ಕೇಂದ್ರ ಸರ್ಕಾರ ಇತ್ತೀಚೆಗೆ ನಿಷೇಧಿಸಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಮಾಜಿ ಮುಖ್ಯಸ್ಥ ಇ ಅಬೂಬಕರ್ ಅವರನ್ನು ಕ್ಯಾನ್ಸರ್ ಚಿಕಿತ್ಸೆಗಾಗಿ ಏಮ್ಸ್‌ಗೆ ಕರೆದೊಯ್ಯುವಾಗ ಅವರ ಜೊತೆ ಇರಲು ಅವರ ಮಗನಿಗೆ ದೆಹಲಿ ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ.
ಆದರೆ ಅಬೂಬಕರ್ ಅವರನ್ನು ಜೈಲಿನ ಬದಲು ಗೃಹ ಬಂಧನದಲ್ಲಿರಿಸಲು ಅವಕಾಶ ನೀಡುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ತಲ್ವಂತ್ ಸಿಂಗ್ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಾಖಾ ಅವರಿಗೆ ಗೃಹ ಬಂಧನದಲ್ಲಿರಲು ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಮಾದರಿಯಾಗಿ ಬಳಸುವಂತಿಲ್ಲ ಎಂದು ಹೈಕೋರ್ಟ್ ಹೇಳಿತು. ಗೃಹ ಬಂಧನದಲ್ಲಿರಿಸುವಂತೆ ಮಾಡಿದ್ದ ಮನವಿಯನ್ನು ಕೂಡ ನ್ಯಾಯಾಲಯ ನವೆಂಬರ್ 30ರಂದು ತಿರಸ್ಕರಿಸಿತ್ತು.
“ನನಗೆ 70 ವರ್ಷ ಆಗಿದೆ ಎಂದು ನೀವಿಲ್ಲಿ ಬಂದು ಹೇಳುವುದಕ್ಕೆ ಗೌತಮ್ ನವಲಾಖಾ ಮಾದರಿಯಾಗುವಂತಿಲ್ಲ. ನಿಮ್ಮನ್ನು ಗೃಹ ಬಂಧನದಲ್ಲಿಡಲು ಸಾಧ್ಯವಿಲ್ಲ. ಈ ನ್ಯಾಯಾಲಯಕ್ಕೆ ಇಲ್ಲದ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇದೆ. ನಿಮ್ಮ ಆರೋಗ್ಯ ಸ್ಥಿತಿಯ ಹಿನ್ನೆಲೆಯಲ್ಲಿ ನೀವು ಆಸ್ಪತ್ರೆಗೆ ದಾಖಲಾಗಬೇಕು ಎಂದು ಹೇಳುವುದಾದರೆ ನಾವು ಅದಕ್ಕೆ ನಿರ್ದೇಶನ ನೀಡಬಹುದು” ಎಂದು ಹೈಕೋರ್ಟ್ ತಿಳಿಸಿತು.
ಅಬೂಬಕರ್ ಪರ ವಕೀಲ ಅದಿತ್ ಎಸ್ ಪೂಜಾರಿ ಅವರ ವಾದ ಪುರಸ್ಕರಿಸಿದ ನ್ಯಾಯಾಲಯ ಆಸ್ಪತ್ರೆಗೆ ತೆರಳಲಿರುವ ಅವರರ ಜೊತೆ ಅವರ ಮಗನೂ ಇರಲು ಅವಕಾಶ ಮಾಡಿಕೊಟ್ಟಿತು.
ಅಬೂಬಕರ್ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ತಿಹಾರ್ ಜೈಲು ಮತ್ತು ಏಮ್ಸ್ ವೈದ್ಯಾಧಿಕಾರಿಗಳು ವರದಿ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ. ಜನವರಿ 5ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.