[ಗೌರಿ ಹತ್ಯೆ ಪ್ರಕರಣ] ವಿಶೇಷ ವಿಚಾರಣೆ ನಡೆಸಲು 4 ಆರೋಪಿಗಳು ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ತನಿಖೆಗೆ ಸಂದರ್ಭದಲ್ಲಿ ಆರೋಪಿಗಳಿಗೆ ಪೊಲೀಸರು ದೈಹಿಕ ಹಿಂಸೆ ನೀಡಿದ್ದಾರೆ ಎನ್ನಲಾಗಿದೆ. ಆದರೆ,‌ ಈಗಾಗಲೇ ಪ್ರಕರಣದ ತನಿಖೆ ಪೂರ್ಣಗೊಂಡು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ‌ದ್ದಾರೆ. ಆದ ಕಾರಣ ಅವರ ಮನವಿ ಪರಿಗಣಿಸಲಾಗದು ಎಂದಿರುವ ನ್ಯಾಯಾಲಯ.
Gauri Lankesh and Karnataka High Court
Gauri Lankesh and Karnataka High Court

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿಸಿದ ನಂತರ ವಿಚಾರಣೆ ಸಂದರ್ಭದಲ್ಲಿ ಪೊಲೀಸರು ತಮಗೆ ದೈಹಿಕವಾಗಿ ಸಾಕಷ್ಟು ಹಿಂಸೆ ನೀಡಿದ್ದು, ಆ ಬಗ್ಗೆ ವಿಶೇಷ ವಿಚಾರಣೆ ನಡೆಸಿ ವರದಿ ಸಲ್ಲಿಸುವುದಕ್ಕೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಪ್ರಕರಣದ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಮಂಗಳವಾರ ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ.

ಆರೋಪಿಗಳಾದ ಸುಜಿತ್ ಕುಮಾರ್, ಮನೋಹರ ಯಡವೆ, ಅಮೋಲ್ ಕಾಳೆ ಮತ್ತು ಅಮಿತ್ ರಾಮಚಂದ್ರ ದಿಗ್ವೇಕರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್‌ ಎಸ್‌ ಸಂಜಯಗೌಡ ಅವರ ಪೀಠ ತಿರಸ್ಕರಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ತನಿಖೆಗೆ ಸಂದರ್ಭದಲ್ಲಿ ಆರೋಪಿಗಳಿಗೆ ಪೊಲೀಸರು ದೈಹಿಕ ಹಿಂಸೆ ನೀಡಿದ್ದಾರೆ ಎನ್ನಲಾಗಿದೆ. ಆದರೆ,‌ ಈಗಾಗಲೇ ಪ್ರಕರಣದ ತನಿಖೆ ಪೂರ್ಣಗೊಂಡು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ‌ದ್ದಾರೆ. ಆದ ಕಾರಣ ಅವರ ಮನವಿ ಪರಿಗಣಿಸಲಾಗದು ಎಂದು ನ್ಯಾಯಾಲಯ ಹೇಳಿದೆ.

ಗೌರಿ ಲಂಕೇಶ್‌ ಅವರು 2018ರಲ್ಲಿ ಕೊಲೆಯಾಗಿದ್ದರು. ನಂತರ ಪ್ರಕರಣ ಸಂಬಂಧ ಅರ್ಜಿದಾರರನ್ನು ಕರ್ನಾಟಕ ಹಾಗೂ ಹೊರ ರಾಜ್ಯದ ವಿವಿಧ ಪ್ರದೇಶಗಳಿಂದ ಪೊಲೀಸರು ಬಂಧನ ಮಾಡಿದ್ದರು.

Also Read
ಗೌರಿ ಕೊಲೆ ಪ್ರಕರಣ: ಆರೋಪಿಗಳಾದ ಅಮಿತ್‌, ಸುರೇಶ್‌, ನವೀನ್‌ ಕುಮಾರ್‌ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು, ನಮ್ಮನ್ನು ಬಂಧಿಸಿದ ವೇಳೆ ಕಾನೂನಿನ ರೀತಿ ನಮ್ಮ ಕುಟುಂಬ ಸದಸ್ಯರು ಅಥವಾ ಹತ್ತಿರದವರಿಗಾಗಲಿ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ. ಬಂಧನದ ನಂತರ ಪೊಲೀಸ್‌ ಕಸ್ಟಡಿಯಲ್ಲಿ ತಮ್ಮನನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಂಡಿದ್ದಾರೆ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ. ಇದು ಕಾನೂನು ಬಾಹಿರ ಕ್ರಮವಾಗಿದೆ. ಈ ಕುರಿತಂತೆ ವಿಶೇಷ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ರಾಜ್ಯ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.

Kannada Bar & Bench
kannada.barandbench.com