ಪುರುಷ ಪ್ರಧಾನತೆ ತೊಡೆದುಹಾಕಲು ಸಶಸ್ತ್ರ ಪಡೆಗಳಲ್ಲಿನ ಲಿಂಗ ಸಮಾನತೆ ವೇಗ ಒದಗಿಸುತ್ತದೆ: ನ್ಯಾ. ಹಿಮಾ ಕೊಹ್ಲಿ

ಮಹಿಳೆಯರಿಗೆ ಪ್ರಮುಖ ಸ್ಥಾನ ಮತ್ತು ಕಮಾಂಡಿಂಗ್ ಹುದ್ದೆ ನೀಡುವುದು ಸಮಾಜದ ಎಲ್ಲಾ ಯುವತಿಯರಿಗೆ ಅವರು ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲಷ್ಟೇ ಅಲ್ಲದೆ ಯುದ್ಧರಂಗವನ್ನು ಮುನ್ನಡೆಸಬಹುದು ಎಂಬ ಸಂದೇಶ ನೀಡುತ್ತದೆ ಎಂದು ಅವರು ಹೇಳಿದರು.
Justice Hima Kohli
Justice Hima Kohli

ಸಶಸ್ತ್ರ ಪಡೆಗಳಲ್ಲಿ ಮಾದರಿ ಮಹಿಳೆಯರನ್ನು ಅನ್ವೇಷಿಸಿ ಅವರನ್ನು ಗುರುತಿಸುವುದು, ಸಾರ್ವಜನಿಕವಾಗಿ ಪ್ರಶಂಸಿಸುವುದರಿಂದ ಸಶಸ್ತ್ರ ಪಡೆಗಳ ಎಲ್ಲಾ ಸದಸ್ಯರಿಗೆ ಹೆಚ್ಚು ಒಳಗೊಳ್ಳುವಿಕೆ ಮತ್ತು ಸಮಾನ ವ್ಯವಸ್ಥೆ ಒದಗಿಸುವಲ್ಲಿ ಮಹತ್ತರ ಕೆಲಸ ಮಾಡಿದಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹಿಮಾ ಕೊಹ್ಲಿ ತಿಳಿಸಿದರು.

ಸೇನಾ ಕಾನೂನು ಸಂಸ್ಥೆ ನವದೆಹಲಿಯ ಮಾಣೆಕ್‌ ಶಾ ಸಭಾಂಗಣದಲ್ಲಿ  ಶನಿವಾರ ಆಯೋಜಿಸಿದ್ದ “ಸೇನಾ ನ್ಯಾಯಶಾಸ್ತ್ರದ ವಿಕಸನ ಮತ್ತು ಭವಿಷ್ಯ- ಭಾರತೀಯ ಸೇನಾ ದೃಷ್ಟಿಕೋನ” ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಸಶಸ್ತ್ರ ಪಡೆಗಳಲ್ಲಿ ಹಾಗೆ ಸಮಾನತೆ ಒದಗಿಸುವುದು ಬಹುಸ್ತರದ ಪರಿಣಾಮ ಬೀರಲಿದ್ದು ಸಮಾಜದೊಂದಿಗೆ ಮಹಿಳೆಯರು ಹೆಜ್ಜೆ ಹಾಕಲು, ಲಿಂಗ ಸಮಾನತೆ ತರಲು ಹಾಗೂ ಪುರುಷ ಪ್ರಧಾನತೆ ತೊಡೆದು ಹಾಕಲು ವೇಗ ಒದಗಿಸುತ್ತದೆ ಎಂದು ಅವರು ಹೇಳಿದರು.

ಸೇನಾಪಡೆಗಳಲ್ಲಿ ಮಹಿಳೆಯರ ಶಾಶ್ವತ ಕಮಿಷನ್‌ ಒದಗಿಸುವ ಇತ್ತೀಚಿನ ಸುಪ್ರೀಂ ಕೋರ್ಟ್‌ ತೀರ್ಪಿನ ಮಹತ್ವ ವಿವರಿಸಿದ ಅವರು  “ಈ ತೀರ್ಪು ಸಶಸ್ತ್ರ ಪಡೆಗಳಲ್ಲಿ ವೃತ್ತಿಜೀವನ ಮುಂದುವರಿಸುವ ಆಯ್ಕೆಯನ್ನು ಸಕ್ರಿಯವಾಗಿ ಪರಿಗಣಿಸುತ್ತಿರುವ ಯುವ ಮತ್ತು ಮಹತ್ವಾಕಾಂಕ್ಷಿ ಮಹಿಳೆಯರಿಗೆ ಹೊಸ ಅವಕಾಶಗಳ ಜಗತ್ತನ್ನು ತೆರೆದಿದೆ. ಈಗ, ಮಾನದಂಡವನ್ನು ಪೂರೈಸಿದರೆ ತಮ್ಮ ವೃತ್ತಿಜೀವನವನ್ನು ಮಧ್ಯದಲ್ಲೇ  ಮೊಟಕುಗೊಳಿಸದೆ ಶಾಶ್ವತ ಕಮಿಷನ್‌ ಆಗಿ ರೂಪುಗೊಳ್ಳಬಹುದು ಎಂಬ ಭರವಸೆ ಅವರಿಗೆ ಮೂಡಿದೆ" ಎಂದರು.

ಭಾರತೀಯ ಸೇನೆ ವೈವಿಧ್ಯವನ್ನು ಸ್ವಾಗತಿಸುವ, ಲಿಂಗಭೇದವಿಲ್ಲದೆ ಎಲ್ಲಾ ಸದಸ್ಯರ ಕೊಡುಗೆಗಳನ್ನು ಗುರುತಿಸುವ ವೃತ್ತಿ ಎಂಬ ಮನ್ನಣೆಗೆ ಪಾತ್ರವಾಗಿದೆ ಎಂದು ಶ್ಲಾಘಿಸಿದ ಅವರು “ಸಶಸ್ತ್ರಪಡೆಗಳಲ್ಲಿ ಸಮಾನತೆಯೆಡೆಗಿನ ಈ ಮಹತ್ತರ ಜಿಗಿತ ಬಹುಸ್ತರದ ಪರಿಣಾಮ ಬೀರಲಿದೆ. ಇದು ಮಹಿಳೆಯರ ಬಗೆಗಿನ ಪುರುಷ ಪ್ರಧಾನ ಧೋರಣೆಯನ್ನು ತೊಡೆದುಹಾಕುತ್ತದೆ” ಎಂದು ಅವರು ಹೇಳಿದರು.

ಮಹಿಳೆಯರಿಗೆ ಪ್ರಮುಖ ಸ್ಥಾನ ಮತ್ತು ಕಮಾಂಡಿಂಗ್‌ ಹುದ್ದೆ ನೀಡುವುದು ಸಮಾಜದ ಎಲ್ಲಾ ಯುವತಿಯರಿಗೆ ಅವರು ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲಷ್ಟೇ ಅಲ್ಲದೆ ಯುದ್ಧರಂಗವನ್ನು ಮುನ್ನಡೆಸಬಹುದು ಎಂಬ ಸಂದೇಶ ನೀಡುತ್ತದೆ ಎಂಬುದಾಗಿ ಹೇಳಿದರು.

Related Stories

No stories found.
Kannada Bar & Bench
kannada.barandbench.com