ಉದ್ಯೋಗದಲ್ಲಿ ಮೀಸಲು ವಿಭಾಗದ ಅಭ್ಯರ್ಥಿಗಳೂ ಸೇರಿದಂತೆ ಎಲ್ಲರಿಗೂ ಸಾಮಾನ್ಯ (ಮುಕ್ತ) ವಿಭಾಗ ಮುಕ್ತವಾಗಿದೆ. ಮುಕ್ತ ವಿಭಾಗದಲ್ಲಿನ ಸೀಟುಗಳಿಗೆ ಎಲ್ಲರೂ ಅರ್ಹರಾಗಿದ್ದು, ಅರ್ಹತೆ (ಮೆರಿಟ್) ಪ್ರಧಾನವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಹೀಗಾಗಿ, ಕೊನೆಯ ಶ್ರೇಯಾಂಕಿತ ಸಾಮಾನ್ಯ ವರ್ಗದ ಅಭ್ಯರ್ಥಿಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ಹೆಚ್ಚು ಅರ್ಹತೆ ಹೊಂದಿರುವ ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸಾಮಾನ್ಯ ವರ್ಗದಡಿಯಲ್ಲಿ ಉದ್ಯೋಗ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಯು ಯು ಲಲಿತ್, ರವೀಂದ್ರ ಭಟ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ತ್ರಿಸದಸ್ಯ ಪೀಠವು, "ಮುಕ್ತ/ಸಾಮಾನ್ಯವರ್ಗದ ವಿಭಾಗದಲ್ಲಿ ಆಯ್ಕೆಯಾಗುವ ಯಾವುದೇ ಅಭ್ಯರ್ಥಿಯು ಇತರ ಲಭ್ಯ ಅಭ್ಯರ್ಥಿಗಳಿಗಿಂತ ಕಡಿಮೆ ಅರ್ಹತೆ ಹೊಂದಿದ್ದರೆ ಅದು ಸಮಾನತೆಯ ತತ್ವಗಳಿಗೆ ವಿರುದ್ಧವಾಗಲಿದೆ," ಎನ್ನುವ ಅಂಶವನ್ನು ಎತ್ತಿಹಿಡಿಯಿತು.
ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಕಾನ್‌ಸ್ಟೆಬಲ್ ನೇಮಕಾತಿ ಪ್ರಕ್ರಿಯೆಯಲ್ಲಿ, ಇತರೆ ಹಿಂದುಳಿದ ವರ್ಗ (ಒಬಿಸಿ)-ಮಹಿಳೆ ಮತ್ತು ಪರಿಶಿಷ್ಟ ಜಾತಿ (ಎಸ್‌ಸಿ)-ಮಹಿಳೆ ವಿಭಾಗದ ಅಡಿ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳ ಮೇಲ್ಮನವಿಯ ವಿಚಾರಣೆಯನ್ನು ನಡೆಸಿದ ಪೀಠ ಮೆಲಿನ ಅಂಶಗಳನ್ನು ಹೇಳಿತು.
ಸಾಮಾನ್ಯ ಅಭ್ಯರ್ಥಿಗಳ ವಿಭಾಗದಲ್ಲಿ ಕೊನೆಯದಾಗಿ ಆಯ್ಕೆಯಾಗಿದ್ದ ಅಭ್ಯರ್ಥಿಯ ಅಂಕವು 274.8928 ಆಗಿದ್ದು, ಕನಿಷ್ಠ 21 ಒಬಿಸಿ-ಮಹಿಳಾ ಅಭ್ಯರ್ಥಿಗಳು ಅದಕ್ಕಿಂತ ಹೆಚ್ಚಿನ ಅಂಕವನ್ನು ಪಡೆದಿದ್ದರೂ ಅವರನ್ನು ಸಂಬಂಧಪಟ್ಟ ಮೀಸಲಾತಿ ವಿಭಾಗದಲ್ಲಿ ಮಾತ್ರವೇ ಪರಿಗಣಿಸಿದ್ದರಿಂದ ಅವರೆಲ್ಲರೂ ಹುದ್ದೆಯಿಂದ ವಂಚಿತರಾಗಿದ್ದರು.
ಇದನ್ನು ಗಮನಿಸಿದ ನ್ಯಾಯಾಲಯವು, “ಮೀಸಲಾತಿಯು ಅದು ಲಂಬ ಅಥವಾ ಸಮತಳ ಯಾವುದೇ ಆಗಿರಲಿ, ಸಾರ್ವಜನಿಕ ಸೇವೆಯಲ್ಲಿ ಪ್ರತಿನಿಧಿತ್ವವನ್ನು ಕಲ್ಪಿಸಲು ಇರುವಂತಹದ್ದಾಗಿದೆ. ಆದರೆ, “ಅವುಗಳನ್ನು ಕಟ್ಟುನಿಟ್ಟಿನ “ಶ್ರೇಣಿ” (ಸ್ಲಾಟ್) ಎಂದು ಪರಿಗಣಿಸುವ ಮೂಲಕ ಸಾಮಾನ್ಯ ವಿಭಾಗದಡಿ ಪರಿಗಣಿಸುವ ಅರ್ಹತೆ ಇರುವ ಅಭ್ಯರ್ಥಿಯನ್ನು ನಿರ್ಬಂಧಿಸಬಾರದು ಎಂದಿತು. ಮುಂದುವರೆದು ಹಾಗೆ ಮಾಡಿದರೆ, “ಅಂತಹ ಪ್ರಯತ್ನವು, ಪ್ರತಿಯೊಂದು ಸಾಮಾಜಿಕ ವಿಭಾಗವೂ ತಮ್ಮ ಮೀಸಲಾತಿ ವಿಭಾಗಕ್ಕೇ ಸೀಮಿತಗೊಳ್ಳುವ ಮೂಲಕ ಅದು ಕೋಮುವಾದಿ ಮೀಸಲಾತಿಯಾಗಿ ಮಾರ್ಪಡುತ್ತದೆ, ಅರ್ಹತೆಯನ್ನು ನಗಣ್ಯವಾಗಿಸುತ್ತದೆ,” ಎಂದು ಅಭಿಪ್ರಾಯಪಟ್ಟಿತು.
ಅಂತಿಮವಾಗಿ ನ್ಯಾಯಾಲಯವು ಸಾಮಾನ್ಯ ವರ್ಗದ ಕೊನೆಯ ಅಭ್ಯರ್ಥಿ ಗಳಿಸಿರುವ 274.8928 ಅಂಕಗಳಿಗಿಂತ ಹೆಚ್ಚು ಅಂಕಗಳಿಸಿರುವ ‘ಓಬಿಸಿ ಮಹಿಳಾ ವರ್ಗ’ದಡಿ ಬರುವ ಎಲ್ಲ ಅಭ್ಯರ್ಥಿಗಳನ್ನೂ ‘ಸಾಮಾನ್ಯ ವರ್ಗ - ಮಹಿಳೆ’ಯಡಿ ಪರಿಗಣಿಸಿ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಕಾನ್ಸ್‌ಟೇಬಲ್‌ಗಳಾಗಿ ನೇಮಿಸಬೇಕು ಎಂದು ಆದೇಶಿಸಿತು. ಸಂಬಂಧಪಟ್ಟ ಅರ್ಹ ಅಭ್ಯರ್ಥಿಗಳಿಗೆ ನಾಲ್ಕು ವಾರದೊಳಗೆ ಈ ಕುರಿತು ಸೂಕ್ತ ಪತ್ರವನ್ನು ಕಳುಹಿಸಲು ಸೂಚಿಸಿತು.