ಬಾಂಬೆ ಹೈಕೋರ್ಟ್, ಸುಪ್ರೀಂನಲ್ಲಿ ನವಲಖಾಗೆ ರತ್ನಗಂಬಳಿ ಹಾಸಲಾಯಿತು: ಸೆಂಥಿಲ್ ಪ್ರಕರಣದ ವಾದ ಮಂಡನೆ ವೇಳೆ ಎಸ್‌ಜಿ

ಸೆಂಥಿಲ್ ಪ್ರಕರಣದ ವಾದ ಮಂಡನೆ ವೇಳೆ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿದ್ದ ನವಲಖಾ ಅವರಿಗೆ ವೈದ್ಯಕೀಯ ಕಾರಣಗಳಿಗಾಗಿ ಪರಿಹಾರ ನೀಡಿದ್ದನ್ನು ಉಲ್ಲೇಖಿಸಿದ ಹಿರಿಯ ವಕೀಲ ಎನ್‌ ಕೆ ಕೌಲ್ ಅವರ ವಾದಕ್ಕೆ ಎಸ್‌ಜಿ ಪ್ರತಿಕ್ರಿಯಿಸಿದರು.
Tushar Mehta
Tushar Mehta

ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿ, ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ರತ್ನಗಂಬಳಿ ಹಾಸಲಾಯಿತು ಎಂದು ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಆರೋಪಿಸಿದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ಅವರನ್ನು ಬೈಪಾಸ್ ಶಸ್ತ್ರಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್‌ ಆದೇಶದ ವಿರುದ್ಧ ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ವಾದಿಸುವ ವೇಳೆ ಎಸ್‌ಜಿ ಅವರು ಗೌತಮ್‌ ನವಲಖಾ ಪ್ರಕರಣವನ್ನು ಸ್ಮರಿಸಿದರು.

Also Read
ಸಚಿವ ಸೆಂಥಿಲ್ ಪ್ರಕರಣ: ಮದ್ರಾಸ್ ಹೈಕೋರ್ಟ್ ತೀರ್ಪಿನತ್ತ ಸುಪ್ರೀಂ ಚಿತ್ತ; ಇ ಡಿ ಅರ್ಜಿ ವಿಚಾರಣೆ ಮುಂದೂಡಿಕೆ

ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ನವಲಖಾ ಅವರನ್ನು ವೈದ್ಯಕೀಯ ಕಾರಣಗಳಿಗಾಗಿ ತಲೋಜಾ ಜೈಲಿನ ಬದಲಿಗೆ ಗೃಹಬಂಧನದಲ್ಲಿರಿಸಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿತ್ತು. ಇದನ್ನು ಹಿರಿಯ ವಕೀಲ ನೀರಜ್‌ ಕಿಶನ್‌ ಕೌಲ್‌ ಪ್ರಸ್ತಾಪಿಸಿದಾಗ ಎಸ್‌ಜಿ ಅವರು "ನವಲಖಾ ತುಂಬಾ ಅದೃಷ್ಟಶಾಲಿ ಅವರಿಗೆ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳೆರಡರಲ್ಲೂ ರತ್ನಗಂಬಳಿಯ ಸ್ವಾಗತ ದೊರೆಯಿತು" ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಕೌಲ್‌ ದೇಶದ ಸರ್ವೋಚ್ಚ ನ್ಯಾಯಾಲಯ, ನವಲಖಾ ಅವರ ಹಕ್ಕುಗಳ ಬಗ್ಗೆ ತೀರ್ಪು ನೀಡಿದೆ. ಆದರೆ ಆದ್ಯತೆ ಮೇರೆಗೆ ನವಲಖಾ ಚಿಕಿತ್ಸೆ ಪಡೆದಿದ್ದಾರೆ ಎಂದು ಎಸ್‌ಜಿ ಬಿಂಬಿಸುವುದು ದುರದೃಷ್ಟಕರ ಎಂದು ಹೇಳಿದರು.

ಆಗ ಎಸ್‌ಜಿ "ಹೌದು ನಾನು ಹೇಳಿದ ಪ್ರತಿ ಪದದ ಅರ್ಥ… ನವಲಖಾ ಅವರನ್ನು ಕುರಿತಲ್ಲ ಆದೇಶವನ್ನು ಕುರಿತದ್ದಾಗಿದೆ" ಎಂದರು.

ಬಾಲಾಜಿ ಅವರ ಪತ್ನಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ಪುರಸ್ಕರಿಸುವಲ್ಲಿ ಮದ್ರಾಸ್ ಹೈಕೋರ್ಟ್ ಎಡವಿದೆ ಎಂದು ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದಾಗ ಹೀಗೆ ಗೌತಮ್‌ ನವಲಖಾ ಪ್ರಕರಣ ಪ್ರಸ್ತಾಪವಾಯಿತು.

Related Stories

No stories found.
Kannada Bar & Bench
kannada.barandbench.com