[ಗೌರಿ ಹತ್ಯೆ ಪ್ರಕರಣ] ಹೈಕೋರ್ಟ್‌ ಆದೇಶಕ್ಕೆ ತಡೆ ಕೋರಿದ್ದ ಮನವಿಯನ್ನು ಸೆ. 8ಕ್ಕೆ ಪಟ್ಟಿ ಮಾಡಲು ಸೂಚಿಸಿದ ಸುಪ್ರೀಂ

ಆರೋಪಿ ಮೋಹನ್ ನಾಯಕ್ ವಿರುದ್ಧ ಕೋಕಾ ಕಾಯಿದೆಯಡಿಯ ಅಪರಾಧಗಳನ್ನು ಕೈಬಿಡಲಾಗಿದೆ. ಕೃತ್ಯ ಎಸಗುವ ಮೊದಲು ಮತ್ತು ನಂತರ ಕೊಲೆಗಾರರಿಗೆ ಆಶ್ರಯ ನೀಡುವಲ್ಲಿ ನಾಯಕ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಎಂದು ಮೇಲ್ಮನವಿಯಲ್ಲಿ ತಿಳಿಸಲಾಗಿತ್ತು.
[ಗೌರಿ ಹತ್ಯೆ ಪ್ರಕರಣ] ಹೈಕೋರ್ಟ್‌ ಆದೇಶಕ್ಕೆ ತಡೆ ಕೋರಿದ್ದ ಮನವಿಯನ್ನು ಸೆ. 8ಕ್ಕೆ ಪಟ್ಟಿ ಮಾಡಲು ಸೂಚಿಸಿದ ಸುಪ್ರೀಂ
Published on

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮೋಹನ್ ನಾಯಕ್ ವಿರುದ್ಧ ಕೋಕಾ (ಕೆಸಿಒಸಿಎ) ಕಾಯಿದೆ ಅಡಿ ಮಾಡಲಾಗಿದ್ದ ಆರೋಪ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶ ತಡೆಹಿಡಿಯಲು ಕೋರಿ ಗೌರಿ ಅವರ ಸಹೋದರಿ ಕವಿತಾ ಲಂಕೇಶ್ ಸಲ್ಲಿಸಿದ್ದ ಮನವಿಯ ಅಂತಿಮ ವಿಲೇವಾರಿ ಮಾಡಲು ನಿರ್ಧರಿಸಿರುವ ಸುಪ್ರೀಂಕೋರ್ಟ್‌ ಪ್ರಕರಣವನ್ನು ಸೆ. 8ಕ್ಕೆ ಪಟ್ಟಿ ಮಾಡಲು ಸೂಚಿಸಿದೆ.

ಮೋಹನ್ ನಾಯಕ್ ವಿರುದ್ಧದ ಆರೋಪ ಕೈಬಿಡದಂತೆ ಕವಿತಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎ.ಎಂ ಖಾನ್ವಿಲ್ಕರ್ ಮತ್ತು ಸಂಜೀವ್ ಖನ್ನಾ ಅವರಿದ್ದ ಪೀಠ ಇಂದು ವಿಚಾರಣೆ ನಡೆಸಿತು. ಕರ್ನಾಟಕ ಹೈಕೋರ್ಟ್‌ ಏಪ್ರಿಲ್ 23ರಂದು ನೀಡಿದ್ದ ಆದೇಶಕ್ಕೆ ತಡೆ ನೀಡಿದ್ದ ಪೀಠ ಕೆಸಿಒಸಿಎ ಕಾಯಿದೆ ಕೈಬಿಡದಂತೆ ಜೂನ್ 29 ರಂದು ಮಧ್ಯಂತರ ಆದೇಶ ನೀಡಿತ್ತು.

ಮೋಹನ್ ನಾಯಕ್ ವಿರುದ್ಧ 2000ರ ಕೋಕಾ ಕಾಯಿದೆಯ ಸೆಕ್ಷನ್ 3 (1) (ಐ), 3 (2), 3 (3) ಮತ್ತು 3 (4) ರ ಅಡಿಯಲ್ಲಿ ಅಪರಾಧಗಳನ್ನು ಕೈಬಿಡಲಾಗಿದೆ. ಕೃತ್ಯ ಎಸಗುವ ಮೊದಲು ಮತ್ತು ನಂತರ ಕೊಲೆಗಾರರಿಗೆ ಆಶ್ರಯ ನೀಡುವಲ್ಲಿ ನಾಯಕ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಎಂದು ಮೇಲ್ಮನವಿಯಲ್ಲಿ ತಿಳಿಸಲಾಗಿತ್ತು.

Also Read
ಪತ್ರಕರ್ತೆ ಗೌರಿ ಹತ್ಯೆ: ಕೋಕಾ ಕಾಯಿದೆಯಡಿ ಆರೋಪ ಕೈ ಬಿಟ್ಟಿರುವುದನ್ನು ʼಸುಪ್ರೀಂʼನಲ್ಲಿ ಪ್ರಶ್ನಿಸಿದ ಕವಿತಾ ಲಂಕೇಶ್

"ಅಪರಾಧಕ್ಕೆ ಮೊದಲು ಮತ್ತು ನಂತರ ಕೊಲೆಗಾರರಿಗೆ ಆಶ್ರಯ ನೀಡುವಲ್ಲಿ ನಾಯಕ್ ಸಕ್ರಿಯವಾಗಿದ್ದ ಮತ್ತು ಕೃತ್ಯ ಎಸಗಿದ ಬಳಿಕ ಹಲವಾರು ಪಿತೂರಿ, ದುಷ್ಪ್ರೇರಣೆ, ಸಂಚು, ತಂತ್ರಗಾರಿಕೆಯಲ್ಲಿ ತೊಡಗಿಕೊಂಡಿದ್ದ ಎಂಬುದು ತನಿಖೆಯಿಂದ ಸಾಬೀತಾಗಿದೆ. ಆದ್ದರಿಂದ, ಆತ ನಿರಂತರವಾಗಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾನೆ ಎನ್ನುವುದು ತಿಳಿಯುತ್ತದೆ. ಗೌರಿ ಲಂಕೇಶ್ ಅವರ ಹತ್ಯೆಯಲ್ಲಿ ಪ್ರತಿವಾದಿ ನಂ. 6 ಭಾಗಿಯಾಗಿರುವುದಕ್ಕೆ ಮತ್ತು ಆರಂಭದಿಂದಲೂ ಸಂಘಟಿತ ಅಪರಾಧ ಗುಂಪಿನ ಭಾಗವಾದ ಒಂದನೇ ಆರೋಪಿ ಅಮೋಲ್‌ ಕಾಳೆ ಜೊತೆ ಹಾಗೂ ಎಂಟನೇ ಆರೋಪಿ ಶಸ್ತ್ರಾಸ್ತ್ರ ತರಬೇತುದಾರ ರಾಜೇಶ್‌ ಡಿ ಬಂಗೇರ ಜೊತೆ ನಿಕಟ ಸಂಪರ್ಕದಲ್ಲಿದ್ದು, ಆತ ಪ್ರಕರಣದೊಂದಿಗೆ ನಂಟು ಹೊಂದಿರುವುದನ್ನು ಸಾಬೀತುಪಡಿಸಲು ತನಿಖಾ ಸಂಸ್ಥೆ ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದೆ” ಎಂದು ಕವಿತಾ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಲಾಗಿತ್ತು.

ಕೋಕಾ ಕಾಯಿದೆ 2000ರ ಸೆಕ್ಷನ್ 24ನ್ನು ಪರಿಶೀಲಿಸದೆ ಹೈಕೋರ್ಟ್‌ ತಪ್ಪೆಸಗಿದೆ ಎಂದು ಕೂಡ ಅರ್ಜಿಯಲ್ಲಿ ತಿಳಿಸಲಾಗಿತ್ತು. ಕಾಯಿದೆ ಪ್ರಕಾರ ಎಡಿಜಿಪಿ ಶ್ರೇಣಿಗಿಂತ ಕೆಳಗಿರುವ ಯಾವುದೇ ಅಧಿಕಾರಿ ಪೂರ್ವಾನುಮತಿ ನೀಡಬಾರದು ಎನ್ನಲಾಗಿದ್ದು ಇದನ್ನು ಪ್ರಸ್ತುತ ಪ್ರಕರಣದಲ್ಲಿ ಉಲ್ಲಂಘಿಸಲಾಗಿದೆ ಎನ್ನಲಾಗಿದೆ.

Kannada Bar & Bench
kannada.barandbench.com