆ.
ಬೆಂಗಳೂರಿನ ವಿಶೇಷ ನ್ಯಾಯಾಧೀಶರಾದ ಬಿ ಮುರುಳೀಧರ ಪೈ ಅವರು ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ವಿಚಾರಣೆ ಮತ್ತು ಪಾಟೀ ಸವಾಲುಗಳನ್ನು ದಾಖಲಿಸಿಕೊಂಡಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿತವಾಗಿರುವ 378ನೇ ಸಾಕ್ಷಿಯಾಗಿರುವ ಯುವರಾಜ್ ಕುಲಾಲ್ ಮತ್ತು ನಾನು ಒಂದೇ ಊರಿನವರು ಹಾಗೂ ಸ್ನೇಹಿತರು. ಯುವರಾಜ್ ಮತ್ತು ನಾನು ಯಾವುದೇ ಸಂಘಟನೆಗೆ ಸೇರಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ನ್ಯಾಯಾಲಯದಲ್ಲಿ ಸಿಆರ್‌ಪಿಸಿ ಸೆಕ್ಷನ್ 164ರ ಅಡಿ ನ್ಯಾಯಾಧೀಶರ ಮುಂದೆ ಒತ್ತಡದಿಂದ ಹೇಳಿಕೆ ನೀಡಿದ್ದೇನೆ. ಪೊಲೀಸರು ಹೇಳಿಕೊಟ್ಟಿದ್ದ ವಿಚಾರಗಳನ್ನು ನ್ಯಾಯಾಧೀಶರ ಮುಂದೆ ನೀಡಿದ್ದೆ. ಪೊಲೀಸರು ನನ್ನನ್ನು ಸಿಐಡಿ ಕಚೇರಿಗೆ ಕರೆಸಿ, ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲಿಯೂ ಸಿಐಡಿ ಪೊಲೀಸರು ಹೇಳಿಕೊಟ್ಟ ರೀತಿಯಲ್ಲಿ ಉತ್ತರಿಸಿದ್ದೆ ಎಂದು ತಿಳಿಸಿದ್ದಾರೆ.
ಸಾಕ್ಷಿ ನುಡಿಯುವುದಕ್ಕೂ ಮುನ್ನ ಪೊಲೀಸರು ಸಂಪರ್ಕಿಸಿದ್ದು, ತಾವು ಸೂಚಿಸಿರುವಂತೆ ಸಾಕ್ಷಿ ನುಡಿಯಬೇಕು ಎಂದು ಬೆದರಿಕೆ ಹಾಕಿದ್ದರು. ಪೊಲೀಸರ ನಿರ್ದೇಶನದಂತೆ ನಡೆಯದಿದ್ದರೆ ಬೇರೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಹೇಳಿದ್ದಾರೆ. ಸ್ನೇಹಿತ ಯುವರಾಜ್ ಕಲಾಲ್‌ಗೂ ಇದೇ ರೀತಿಯಲ್ಲಿ ಪೊಲೀಸರು ಬೆದರಿಕೆ ಹಾಕಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
“ಪ್ರಾಸಿಕ್ಯೂಷನ್ ಪ್ರಕಾರ ಸಂದೇಶ್ ಶೆಟ್ಟಿಯು ಸನಾತನ ಸಂಸ್ಥೆಯ ಜೊತೆ ಗುರುತಿಸಿಕೊಂಡಿದ್ದು, ಸುರೇಶ್ ಎಂಬಾತನ ಮೂಲಕ ಸಂದೇಶ್‌ಗೆ ಅಮೋಲ್ ಕಾಳೆಯ ಪರಿಚಯವಾಗಿರುತ್ತದೆ. ಧ್ಯಾನ, ಜಪ, ಪೂಜಾ, ಹಿಂದೂ, ದೇಶ, ಧರ್ಮ, ಬಂದೂಕು ತರಬೇತಿಯಲ್ಲಿ ಈತ ನಿರತನಾಗಿರುತ್ತಾನೆ. ಸಂದೇಶ್ ಶೆಟ್ಟಿಯನ್ನು ಅಮೋಲ್ ಕಾಳೆಯು ಪುಣೆಗೆ ಕರೆದುಕೊಂಡು ಹೋಗಿರುತ್ತಾನೆ. ಇಲ್ಲಿ ಮೂರು ದಿನ ಇರಲು ಕಾಳೆ ಹೇಳಿರುತ್ತಾನೆ. ಆದರೆ, ಸಂದೇಶ್ ಶೆಟ್ಟಿ ಒಂದು ದಿನ ಅಲ್ಲಿ ಉಳಿದುಕೊಂಡು ಬಂದೂಕು ತರಬೇತಿ ಪಡೆದು ಬಂದಿರುವುದಾಗಿ ಸಿಆರ್‌ಸಿಪಿ ಸೆಕ್ಷನ್ 164ರ ಅಡಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾನೆ. ಈಗ ಸಾಕ್ಷಿ ವಿಚಾರಣೆಯ ವೇಳೆ ಸುಳ್ಳು ಹೇಳಿದ್ದಾನೆ. ಈ ಸಂಬಂಧ ಆತ ನ್ಯಾಯಾಲಯಕ್ಕೆ ಸುಳ್ಳು ಹೇಳಿದ್ದಾನೆ ಎಂದು ಅರ್ಜಿ ಹಾಕಲಾಗುವುದು” ಎಂದು ವಿಶೇಷ ಸರ್ಕಾರಿ ಅಭಿಯೋಜಕರಾದ ಎಸ್ ಬಾಲಕೃಷ್ಣನ್ ಅವರು ಬಾರ್ ಅಂಡ್ ಬೆಂಚ್‌ಗೆ ತಿಳಿಸಿದ್ದಾರೆ.
“ಗೌರಿ ಹತ್ಯೆ ಪ್ರಕರಣದಲ್ಲಿ ಒಟ್ಟು 482 ಸಾಕ್ಷಿಗಳಿದ್ದು, ಇದುವರೆಗೆ 82 ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದೆ. ಒಂದು ಮಹಜರ್‌ಗೆ ಇಬ್ಬರು ಸಾಕ್ಷಿಗಳಿರುತ್ತಾರೆ. ಇದರಲ್ಲಿ ಒಂದು ಸಾಕ್ಷಿ ಪರಿಶೀಲಿಸಿ ಇನ್ನೊಬ್ಬರನ್ನು ಕೈಬಿಡಲಾಗುತ್ತದೆ. ಈ ನೆಲೆಯಲ್ಲಿ ಈಗ 164 ಸಾಕ್ಷಿಗಳ ವಿಚಾರಣೆ ಮುಗಿದಂತಾಗಿದೆ” ಎಂದು ಬಾಲಕೃಷ್ಣನ್ ತಿಳಿಸಿದರು.
ಪ್ರಕರಣದ ಹಿನ್ನೆಲೆ: 2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಅವರು ಕೆಲಸ ಮುಗಿಸಿ ಮನೆಗೆ ಮರಳಿದ ವೇಳೆ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಹತ್ಯೆಯ ಸಂಚು ರೂಪಿಸಿದ ಪ್ರಮುಖ ರೂವಾರಿ ಎಂದು ಅಮೋಲ್ ಕಾಳೆ ಮೇಲೆ ಆರೋಪವಿದ್ದರೆ, ಗುಂಡು ಹಾರಿಸಿದ ಆರೋಪ ಪರಶುರಾಮ್ ವಾಗ್ಮೋರೆ ಮೇಲೂ ಹಾಗೂ ಆತನನ್ನು ಕೂರಿಸಿಕೊಂಡು ಬೈಕ್ ಚಲಾಯಿಸಿ ತಪ್ಪಿಸಿಕೊಳ್ಳಲು ನೆರವಾದ ಆರೋಪವು ಗಣೇಶ್ ಮಿಸ್ಕಿನ್ ಮೇಲೂ ಇದೆ.